ಮೇವಿನ ಸಮಸ್ಯೆಗೆ ‘ಮೇವು ಆಂದೋಲನ’ದ ಮದ್ದು

7
ನೀರಾವರಿ ಸೌಲಭ್ಯವುಳ್ಳ ರೈತರ ಜಮೀನಿನಲ್ಲಿ ಮೇವು ಬೆಳೆಯಲು ಜಿಲ್ಲಾಡಳಿತದ ಕ್ರಮ

ಮೇವಿನ ಸಮಸ್ಯೆಗೆ ‘ಮೇವು ಆಂದೋಲನ’ದ ಮದ್ದು

Published:
Updated:
Deccan Herald

ಕೋಲಾರ: ರಾಜ್ಯ ಸರ್ಕಾರ ಜಿಲ್ಲೆಯ 5 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿದ್ದು, ಬೇಸಿಗೆಯಲ್ಲಿ ಎದುರಾಗಬಹುದಾದ ಮೇವಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಹಸಿರು ಮೇವು ಆಂದೋಲನ ಹಮ್ಮಿಕೊಂಡಿದೆ.

ಹೈನೋದ್ಯಮವು ಜಿಲ್ಲೆಯ ಜೀವನಾಡಿಯಾಗಿದ್ದು, ಹಾಲು ಉತ್ಪಾದನೆಯಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಕೋಚಿಮುಲ್‌) ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ರೈತರು ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆ ಅವಲಂಬಿಸಿದ್ದು, ಹೈನೋದ್ಯಮವು ರೈತರ ಪ್ರಮುಖ ಆದಾಯ ಮೂಲವಾಗಿದೆ.

ಜಿಲ್ಲೆಯಲ್ಲಿ 2,74,912 ಜಾನುವಾರುಗಳಿದ್ದು, ಪ್ರತಿ ಜಾನುವಾರಿಗೆ ದಿನಕ್ಕೆ 15 ಕೆ.ಜಿ ಹಸಿರು ಮೇವು ಹಾಗೂ 5 ಕೆ.ಜಿ ಒಣ ಹುಲ್ಲು ಅಗತ್ಯವಿದೆ. ವಾರಕ್ಕೆ 7,299 ಟನ್‌ ಮೇವು ಬೇಕಿದೆ. ಈ ಬಾರಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದ್ದು, ಜಿಲ್ಲೆಯ ಬಹುತೇಕ ಕಡೆ ಬೆಳೆ ನಷ್ಟವಾಗಿದೆ. ಪ್ರಮುಖ ಮೇವು ಬೆಳೆಗಳಾದ ರಾಗಿ, ಜೋಳ, ಅವರೆ ಹಾಗೂ ಹುರುಳಿ ಬೆಳೆ ಸಹ ನಾಶವಾಗಿದೆ.

ಜಿಲ್ಲೆಯಲ್ಲಿ ಸದ್ಯ 98 ಸಾವಿರ ಟನ್‌ ಒಣ ಮೇವು ದಾಸ್ತಾನಿದ್ದು, ಈ ಮೇವು 2019ರ ಫೆಬ್ರುವರಿ ಅಂತ್ಯದವರೆಗೆ ಸಾಕಾಗಲಿದೆ. ನಂತರ ಮಾರ್ಚ್‌ನಿಂದ ಮೇ ತಿಂಗಳವರೆಗೆ ಮೇವಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ 12 ವಾರಗಳಿಗೆ ಸುಮಾರು 88 ಸಾವಿರ ಟನ್‌ ಮೇವು ಅಗತ್ಯವೆಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಅಂದಾಜಿಸಿದೆ.

ಕೆ.ಸಿ ವ್ಯಾಲಿ ವ್ಯಾಪ್ತಿ: ಮೇವಿನ ಸಮಸ್ಯೆಯ ಮುನ್ಸೂಚನೆ ಅರಿತಿರುವ ಜಿಲ್ಲಾಡಳಿತವು ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಭರ್ತಿಯಾಗಿರುವ ಕೆರೆಗಳ ಸುತ್ತಮುತ್ತಲಿನ ಜಮೀನುಗಳಲ್ಲಿ ಹಸಿರು ಮೇವು ಬೆಳೆಸಲು ಯೋಜನೆ ರೂಪಿಸಿದೆ. ಮತ್ತೊಂದೆಡೆ ನೀರಾವರಿ ಸೌಲಭ್ಯವಿರುವ ರೈತರಿಗೆ ಮೇವಿನ ಕಿಟ್‌ ವಿತರಿಸಿ ಮೇವು ಬೆಳೆಸಲು ಉತ್ತೇಜನ ನೀಡುತ್ತಿದೆ.

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಮೂಲಕ ಈಗಾಗಲೇ 59 ಸಾವಿರ ಮೇವಿನ ಮಿನಿ ಕಿಟ್‌ ವಿತರಿಸಲಾಗಿದ್ದು, ಮೇವು ಕೊಯ್ಲಿನ ಹಂತಕ್ಕೆ ಬಂದಿದೆ. ಹೆಚ್ಚುವರಿಯಾಗಿ 12,500 ಎಕರೆಯಲ್ಲಿ ಹಸಿರು ಮೇವು ಬೆಳೆಯಲು ನಿರ್ಧರಿಸಲಾಗಿದೆ.

ರೈತರೊಂದಿಗೆ ಕರಾರು: ಕೊಳವೆ ಬಾವಿ ನೀರು ಲಭ್ಯವಿರುವ ರೈತರ ಜಮೀನುಗಳಲ್ಲಿ ಹಾಗೂ ಕೆಲವೆಡೆ ಸರ್ಕಾರಿ ಜಮೀನುಗಳಲ್ಲೂ ಹಸಿರು ಮೇವು ಬೆಳೆಸಲು ಉದ್ದೇಶಿಸಲಾಗಿದೆ. ಕೋಚಿಮುಲ್‌ ವ್ಯಾಪ್ತಿಯ ಪ್ರಾಥಮಿಕ ಹಾಲು ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ನೀರಾವರಿ ಸೌಲಭ್ಯವುಳ್ಳ ರೈತರಿಗೆ ಮೇವು ಬೆಳೆಯಲು ಉಚಿತವಾಗಿ ಆಫ್ರಿಕನ್‌ ಟಾಲ್‌ ಮತ್ತು ಕೆಂಪು ಮುಸುಕಿನ ಜೋಳದ ಬಿತ್ತನೆ ಬೀಜ ವಿತರಿಸಲು ಸಿದ್ಧತೆ ನಡೆದಿದೆ.

ನೀರಾವರಿ ಸೌಲಭ್ಯವುಳ್ಳ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಮೇವನ್ನು ಬೇರೆಯವರಿಗೆ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡದಂತೆ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಅವರೊಂದಿಗೆ ಕರಾರು ಮಾಡಿಕೊಳ್ಳಲಿದೆ. ರೈತರ ಜಾನುವಾರುಗಳಿಗೆ ಸಾಕಾಗಿ ಉಳಿದ ಮೇವನ್ನು ಇಲಾಖೆಯು ಭೂರಹಿತ ಹೈನುದಾರರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಿದೆ.

ತಾಲ್ಲೂಕು         ದನಗಳು       ಎಮ್ಮೆಗಳು
ಕೋಲಾರ        38,668      19,982
ಶ್ರೀನಿವಾಸಪುರ   45,090      10,814
ಮುಳಬಾಗಿಲು    62,332      4,735
ಬಂಗಾರಪೇಟೆ    55,091      4,319
ಮಾಲೂರು       27,855      6,026

ಅಂಕಿ ಅಂಶ.....
* 2,74,912 ಜಾನುವಾರು ಜಿಲ್ಲೆಯಲ್ಲಿವೆ
* 98 ಸಾವಿರ ಟನ್‌ ಒಣ ಮೇವು ದಾಸ್ತಾನು
* 7,299 ಟನ್‌ ಮೇವು ವಾರದ ಅಗತ್ಯ
* 12,500 ಎಕರೆಯಲ್ಲಿ ಮೇವು ಬೆಳೆಯಲು ನಿರ್ಧಾರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !