ರಂಗದ ‘ಖಳ’ನಿಗೆ ಅಕಾಡೆಮಿ ಪ್ರಶಸ್ತಿ ಗರಿ

7
‘ಬಳ್ಳಾರಿ ನಾಗ’ನಾಗಿ ರಂಗಪ್ರಿಯರ ಮನಗೆದ್ದ ಅಮೀನಗಡದ ಖಾಜೇಸಾಬ್‌

ರಂಗದ ‘ಖಳ’ನಿಗೆ ಅಕಾಡೆಮಿ ಪ್ರಶಸ್ತಿ ಗರಿ

Published:
Updated:
Deccan Herald

ಬಾಗಲಕೋಟೆ: ಅದು ದಶಕದ ಹಿಂದಿನ ಕಥನ..ಕಲಬುರ್ಗಿಯಲ್ಲಿ ಎಲ್.ಬಿ. ಶೇಖ್‌ ಮಾಸ್ತರರ ಶ್ರೀ ಹಾನಗಲ್ ಕುಮಾರೇಶ್ವರ ನಾಟಕ ಸಂಘ ಕ್ಯಾಂಪ್ ಹಾಕಿತ್ತು. ‘ನಾಯಿಗಳಿವೆ ಎಚ್ಚರಿಕೆ’ ನಾಟಕ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿತ್ತು. ಅದರಲ್ಲಿನ ಖಳ ನಾಯಕ ಬಳ್ಳಾರಿ ನಾಗ ಪ್ರೇಕ್ಷಕರಲ್ಲಿ ಕಿಚ್ಚು ಹಚ್ಚಿಸಿದ್ದರು. ಅವರ ಪಾತ್ರ ಬರುತ್ತಿದ್ದಂತೆಯೇ ರಂಗದ ಮೇಲೆ ಪ್ರೇಕ್ಷಕರು ನುಗ್ಗದಂತೆ ತಡೆಯಲು ಮಾಲೀಕರು ಕಾವಲು ಕಾಯುತ್ತಿದ್ದರು. ಯಾರಾದರೂ ಒಳಗೆ ನುಗ್ಗಿಯಾರು ಎಂಬ ಆತಂಕ...

ಅಂದು ಬಳ್ಳಾರಿ ನಾಗನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಹೈದರಾಬಾದ್ ಕರ್ನಾಟಕ ಭಾಗದ ರಂಗಪ್ರಿಯರ ಪ್ರೀತಿ– ಆಕ್ರೋಶ ಎರಡಕ್ಕೂ ತುತ್ತಾಗಿದ್ದವರು ನಮ್ಮ ಅಮೀನಗಡದ ಖಾಜೇಸಾಬ್. ವಿಶೇಷವೆಂದರೆ ಮುಂದೆ ವಿಷ್ಣುವರ್ಧನ್ ಅಭಿನಯದಲ್ಲಿ ‘ಬಳ್ಳಾರಿ ನಾಗ’ ಹೆಸರಿನ ಸಿನಿಮಾ ಕೂಡ ಬಿಡುಗಡೆಯಾಗಿತ್ತು.

ಖಾಜೇಸಾಬ್ ಈ ಬಾರಿಯ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸತತ ನಾಲ್ಕು ದಶಕಗಳಿಂದ ರಂಗಸೇವೆಯಲ್ಲಿ ತೊಡಗಿಕೊಂಡಿರುವ ಖಾಜೇಸಾಬ್ ಹುಟ್ಟಿದ್ದು ಅಮೀನಗಡದಲ್ಲಿ ಆದರೂ ಅವರ ಕಾರ್ಯಕ್ಷೇತ್ರ ಇಳಕಲ್. ಅಪ್ಪ ನಬಿಸಾಬ್, ಚಿಕ್ಕಪ್ಪ ಲಾಡ್ ಸಾಬ್ ಇಬ್ಬರು ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಸಹಜವಾಗಿಯೇ ಬಣ್ಣದ ಸೆಳೆತಕ್ಕೆ ಒಳಗಾದ ಖಾಜೇಸಾಬ್  17ನೇ ವಯಸ್ಸಿಗೆ ರಾಮದುರ್ಗ ಕಂಪೆನಿಯ ’ಸತ್ಯಂ ಶಿವಂ ಸುಂದರಂ’ ನಾಟಕದ ಮೂಲಕ ವೃತ್ತಿ ರಂಗಭೂಮಿಗೆ ಪ್ರವೇಶ ಪಡೆದರು.

ಅದಕ್ಕೂ ಮುನ್ನ ಅಮೀನಗಡದಲ್ಲಿ ಶಕ್ತಿ ಸೇವಾ ಹವ್ಯಾಸಿ ಕಲಾ ತಂಡದಲ್ಲಿ ಭಲೇ ಮಗಳೇ, ಸೂಳೆಯ ಮಗ ನಾಟಕಗಳನ್ನು ಮಾಡಿದ್ದರು. 1984ರಲ್ಲಿ ಚಾಮುಂಡೇಶ್ವರಿ ನಾಟಕ ಸಂಘದ ಮೂಲಕ ವೃತ್ತಿ ರಂಗಭೂಮಿಯ ಪಯಣ ನಿರಂತರವಾಯಿತು. ಮೊದಲಿಗೆ ಹಾಸ್ಯ ಪಾತ್ರದಲ್ಲಿ ಗುರುತಿಸಿಕೊಂಡಿದ್ದ ಖಾಜೇಸಾಬ್, ಅರಿಶಿನಗೋಡಿ, ಗುಡಿಗೇರಿ ಬಸವರಾಜ್, ರಾಜು ತಾಳಿಕೋಟೆ ಹಾಗೂ ಕಮತಗಿಯ ಹುಚ್ಚೇಶ್ವರ ನಾಟಕ ಸಂಘದಲ್ಲಿ ಕೆಲಸ ಮಾಡಿದ್ದಾರೆ. ’ಅರಿಶಿನಗೋಡಿ ಅವರ ಸಲಹೆ ಮೇರೆಗೆ ಹಾಸ್ಯ ಪಾತ್ರದಿಂದ ಖಳನ ಪಾತ್ರಕ್ಕೆ ಬಡ್ತಿ ಪಡೆದೆ’ ಎಂದು ಖಾಜೇಸಾಬ್ ನೆನಪಿಸಿಕೊಳ್ಳುತ್ತಾರೆ.

ಸದ್ಯ ವಿಜಯಪುರ ಜಿಲ್ಲೆ ತಾಳಿಕೊಟೆಯಲ್ಲಿ ಕ್ಯಾಂಪ್ ಮಾಡಿರುವ ಮಹೇಂದ್ರಗಿರಿಯ ರೇಣುಕಾಚಾರ್ಯ ನಾಟ್ಯ ಸಂಘದಲ್ಲಿ ಭೂಮಿ ತೂಕದ ಹೆಣ್ಣು ನಾಟಕದಲ್ಲಿ ನಾಯಕನ ಪಾತ್ರ ಮಾಡುತ್ತಿದ್ದಾರೆ. ಪತ್ನಿ ಹಫೀಜಾ ಬೇಗಂ ಕೂಡ ರಂಗ ಕಲಾವಿದೆ. ಇಬ್ಬರು ಮಕ್ಕಳೊಂದಿಗೆ ಇಳಕಲ್‌ನಲ್ಲಿ ನೆಲೆಸಿದ್ದಾರೆ. ’ಕಾಡುಗಲ್ಲಿನಂತಿದ್ದ ನನ್ನನ್ನು ಕಟೆದು ಶಿಲ್ಪವಾಗಿಸಿ ಉತ್ತಮ ಕಲಾವಿದನಾಗಿ ರೂಪಿಸಿದ ಶ್ರೇಯ ಇಳಕಲ್‌ನ ಕೀರ್ತಪ್ಪ ಮಾಸ್ತರ್ ಅವರಿಗೆ ಸಲ್ಲುತ್ತದೆ’ ಎಂದು ಖಾಜೇಸಾಬ್ ವಿನಮ್ರವಾಗಿ ಹೇಳುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !