₹ 200ಕ್ಕಿಂತ ಹೆಚ್ಚಿನ ಮಾರಾಟಕ್ಕೆ ರಶೀತಿ ಕಡ್ಡಾಯ

7
ಸರಕು ಮತ್ತು ಸೇವಾ ತೆರಿಗೆ ಕಾರ್ಯಾಗಾರ; ಬಿ.ಟಿ.ಮನೋಹರ್‌ ಅಭಿಮತ

₹ 200ಕ್ಕಿಂತ ಹೆಚ್ಚಿನ ಮಾರಾಟಕ್ಕೆ ರಶೀತಿ ಕಡ್ಡಾಯ

Published:
Updated:
Deccan Herald

ಮಂಡ್ಯ: ‘ವರ್ತಕರು ಯಾವುದೇ ವಸ್ತುವನ್ನು ₹ 200ಕ್ಕಿಂತ ಹೆಚ್ಚಿಗೆ ಮಾರಾಟ ಮಾಡಿದಾಗ ಕಡ್ಡಾಯವಾಗಿ ಸರಕು ಮತ್ತು ಸೇವಾ ತೆರಿಗೆ ಸೇರಿಸಿ ರಶೀತಿ (ಇನ್ವಾಯ್ಸ್‌) ನೀಡಬೇಕು’ ಎಂದು ಎಫ್‌ಕೆಸಿಸಿಐ, ಜಿಎಸ್‌ಟಿ ಕೌನ್ಸಿಲ್‌ ಅಧ್ಯಕ್ಷ ಬಿ.ಟಿ.ಮನೋಹರ್‌ ಹೇಳಿದರು.

ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಜಿಲ್ಲಾ ಘಟಕದ ವತಿಯಿಂದ ನಗರದ ಮಹಾವೀರ ಜೈನ್‌ ಭವನದಲ್ಲಿ ಶುಕ್ರವಾರ ನಡೆದ ಜಿಎಸ್‌ಟಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಜಿಎಸ್‌ಟಿ ಅನುಷ್ಠಾನದಲ್ಲಿ ಗೊಂದಲಗಳು ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ದಿನಕ್ಕೊಂದು ಸುತ್ತೋಲೆ, ಆದೇಶಗಳು ಬರುತ್ತಲೇ ಇವೆ. ಈ ಕುರಿತು ಎಲ್ಲವನ್ನೂ ಅರಿತಿದ್ದೇವೆ ಎನ್ನುವವರು ಯಾರೂ ಇಲ್ಲ. ಆದರೆ ವರ್ತಕರು ತೆರಿಗೆ ಅನುಷ್ಠಾನದಲ್ಲಿ ಸಲಹೆ, ಸೂಚನೆ ಪಡೆಯಬೇಕು. ಗೊಂದಲಗಳು ಇದ್ದರೆ ಲೆಕ್ಕಪರಿಶೋಧಕರ ಸಲಹೆ ಪಡೆಯಬೇಕು. ಅನುಮಾನ ಪರಿಹಾರವಾಗದಿದ್ದರೆ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯ (ಹೆಲ್ಪ್‌ ಡೆಸ್ಕ್‌) ಪಡೆಯಬೇಕು. ಆ ಮೂಲಕ ಜಿಎಸ್‌ಟಿ ಜಾರಿಗೆ ಎಲ್ಲರೂ ಸಂಘಟಿತರಾಗಿ ಸಹಕಾರ ನೀಡಬೇಕು’ ಎಂದು ಹೇಳಿದರು.

‘₹ 200ಕ್ಕಿಂತ ಹೆಚ್ಚಿನ ಯಾವುದೇ ಸೇವೆಗೆ ಜಿಎಸ್‌ಟಿಯುಕ್ತ ರಶೀತಿ ಸಿದ್ಧಪಡಿಸಬೇಕು. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ. ರಶೀತಿ ಸೃಷ್ಟಿಸುವಾಗ ಹಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಅದರಲ್ಲಿ ವರ್ತಕರ ಜಿಎಸ್‌ಟಿ ಸಂಖ್ಯೆ, ವಿಳಾಸ, ಗ್ರಾಹಕನ ವಿಳಾಸ, ಜಿಎಸ್‌ಟಿ ದರವನ್ನು ನಮೂದಿಸಬೇಕು. ವ್ಯಾಪಾರಿಗಳು ತಮ್ಮ ಪ್ರತಿಯೊಂದು ಖರೀದಿ ಮತ್ತು ಮಾರಾಟದ ಲೆಕ್ಕಪತ್ರ ನಿರ್ವಹಣೆ ಮಾಡುವುದು ಅತ್ಯಾವಶ್ಯಕವಾಗಿದೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು’ ಎಂದು ಹೇಳಿದರು.

‘ಜಿಎಸ್‌ಟಿ ಜಾಲಕ್ಕೆ ನೋಂದಣಿಯಾಗುವ ಬಗ್ಗೆಯೂ ಇನ್ನೂ ಕೆಲವರಲ್ಲಿ ಅನುಮಾನಗಳಿವೆ. ₹ 20 ಲಕ್ಷಕ್ಕಿಂತಲೂ ಹೆಚ್ಚು ವಹಿವಾಟು ನಡೆಸುತ್ತಿರುವ ವರ್ತಕರು ಇನ್ನೂ ಜಾಲಕ್ಕೆ ನೋಂದಣಿಯಾಗಿಲ್ಲ. ವರ್ತಕರು ಈ ತಪ್ಪು ಸರಿಪಡಿಸಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಹಂಚಿಕೆದಾರರ ನಡುವೆ ಉತ್ತಮ ಸಂಬಂಧವಿದ್ದು ಇದು ಇಡೀ ದೇಶದಲ್ಲಿ ಮಾದರಿ ಎನಿಸಿದೆ. ವರ್ತಕರಿಗೆ ಎಲ್ಲಾ ರೀತಿಯ ಸಹಾಯ ದೊರೆಯುತ್ತಿದ್ದು ಅದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

1.10 ಕೋಟಿ ಹಂಚಿಕೆದಾರರು: ‘ಭಾರತದಲ್ಲಿ 1.18 ಕೋಟಿ ಹಂಚಿಕೆದಾರರು ಜಿಎಸ್‌ಟಿ ಜಾಲಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ನಮ್ಮ ರಾಜ್ಯವೊಂದರಲ್ಲೇ 8 ಲಕ್ಷ ಮಂದಿ ಇದ್ದಾರೆ. 1.18 ಕೋಟಿ ಹಂಚಿಕೆದಾರರಲ್ಲಿ ಶೇ 93ರಷ್ಟು ಮಂದಿ ವಾರ್ಷಿಕವಾಗಿ ₹ 5 ಕೋಟಿಗಿಂತ ಕಡಿಮೆ ವಹಿವಾಟು ಹೊಂದಿದ್ದಾರೆ. ಕಡಿಮೆ ವಹಿವಾಟು ಮಾಡುವವರೇ ಜಾಸ್ತಿ ಇದ್ದಾರೆ. ಹೀಗಿರುವಾಗ ಸರ್ಕಾರದ ವತಿಯಿಂದ ಹಂಚಿಕೆದಾರರಿಗೆ ಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಹೀಗಾಗಿ ಲೆಕ್ಕಪತ್ರ ನಿರ್ವಹಿಸುವಾಗ ಪ್ರತಿ ಖರೀದಿ ಮತ್ತು ಮಾರಾಟಕ್ಕೆ ಬೆಲೆಪಟ್ಟಿ ಪಡೆಯಬೇಕು. ಇದರಿಂದ ವಹಿವಾಟು ಸುಲಭವಾಗುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯಕ್ತರಾದ ಗುಂಡೂರಾವ್‌, ಸುರಗಿಮಠ, ಎಫ್‌ಕೆಸಿಸಿಐ ಜಿಎಸ್‌ಟಿ ಕೌನ್ಸಿಲ್‌ ಉಪಾಧ್ಯಕ್ಷೆ ಅನ್ನಪೂರ್ಣ ಶ್ರೀಕಾಂತ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿ ಉಪಾಧ್ಯಕ್ಷ ಶ್ರೀಹರಿಪ್ರಸಾದ್‌, ಕಾರ್ಯದರ್ಶಿ ಕೆ.ಜಿ.ಪ್ರದೀಪ್‌ ಕುಮಾರ್‌, ಜಂಟಿ ಕಾರ್ಯದರ್ಶಿ ಪುಟರ್‌ಮಲ್‌, ಖಜಾಂಚಿ ಎ.ಇ.ಲೂಯಿಸ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !