18ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

7
ಯಶಸ್ಸಿಗೆ ಸಹಕರಿಸಿ: ಜಿಲ್ಲಾ ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಮನವಿ

18ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

Published:
Updated:

ಕೋಲಾರ: ‘ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಡಿ.18 ಮತ್ತು 19ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮನವಿ ಮಾಡಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಮ್ಮೇಳನದ ಅಧ್ಯಕ್ಷರಾಗಿ ರಾಜ್ಯ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಹಾಗೂ ಬರಹಗಾರ ಸಿ.ಎಸ್.ದ್ವಾರಕನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಲಾಗುತ್ತದೆ’ ಎಂದರು.

‘ಸಮ್ಮೇಳನದ ಮಹಾದ್ವಾರಕ್ಕೆ ಶಿಕ್ಷಣ ತಜ್ಞ ದಿವಂಗತ ಬಿ.ಗೋಪಾಲರೆಡ್ಡಿ ಮಹಾದ್ವಾರವೆಂದು ಹಾಗೂ ವೇದಿಕೆಗೆ ಕೋಲಾರ ನಿರ್ಮಾತೃ ಟಿ.ಚನ್ನಯ್ಯ ಅವರ ಹೆಸರಿಡಲಾಗಿದೆ. ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ, ಪ್ರಸ್ತಕ ಪ್ರದರ್ಶನ ಮತ್ತು ಸನ್ಮಾನ ಸಮಾರಂಭ ಇರುತ್ತದೆ’ ಎಂದು ವಿವರಿಸಿದರು.

‘18ರಂದು ಸಂಜೆ ವಿದ್ವಾನ್ ನಟರಾಜ್ ಮತ್ತು ಪ್ರಸನ್ನ ತಂಡದಿಂದ ಮಾಯಾ ಬೇಟೆ ನಾಟಕ ಪ್ರದರ್ಶನ, 19ರಂದು ಸಂಜೆ ಸಂಗೀತ ನಿರ್ದೇಶಕ ರಾಮಚಂದ್ರ ಹಡಪದ್ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮವಿದೆ. ಜಿಲ್ಲೆಯಲ್ಲಿ ಸುಮಾರು 40 ಕನ್ನಡಪರ ಸಂಘಟನೆಗಳು ಕನ್ನಡದ ಶಕ್ತಿಯಾಗಿ ಗಡಿ ಭಾಗದಲ್ಲಿ ಕನ್ನಡ ಬೆಳೆಸುವ ಕೆಲಸ ಮಾಡುತ್ತಿವೆ. ಈ ಎಲ್ಲಾ ಸಂಘಟನೆಗಳಿಗೂ ವೈಯಕ್ತಿಕವಾಗಿ ಸಮ್ಮೇಳನದ ಆಹ್ವಾನಪತ್ರಿಕೆ ತಲುಪಿಸಲು ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ಸಂಘಟನೆಗಳ ಸದಸ್ಯರು ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕು’ ಎಂದು ಕೋರಿದರು.

ಕಾಲೆಳೆಯುವ ಕೆಲಸ ಬೇಡ: ‘ಹಿಂದಿನ ವರ್ಷ ಜಿಲ್ಲೆಯ ಹಲವು ಭಾಗಗಳಿಗೆ ಅಂಚೆ ಮೂಲಕ ಕಳುಹಿಸಿದ್ದ ಸಮ್ಮೇಳನದ ಆಹ್ವಾನಪತ್ರಿಕೆ ಕೆಲವರ ಸಂಚಿನಿಂದ ಸದಸ್ಯರಿಗೆ ತಲುಪಿರಲಿಲ್ಲ. ಕನ್ನಡದ ಕೈಂಕರ್ಯದಲ್ಲಿ ಕಾಲೆಳೆಯುವ ಕೆಲಸ ಬೇಡ. ಹಗಲುವೇಷ ಧರಿಸಿ ಈ ಕೆಲಸ ಮಾಡುತ್ತಿರುವ ಕುತಂತ್ರಿಗಳು ಯಾರೆಂದು ಸಮಯ ಬಂದಾಗ ಬಹಿರಂಗಪಡಿಸುತ್ತೇನೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಪರಿಷತ್ತಿನ 11 ಸಾವಿರ ಮಂದಿ ಅಜೀವ ಸದಸ್ಯರಿಗೆ ಆಹ್ವಾನಪತ್ರಿಕೆ ತಲುಪಿಸಲು ಸಾಧ್ಯವಾಗದ ಕಾರಣ ಸಾಮಾಜಿಕ ಜಾಲತಾಣದಂತಹ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ. ಸಮ್ಮೇಳನಕ್ಕೆ ಜಿಲ್ಲಾಡಳಿತ, ಜಿ.ಪಂ, ಗ್ರಾ.ಪಂ ಹಾಗೂ ಸ್ಥಳೀಯ ಸಂಸ್ಥೆಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ ಸಹಕಾರ ನೀಡುತ್ತಿವೆ’ ಎಂದು ಮಾಹಿತಿ ನೀಡಿದರು.

₹ 11 ಲಕ್ಷ ವೆಚ್ಚ: ‘ಸಮ್ಮೇಳನಕ್ಕೆ ಸುಮಾರು ₹ 11 ಲಕ್ಷ ವೆಚ್ಚವಾಗಲಿದ್ದು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನಿಂದ ₹ 4.60 ಲಕ್ಷ ಬಿಡುಗಡೆಯಾಗಿದೆ. ಉಳಿದಂತೆ ಸ್ಮರಣ ಸಂಚಿಕೆಯ ಜಾಹೀರಾತು ಹಾಗೂ ಇತರ ಮೂಲಗಳಿಂದ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ 15 ಮಂದಿ ಮಳಿಗೆಗೆ ಹೆಸರು ನೋಂದಣಿ ಮಾಡಿಸಿದ್ದಾರೆ. ಸಾಹಿತ್ಯಾಸಕ್ತರು ಪುಸ್ತಕಗಳನ್ನು ಕೊಂಡು ಪ್ರೋತ್ಸಾಹ ನೀಡಬೇಕು. ಸಮ್ಮೇಳನದ 2 ದಿನವೂ ಬೆಳಿಗ್ಗೆ ಲಘು ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಊಟೋಪಚಾರದಲ್ಲಿ ವ್ಯತ್ಯಯವಾಗದಂತೆ ಹೆಚ್ಚು ಗಮನ ಹರಿಸುತ್ತೇವೆ’ ಎಂದರು.

ಸಮ್ಮೇಳನ ನಿರ್ಣಯ: ‘ಹಿಂದಿನ ಸಮ್ಮೇಳನದ ಭಾಷಾ ಮಾಧ್ಯಮ ಹಾಗೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನಿರ್ಣಯ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳಾಗಿವೆ. ಈ ಬಾರಿ ಜಿಲ್ಲೆಯ ಕೈಗಾರಿಕೆಗಳಲ್ಲಿನ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ 100ರಷ್ಟನ್ನು ಸ್ಥಳೀಯರಿಗೆ ಮೀಸಲಿಡಬೇಕೆಂದು ಒತ್ತಾಯಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಪರಿಷತ್ತಿನ ಸಲಹೆಗಾರ ಕೆ.ಎಂ.ಜೆ.ಮೌನಿ, ಗೌರವ ಕಾರ್ಯದರ್ಶಿ ಅಶ್ವತ್ಥ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮುನಿರತ್ನಪ್ಪ. ನಗರ ಘಟಕದ ಅಧ್ಯಕ್ಷ ಶಿವಕುಮಾರ್, ಗೌರವ ಕೋಶಾಧ್ಯಕ್ಷ ರತ್ನಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !