ಸಂಸದ ನಳಿನ್‌ ವಿರುದ್ಧ ಸಿಪಿಎಂ ಪ್ರತಿಭಟನೆ

7
ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಿರುವ ಆರೋಪ

ಸಂಸದ ನಳಿನ್‌ ವಿರುದ್ಧ ಸಿಪಿಎಂ ಪ್ರತಿಭಟನೆ

Published:
Updated:

ಮಂಗಳೂರು: ಸಂಸದ ನಳಿನ್‌ಕುಮಾರ್‌ ಕಟೀಲ್‌ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿ, ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಿಪಿಎಂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯನ್ನು ತೀವ್ರವಾಗಿ ಕಾಡುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ನಳಿನ್‌ಕುಮಾರ್‌ ಆಸಕ್ತಿ ತೋರುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಂಸದರ ಕಾರ್ಯವೈಖರಿ ವಿರುದ್ಧ ಘೋಷಣೆಗಳನ್ನು ಕೂಗಿ, ಜಿಲ್ಲೆಯ ಅಭಿವೃದ್ಧಿಯತ್ತ ಗಮನಹರಿಸುವಂತೆ ಆಗ್ರಹಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಕೆ.ಆರ್‌.ಶ್ರೀಯಾನ್‌, ‘ನಳಿನ್‌ಕುಮಾರ್‌ ಎರಡು ಅವಧಿಗೆ ಜಿಲ್ಲೆಯ ಸಂಸದರಾಗಿದ್ದಾರೆ. ಪಂಪ್‌ವೆಲ್‌ ವೃತ್ತದ ಮೇಲುಸೇತುವೆ ಕಾಮಗಾರಿಯನ್ನು ಎಂಟು ವರ್ಷಗಳಾದರೂ ಮುಗಿಸಲು ಸಾಧ್ಯವಾಗಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕಿದ್ದ ಅವರು, ರಾಮಮಂದಿರ, ಹಿಂದುತ್ವ, ಶಬರಿಮಲೆ ವಿಚಾರಗಳ ಹಿಂದೆ ಓಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವೀಸ್‌ ರಸ್ತೆಗಳ ಕೆಲಸ ಪೂರ್ಣಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಗರದ ಜನರಿಂದ ಅಕ್ರಮವಾಗಿ ಟೋಲ್‌ ವಸೂಲಿ ಮಾಡುತ್ತಿದೆ. ಅದನ್ನು ತಡೆಯಬೇಕಿದ್ದ ಸಂಸದರು, ಹಾರಿಕೆಯ ಮಾತುಗಳ ಮೂಲಕ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಬೀಡಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮರಳಿನ ಕೊರತೆಯಿಂದ ಸಾವಿರಾರು ಮಂದಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ದುಡಿಮೆಯೇ ಇಲ್ಲವಾಗಿದೆ. ಕೇಂದ್ರ ಸರ್ಕಾರದ ಹಂತದಲ್ಲಿ ಈ ಕುರಿತು ವ್ಯವಹರಿಸಿ, ನ್ಯಾಯ ದೊರಕಿಸುವ ಜವಾಬ್ದಾರಿ ನಳಿನ್‌ಕುಮಾರ್‌ ಮೇಲಿತ್ತು. ಈ ವಿಚಾರಗಳಲ್ಲಿ ಅವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಬಿಜೆಪಿಯ ಕೋಮುವಾದಿ ರಾಜಕೀಯಕ್ಕೆ ಸೀಮಿತವಾಗಿರುವ ಅವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಮಂಡಳಿ ಕಾರ್ಯದರ್ಶಿ ವಸಂತ ಆಚಾರಿ, ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಜೆ.ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಮುಖಂಡರಾದ ಯು.ಬಿ.ಲೋಕಯ್ಯ. ಕೃಷ್ಣಪ್ಪ ಸಾಲ್ಯಾನ್ ಮಾತನಾಡಿದರು.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರಾದ ವಾಸುದೇವ ಉಚ್ಚಿಲ್, ಜಯಂತಿ ಶೆಟ್ಟಿ, ರಾಬರ್ಟ್ ಡಿಸೋಜ, ಸದಾಶಿವ ದಾಸ್, ದಯಾನಂದ ಶೆಟ್ಟಿ, ಜಯಂತ ನಾಯ್ಕ್, ರಾಮಣ್ಣ ವಿಟ್ಲ , ಕೆ.ಯಾದವ ಶೆಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !