ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ: ಕಠಿಣ ಸವಾಲು ಮೀರಿದ ಸಿಂಧು

7

ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ: ಕಠಿಣ ಸವಾಲು ಮೀರಿದ ಸಿಂಧು

Published:
Updated:
Deccan Herald

ಗುವಾಂಗ್ಜು: ಭಾರತದ ಪಿ.ವಿ. ಸಿಂಧು ಬುಧವಾರ ಆರಂಭವಾದ  ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಜಯಿಸಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಲ್ಲಿ ಸಿಂಧು 24–22, 21–15 ರಿಂದ ಹಾಲಿ ಚಾಂಪಿಯನ್  ಜಪಾನ್‌ನ ಅಕಾನೆ ಯಮಗುಚೆ ವಿರುದ್ಧ ಗೆದ್ದರು.27 ನಿಮಿಷಗಳ ಕಾಲ ನಡೆದ ಮೊದಲ ಗೇಮ್‌ ಜಿದ್ದಾಜಿದ್ದಿನಿಂದ ಕೂಡಿತ್ತು. ಆರಂಭದಿಂದಲೂ ಇಬ್ಬರ ನಡುವೆ ತುರುಸಿನ ಪೈಪೋಟಿ ನಡೆಯಿತು. 11–10ರಿಂದ ಯಮಗುಚಿ ಮುಂದಿದ್ದರು. ಈ ಹಂತದಲ್ಲಿ ಚುರುಕಿನ ಸ್ಮ್ಯಾಷ್‌ ಮತ್ತು ಸರ್ವ್‌ಗಳನ್ನು ಆಡಿದ ಸಿಂಧು 14–11ರ ಲೀಡ್ ಸಾಧಿಸಿದರು. ಮತ್ತೆ ಪುಟಿದೆದ್ದ ಯಮಗುಚಿ ಕೂಡ ದಿಟ್ಟ ಸ್ಪರ್ಧೆ ಒಡ್ಡಿದರು. 19–19 ರಿಂದ ಸಮಬಲ ಸಾಧಿಸುವಲ್ಲಿ ಸಫಲರಾದರು. ನಂತರವೂ ಇಬ್ಬರ ಹಣಾಹಣಿ ರಂಗೇರಿತು.  ಗೇಮ್ ಟೈಬ್ರೇಕರ್‌ಗೆ ಹೋಯಿತು. 22–22 ಆಗಿದ್ದ ಸಂದರ್ಭದಲ್ಲಿ ಯಮಗುಚಿ ಮಾಡಿದ ತಪ್ಪು ತುಟ್ಟಿಯಾಯಿತು. ಇದರ ಲಾಭ ಪಡೆದ ಸಿಂಧು ಗೆಲುವಿನ ಹೆಜ್ಜೆ ಇಟ್ಟರು.

ಬಹಳಷ್ಟು ದಣಿದಂತೆ ಕಂಡ ಜಪಾನ್ ಆಟಗಾರ್ತಿ ಎರಡನೇ ಗೇಮ್‌ ಆರಂಭದಲ್ಲಿ ತುಸು ಪೈಪೋಟಿ ನೀಡಿದರು. ಆದರೆ ಸಿಂಧು ಅವರ ವೇಗದ ಆಟದ ಮುಂದೆ ನಿಸ್ತೇಜರಾದರು. ಇದರಿಂದಾಗಿ ಹೈದರಾಬಾದ್ ಹುಡುಗಿ ಪಂದ್ಯ ಜಯಿಸಿದರು.

ಸಮೀರ್‌ಗೆ ಹಿನ್ನಡೆ: ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಸಮೀರ್‌ ವರ್ಮ, ಅಗ್ರಶ್ರೇಯಾಂಕಿತ ಅಟಗಾರ ಕೆಂಟೊ ಮೊಮೊಟೊ ಎದುರು ನಿರಾಶೆ ಅನುಭವಿಸಿದರು.  ಸಮೀರ್‌, 18–21, 6–21 ರಿಂದ ಮೊಮೊಟೊ ಎದುರು ತೀವ್ರ ಹಿನ್ನಡೆ ಅನುಭವಿಸಿದರು.  

ಸಯ್ಯದ್‌ ಮೋದಿ ಅಂತರರಾಷ್ಟ್ರೀಯ ಟೂರ್ನಿ ವಿಜೇತರಾದ ಸಮೀರ್‌, ‘ಬಿ’ ಗುಂಪಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಕೆಂಟಾಫೊನ್‌ ವಾಂಗ್‌ಚಾರೊಯಿನ್‌ ಹಾಗೂ ಇಂಡೋನೇಷ್ಯಾದ ಟಾಮಿ ಸುಗಿಯಾರ್ತೊ ಅವರನ್ನು ಎದುರಿಸಲಿದ್ದಾರೆ.  

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !