ಎಸ್‌.ಪಿ.ಆನಂದ್‌ ವಿರುದ್ಧ ಜಿಲ್ಲಾಧಿಕಾರಿಗೆ ದೂರು

7

ಎಸ್‌.ಪಿ.ಆನಂದ್‌ ವಿರುದ್ಧ ಜಿಲ್ಲಾಧಿಕಾರಿಗೆ ದೂರು

Published:
Updated:

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಕಾಯಂ ಪೌರಕಾರ್ಮಿಕನಾಗಿರುವ ಎಸ್‌.ಪಿ.ಆನಂದ್‌ ದಲಿತ ಸಂಘರ್ಷ ಸಮಿತಿಯ ಹೆಸರಿನಲ್ಲಿ ಸರ್ಕಾರಿ ನೌಕರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಿಕರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

‘ಆನಂದ್‌ ಮಹಾನಗರ ಪಾಲಿಕೆಯಲ್ಲಿ ಕಾಯಂ ಪೌರಕಾರ್ಮಿಕ ಹುದ್ದೆಯಲ್ಲಿದ್ದು, ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಹೋಗಿ ಅಧಿಕಾರಿಗಳು, ನೌಕರರನ್ನು ಬೆದರಿಸುತ್ತಿದ್ದಾರೆ. ಪೊಲೀಸ್‌ ಇಲಾಖೆಯಿಂದ ನಡೆಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಗಳಲ್ಲಿ ಸುಳ್ಳು ದೂರುಗಳನ್ನು ನೀಡಿ, ಕಿರುಕುಳ ನೀಡುತ್ತಿದ್ದಾರೆ’ ಎಂದು ಆದ್ಯಪಾಡಿ ಪದವು ನಿವಾಸಿ ಸತೀಶ್‌ ಮತ್ತು ಇತರೆ 46 ಮಂದಿ ದೂರಿನಲ್ಲಿ ಆರೋಪಿಸಿದ್ದಾರೆ.

ಈ ವ್ಯಕ್ತಿಯು ಇತ್ತೀಚೆಗೆ ಕಂದಾವರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೋಹಿಣಿ ವಿರುದ್ಧವೂ ಸುಳ್ಳು ದೂರು ನೀಡಿದ್ದರು. ರೋಹಿಣಿ ಕೂಡ ಪರಿಶಿಷ್ಟ ಜಾತಿಯವರಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ದೂರು ನೀಡಿದ ಬಳಿಕ ಪಂಚಾಯಿತಿ ಕಚೇರಿಗೂ ಭೇಟಿ ನೀಡಿದ್ದಾರೆ. ಈ ಎಲ್ಲವೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್‌ಪಿಯವರ ತನಿಖೆಯಲ್ಲಿ ಗೊತ್ತಾಗಿದೆ. ಈ ರೀತಿ ಸರ್ಕಾರಿ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಆನಂದ್‌ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಸರ್ಕಾರದಿಂದ ವೇತನ ಪಡೆಯುವ ಆನಂದ್‌, ಕೆಲಸಕ್ಕೆ ಹಾಜರಾಗದೇ ಅಧಿಕಾರಿಗಳು, ನೌಕರರ ವಿರುದ್ಧ ಸುಳ್ಳು ದೂರು ನೀಡುವುದರಲ್ಲೇ ಮಗ್ನರಾಗಿರುತ್ತಾರೆ. ಅಧಿಕಾರಿಗಳನ್ನು ಬೆದರಿಸಿ, ಬ್ಲಾಕ್‌ಮೇಲ್‌ ಮಾಡುತ್ತಾರೆ. ಇದಕ್ಕೆ ಮಹಾನಗರ ಪಾಲಿಕೆ ಕದ್ರಿ ವಾರ್ಡ್‌ನ ಆರೋಗ್ಯ ನಿರೀಕ್ಷಕರ ಬೆಂಬಲವೂ ಇದೆ. ಪೌರಕಾರ್ಮಿಕ ಕೆಲಸಕ್ಕೆ ಹಾಜರಾಗದಿದ್ದರೂ ಆತನ ವಿರುದ್ಧ ವರದಿ ನೀಡದ ಆರೋಗ್ಯ ನಿರೀಕ್ಷಕರ ಮೇಲೂ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾ ಸಮಿತಿ ವಿಸರ್ಜನೆ: ‘ಆನಂದ್ ವಿರುದ್ಧ ನಮಗೂ ಹಲವು ದೂರುಗಳು ಬಂದಿದ್ದವು. ಅವರನ್ನು ಸಂಘಟನೆಯಿಂದ ಹೊರಗಿಟ್ಟಿದ್ದೇವೆ. ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯನ್ನು ವಿಸರ್ಜಿಸಿ ಆರು ತಿಂಗಳಾಗಿದೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕ ಆರ್‌.ಮೋಹನ್‌ ರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !