ಹೊಸ ಅಂಗಣದಲ್ಲಿ ಮುನ್ನಡೆಯ ನಿರೀಕ್ಷೆ

7
ಭಾರತ–ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಇಂದಿನಿಂದ

ಹೊಸ ಅಂಗಣದಲ್ಲಿ ಮುನ್ನಡೆಯ ನಿರೀಕ್ಷೆ

Published:
Updated:
Deccan Herald

ಪರ್ತ್‌: ಹೊಸ ಅಂಗಣದಲ್ಲಿ ಜಯದ ನಿರೀಕ್ಷೆಯೊಂದಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಶುಕ್ರವಾರ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯಲಿವೆ. ನಾಲ್ಕು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 31 ರನ್‌ಗಳಿಂದ ಗೆದ್ದಿರುವ ಭಾರತ ವಿಶ್ವಾಸದಲ್ಲಿದ್ದು ಸಮಬಲ ಸಾಧಿಸುವ ಹುಮ್ಮಸ್ಸಿನಲ್ಲಿ ಆತಿಥೇಯ ತಂಡವಿದೆ.

47 ವರ್ಷ ವಿವಿಧ ಮಾದರಿಯ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ವಾಕಾ ಕ್ರೀಡಾಂಗಣ ನೆನಪಿನಂಗಳಕ್ಕೆ ಸರಿದಿದ್ದು ಸಮೀಪದಲ್ಲೇ ನಿರ್ಮಿಸಿರುವ ಆಪ್ಟಸ್ ಎಂಬ ಹೆಸರಿನ ಕ್ರೀಡಾಂಗಣ ಮೊದಲ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಸ್ವಾನ್ ನದಿಯ ಸಮೀಪದಲ್ಲೇ ಇರುವ ಅಂಗಣದ ಪಿಚ್‌ನಲ್ಲಿ ಹಸಿರಿನಿಂದ ಕೂಡಿದ್ದು ವೇಗಿಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ಮಿಂಚಿದ್ದ ಭಾರತದ ವೇಗಿಗಳು ಇಲ್ಲೂ ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆಯಲ್ಲಿದ್ದಾರೆ. 

ಬೌಲರ್‌ಗಳ ಸ್ವರ್ಗ ಎಂದೆನಿಸಿದ್ದ ವಾಕಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಕಳೆದ ಎರಡು ದಶಕಗಳಲ್ಲಿ ನಾಲ್ಕು ಪಂದ್ಯಗಳನ್ನು ಮಾತ್ರ ಸೋತಿತ್ತು. ಭಾರತ 2008ರಲ್ಲಿ ಆ ಅಂಗಣದಲ್ಲಿ ಆತಿಥೇಯರನ್ನು 72 ರನ್‌ಗಳಿಂದ ಮಣಿಸಿತ್ತು. ನಾಲ್ಕು ವರ್ಷಗಳ ಹಿಂದೆ ನಡೆದ ಪಂದ್ಯದಲ್ಲಿ 37 ರನ್‌ಗಳಿಂದ ಸೋತಿತ್ತು.

ಹಳೆಯ ಲೆಕ್ಕಾಚಾರಗಳನ್ನು ಬದಿಗಿರಿಸಿ ಹೊಸ ಅಂಗಣದಲ್ಲಿ ಹೊಸ ಅಧ್ಯಾಯ ಆರಂಭಿಸಲು ಆಸ್ಟ್ರೇಲಿಯಾ ಸಿದ್ಧವಾಗಿದೆ. ಅಡಿಲೇಡ್‌ನಲ್ಲಿ ಅನುಭವಿಸಿದ ಸೋಲಿಗೆ ಕಾರಣಗಳನ್ನು ಹುಡುಕುತ್ತಿರುವ ಆತಿಥೇಯ ತಂಡದ ನಾಯಕ ಟಿಮ್‌ ಪೇನ್‌ ಅವರು ಆಪ್ಟಸ್‌ನಲ್ಲಿ ಹೊಸ ತಂತ್ರಗಳನ್ನು ಪ್ರಯೋಗಿಸಲು ಸಜ್ಜಾಗಿದ್ದಾರೆ.

ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿ ನಿಷೇಧಕ್ಕೆ ಒಳಗಾಗಿರುವ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಅನುಪಸ್ಥಿತಿ ಆಸ್ಟ್ರೇಲಿಯಾವನ್ನು ಕಾಡುತ್ತಿದೆ. ಮೊದಲ ಪಂದ್ಯದಲ್ಲಿ ತಂಡ 235 ಮತ್ತು 291 ರನ್‌ಗಳಿಗೆ ಪತನ ಕಂಡಿತ್ತು. ಶಾನ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್‌ ಅವರಿಗೆ ಮಾತ್ರ ಅರ್ಧಶತಕ ಗಳಿಸಲು ಸಾಧ್ಯವಾಗಿತ್ತು. ತಂಡದ ಪ್ರಮುಖ ಬೌಲರ್‌ಗಳು ಕೂಡ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರುತ್ತಿಲ್ಲ.

ರೋಹಿತ್ ಶರ್ಮಾ, ಅಶ್ವಿನ್ ಅಲಭ್ಯ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮತ್ತು ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಗಾಯದ ಸಮಸ್ಯೆಯಿಂದಾಗಿ ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ರೋಹಿತ್ ಮೊದಲ ಪಂದ್ಯದಲ್ಲಿ 37 ಮತ್ತು ಒಂದು ರನ್ ಗಳಿಸಿದ್ದರು. ಅಶ್ವಿನ್‌ ಒಟ್ಟು ಆರು ವಿಕೆಟ್ ಉರುಳಿಸಿದ್ದರು.

ಮೊಹಮ್ಮದ್‌ ಶಮಿ, ಜಸ್‌ಪ್ರೀತ್ ಬೂಮ್ರಾ ಮತ್ತು ಇಶಾಂತ್ ಶರ್ಮಾ ಮೊದಲ ‍ಪಂದ್ಯದಲ್ಲಿ ಪರಿಣಾಮಕಾರಿ ದಾಳಿ ಸಂಘಟಿಸಿದ್ದರು. ಪರ್ತ್‌ನಲ್ಲೂ ಈ ಮೂವರು ಉತ್ತಮ ಕಾಣಿಕೆ ನೀಡುವ ಭರವಸೆ ಇದೆ.

ಆತಂಕವಿಲ್ಲ; ರೋಮಾಂಚನವಾಗಿದೆ

‘ಇಲ್ಲಿನ ಪಿಚ್ ಬಗ್ಗೆ ನಮಗೇನೂ ಆತಂಕವಿಲ್ಲ. ವಾಸ್ತವದಲ್ಲಿ ಈ ಪಿಚ್‌ ನೋಡಿ ಖುಷಿಯಾಗಿದೆ; ತಂಡ ರೋಮಾಂಚನಗೊಂಡಿದೆ...’ –ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಗುರುವಾರ ಆಡಿದ ಮಾತು ಇದು.

‘ಪಿಚ್‌ ವೇಗಿಗಳಿಗೆ ಅನುಕೂಲ ಆಗುವಂತೆ ತೋರುತ್ತಿದೆ. ಆಸ್ಟ್ರೇಲಿಯಾ ಇದರಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಮುಂದಾಗದು. ಇಲ್ಲಿ ನಮ್ಮ ಬೌಲರ್‌ಗಳು ಉತ್ತಮ ಸಾಮರ್ಥ್ಯ ಮೆರೆಯುವ ಭರವಸೆ ಇದೆ. ಬ್ಯಾಟಿಂಗ್‌ನಲ್ಲಿ ನಮಗೆ ನಾವೇ ಸವಾಲು ಹಾಕಿ ಆಡಬೇಕಾಗಿದೆ’ ಎಂದು ಕೊಹ್ಲಿ ನುಡಿದರು.

***

ಪಿಚ್‌ ಉತ್ತಮವಾಗಿದೆ. ಇದರ ನಿಜವಾದ ಗುಣ ಏನೆಂದು ಶುಕ್ರವಾರ ಬೆಳಿಗ್ಗೆಯಷ್ಟೇ ಹೇಳಲು ಸಾಧ್ಯ. ಇಲ್ಲಿ ಉತ್ತಮ ಆರಂಭ ಕಾಣುವುದು ಮುಖ್ಯ.

–ಟಿಮ್ ಪೇನ್‌, ಆಸ್ಟ್ರೇಲಿಯಾ ತಂಡದ ನಾಯಕ

***

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜ, ಕುಲದೀಪ್ ಯಾದವ್‌, ಭುವನೇಶ್ವರ ಕುಮಾರ್‌, ಮೊಹಮ್ಮದ್ ಶಮಿ, ರಿಷಭ್ ಪಂತ್‌, ಪಾರ್ಥಿವ್ ಪಟೇಲ್‌, ಚೇತೇಶ್ವರ ಪೂಜಾರ, ಕೆ.ಎಲ್‌.ರಾಹುಲ್‌, ಇಶಾಂತ್ ಶರ್ಮಾ, ಪೃಥ್ವಿ ಶಾ, ಹನುಮ ವಿಹಾರಿ, ಮುರಳಿ ವಿಜಯ್‌, ಉಮೇಶ್ ಯಾದವ್‌.

ಆಸ್ಟ್ರೇಲಿಯಾ: ಟಿಮ್ ಪೇನ್‌ (ನಾಯಕ) ಮಾರ್ಕಸ್ ಹ್ಯಾರಿಸ್‌, ಆ್ಯರನ್ ಫಿಂಚ್‌, ಉಸ್ಮಾನ್ ಖ್ವಾಜಾ, ಶಾನ್‌ ಮಾರ್ಷ್‌, ಟ್ರಾವಿಸ್ ಹೆಡ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌, ಜೋಶ್ ಹ್ಯಾಜಲ್‌ವುಡ್‌, ಪ್ಯಾಟ್‌ ಕುಮಿನ್ಸ್‌, ನೇಥನ್ ಲಯನ್‌, ಮಿಷೆಲ್‌ ಸ್ಟಾರ್ಕ್‌.

ಪಂದ್ಯ ಆರಂಭ: ಬೆಳಿಗ್ಗೆ 7.50 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !