ಕ್ವಾರ್ಟರ್‌ನಲ್ಲಿ ಎಡವಿದ ಭಾರತ

7
ನೆದರ್ಲೆಂಡ್ಸ್‌ಗೆ ಜಯ: ಅಂಗಳದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆತಿಥೇಯ ಆಟಗಾರರು

ಕ್ವಾರ್ಟರ್‌ನಲ್ಲಿ ಎಡವಿದ ಭಾರತ

Published:
Updated:
Deccan Herald

ಭುವನೇಶ್ವರ: ತವರಿನ ಅಭಿಮಾನಿಗಳ ಎದುರು ವಿಶ್ವಕಪ್‌ ಟ್ರೋಫಿ ಜಯಿಸುವ ಮಹದಾಸೆ ಹೊಂದಿದ್ದ ಭಾರತಕ್ಕೆ ಗುರುವಾರ ಆಘಾತ ಎದುರಾಯಿತು.

ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಮನಪ್ರೀತ್ ಸಿಂಗ್‌ ಬಳಗ 1–2 ಗೋಲುಗಳಿಂದ ನೆದರ್ಲೆಂಡ್ಸ್‌ಗೆ ಶರಣಾಯಿತು.

ಲೀಗ್‌ ಹಂತದಲ್ಲಿ ಅಮೋಘ ಆಟ ಆಡಿ ‘ಸಿ’ ಗುಂ‍ಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದ ಆತಿ ಥೇಯರು, ನೆದರ್ಲೆಂಡ್ಸ್‌ ತಂಡವನ್ನು ಸುಲಭವಾಗಿ ಸೋಲಿಸಲಿದ್ದಾರೆ ಎಂದೇ ಭಾವಿಸಲಾಗಿತ್ತು. ಹಾಕಿ ಪ್ರಿಯರ ಈ ನಿರೀಕ್ಷೆ ಹುಸಿಯಾಯಿತು.

ಮೊದಲ ಕ್ವಾರ್ಟರ್‌ನ ಮೊದಲ ಹತ್ತು ನಿಮಿಷಗಳಲ್ಲಿ ಸಮಬಲದ ಪೈಪೋಟಿ ಕಂಡುಬಂತು. 11ನೇ ನಿಮಿಷದಲ್ಲಿ ಬಿಲ್ಲಿ ಬೇಕರ್ಸ್‌ ಬಳಗಕ್ಕೆ ಖಾತೆ ತೆರೆಯುವ ಅವಕಾಶ ಸಿಕ್ಕಿತ್ತು. ಆದರೆ ಜೆರೋನ್‌ ಹರ್ಟ್‌ಬರ್ಗರ್‌ ಅವರ ‘ರಿವರ್ಸ್‌ ಹಿಟ್‌’ ಪ್ರಯತ್ನ ವಿಫಲವಾಯಿತು.

ಇದರ ಬೆನ್ನಲ್ಲೇ ಆಕಾಶ್‌ದೀಪ್‌ ಸಿಂಗ್‌, ಗೋಲು ಗಳಿಸಿ ಕ್ರೀಡಾಂಗಣದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು. 12ನೇ ನಿಮಿಷದಲ್ಲಿ ಆತಿಥೇಯರಿಗೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ಅವಕಾಶದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ‘ಫ್ಲಿಕ್‌’ ಮಾಡಿದ ಚೆಂಡನ್ನು ನೆದರ್ಲೆಂಡ್ಸ್‌ ತಂಡದ ಗೋಲ್‌ಕೀಪರ್‌ ಪಿರ್ಮಿನ್‌ ಬ್ಲೇಕ್‌ ಆಕರ್ಷಕ ರೀತಿಯಲ್ಲಿ ತಡೆದರು. ಪಿರ್ಮಿನ್‌ ಅವರ ಕಾಲಿಗೆ ತಾಗಿ ತಮ್ಮತ್ತ ಬಂದ ಚೆಂಡನ್ನು ಆಕಾಶ್‌ದೀಪ್‌ ಗುರಿ ಸೇರಿಸಿ ಸಂಭ್ರಮಿಸಿದರು.

ಮೊದಲ ಕ್ವಾರ್ಟರ್‌ನ ಆಟ ಮುಗಿಯಲು ಕೆಲವು ಸೆಕೆಂಡುಗಳು ಬಾಕಿ ಇದ್ದಾಗ ನೆದರ್ಲೆಂಡ್ಸ್‌ ತಂಡ ಸಮಬಲ ಸಾಧಿಸಿತು.

ಭಾರತದ ರಕ್ಷಣಾ ವಿಭಾಗದ ಆಟ ಗಾರರನ್ನು ವಂಚಿಸಿ ಚೆಂಡಿನೊಂದಿಗೆ  ಆವರಣ ಪ್ರವೇಶಿಸಿದ ಥಿಯರಿ ಬ್ರಿಂಕ್‌ಮನ್‌, ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಸೇರಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಯಾರಿಗೂ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ.

ದ್ವಿತೀಯಾರ್ಧದಲ್ಲಿ ಭಾರತದ ಆಟಗಾರರಿಗೆ ಗೋಲು ಗಳಿಸುವ ಹಲವು ಅವಕಾಶಗಳು ಸಿಕ್ಕಿದ್ದವು. ಇವುಗಳನ್ನು ಸದುಪಯೋಗಪಡಿಸಿಕೊಳ್ಳಲು ಮನ ಪ್ರೀತ್‌ ಪಡೆ ವಿಫಲವಾಯಿತು.

ನಿರ್ಣಾಯಕ ಎನಿಸಿದ್ದ ನಾಲ್ಕನೇ ಕ್ವಾರ್ಟರ್‌ನ ಆರಂಭದಲ್ಲಿ ನೆದರ್ಲೆಂಡ್ಸ್‌ಗೆ ಯಶಸ್ಸು ಒಲಿಯಿತು. 50ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ವ್ಯಾನ್‌ ಡರ್‌ ವೀರ್‌ಡನ್‌ ಮಿಂಕ್‌ ಸಂಭ್ರಮಿಸಿದರು.

ಇದರ ಬೆನ್ನಲ್ಲೇ ಆತಿಥೇಯರಿಗೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ಅವಕಾಶ ವನ್ನು ಚಿಂಗ್ಲೆನ್‌ಸನಾ ಸಿಂಗ್‌ ಕೈಚೆಲ್ಲಿದರು. ಕೊನೆಯ ನಾಲ್ಕು ನಿಮಿಷಗಳ ಆಟ ಬಾಕಿ ಇದ್ದಾಗ ಭಾರತದ ಕೋಚ್‌ ತಂಡದಲ್ಲಿ ಬದಲಾವಣೆ ಮಾಡಿದರು. ಅವರು ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಅವರ ಬದಲು ಇನ್ನೊಬ್ಬ ಆಟಗಾರನನ್ನು ಅಂಗಳಕ್ಕಿಳಿಸಿದರು. ಈ ತಂತ್ರ ಫಲ ನೀಡಲಿಲ್ಲ.

58ನೇ ನಿಮಿಷದಲ್ಲಿ ನೆದರ್ಲೆಂಡ್ಸ್‌ ಮತ್ತೊಂದು ಪೆನಾಲ್ಟಿ ಕಾರ್ನರ್‌ ಪಡೆದಿತ್ತು. ಈ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಲು ಬೇಕರ್ಸ್‌ ಪಡೆ ವಿಫಲವಾಯಿತು. ಇದರ ಬೆನ್ನಲ್ಲೇ ಭಾರತಕ್ಕೆ ಸಮಬಲದ ಗೋಲು ಗಳಿಸುವ ’ಚಿನ್ನದ ಅವಕಾಶ’ ಸಿಕ್ಕಿತ್ತು. ಇದನ್ನು ಕೈಚೆಲ್ಲಿದ ಆತಿಥೇಯ ಆಟಗಾರರು ನಿರಾಸೆಯಿಂದ ಅಂಗಳದಲ್ಲಿ ಬಿಕ್ಕಿ ಬಿಕ್ಕಿ ಅತ್ತರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !