ವಾಹನಗಳ ಟೋಯಿಂಗ್‌ಗೆ ಸಿದ್ಧತೆ ಆರಂಭ

7
ಅಡ್ಡಾದಿಡ್ಡಿ ಪಾರ್ಕಿಂಗ್‌ಗೆ ತಡೆಯೊಡ್ಡಲು ಯೋಜನೆ

ವಾಹನಗಳ ಟೋಯಿಂಗ್‌ಗೆ ಸಿದ್ಧತೆ ಆರಂಭ

Published:
Updated:

ಮಂಗಳೂರು: ನಗರದ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಗೆ ತಡೆಯೊಡ್ಡಲು ಪೊಲೀಸರು ಸಿದ್ಧತೆ ಆರಂಭಿಸಿದ್ದಾರೆ. ನೋ ಪಾರ್ಕಿಂಗ್‌ ಪ್ರದೇಶಗಳಲ್ಲಿ ನಿಲ್ಲಿಸಿದ ವಾಹನಗಳನ್ನು ಎಳೆದೊಯ್ಯಲು (ಟೋಯಿಂಗ್‌) ನಾಲ್ಕು ವಾಹನಗಳು ಶೀಘ್ರದಲ್ಲೇ ಬರಲಿವೆ.

ನಗರ ಪೊಲೀಸ್ ಕಮಿಷನರ್‌ ಕಚೇರಿಯಲ್ಲಿ ಶುಕ್ರವಾರ ನಡೆದ ನೇರ ಫೋನ್‌ ಇನ್‌ ಕಾರ್ಯಕ್ರಮದ ವೇಳೆ ಅಡ್ಡಾದಿಡ್ಡಿ ವಾಹನಗಳ ನಿಲುಗಡೆ ಕುರಿತು ಬಂದ ದೂರುಗಳಿಗೆ ಉತ್ತರಿಸುವಾಗ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್‌ ಈ ವಿಷಯ ತಿಳಿಸಿದರು.

ವಾಹನಗಳನ್ನು ಎಳೆದೊಯ್ಯುವುದಕ್ಕಾಗಿ ನಾಲ್ಕು ಟೋಯಿಂಗ್‌ ವಾಹನಗಳನ್ನು ಗುತ್ತಿಗೆಗೆ ಪಡೆಯಲಾಗುತ್ತಿದೆ. ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಒಂದು ತಿಂಗಳೊಳಗೆ ಟೋಯಿಂಗ್‌ ವಾಹನಗಳು ನಗರಕ್ಕೆ ಬರಲಿವೆ. ಅಷ್ಟರೊಳಗೆ ವಾಹನ ನಿಲುಗಡೆಗೆ ಮೀಸಲಾದ ಸ್ಥಳಗಳನ್ನು ಗುರುತಿಸಲಾಗುವುದು. ಉಳಿದ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡಿದ ವಾಹನಗಳನ್ನು ಎಳೆದೊಯ್ಯಲಾಗುವುದು ಎಂದರು.

ಕಾರುಗಳು ಸೇರಿದಂತೆ ನಾಲ್ಕು ಚಕ್ರಗಳ ವಾಹನಗಳನ್ನು ಟೋಯಿಂಗ್‌ ಮಾಡಿದರೆ ವಾಹನ ಮಾಲೀಕರಿಗೆ ₹ 750 ದಂಡ ವಿಧಿಸಲಾಗುವುದು. ದ್ವಿಚಕ್ರ ವಾಹನಗಳಿಗೆ ₹ 450 ದಂಡ ವಿಧಿಸಲಾಗುವುದು. ಎಳೆದೊಯ್ದ ವಾಹನಗಳ ನಿಲುಗಡೆಗೂ ಸ್ಥಳ ಗುರುತಿಸಲಾಗುತ್ತಿದೆ ಎಂದು ತಿಳಿಸಿದರು.

ಪಾರ್ಕಿಂಗ್‌ ಸಮಸ್ಯೆ: ಜೆಪ್ಪಿನಮೊಗರು ದ್ವಾರದ ಸಮೀಪ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಲ್ಲಿನ ನಾಗರಿಕರೊಬ್ಬರು ದೂರು ನೀಡಿದರು. ಮಂಗಳಾದೇವಿ ದೇವಸ್ಥಾನದ ಅಕ್ಕಪಕ್ಕದಲ್ಲೂ ವಾಹನ ನಿಲುಗಡೆಯಿಂದ ಸಮಸ್ಯೆಯಾಗಿದೆ ಎಂಬ ದೂರು ಬಂತು.

‘ಉರ್ವ ಸ್ಟೋರ್‌ನಲ್ಲಿರುವ ಸಂತೋಷ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌ ಎದುರಿನಲ್ಲಿ ಅನಧಿಕೃತವಾಗಿ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ಮದ್ಯ ಸೇವಿಸುತ್ತಿರುತ್ತಾರೆ. ಇದರಿಂದ ಪಾದಚಾರಿಗಳು ಓಡಾಡಲು ಆಗುತ್ತಿಲ್ಲ’ ಎಂದು ಹಿರಿಯ ನಾಗರಿಕರೊಬ್ಬರು ಅಳಲು ತೋಡಿಕೊಂಡರು.

ಮೂರೂ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ ಭರವಸೆ ನೀಡಿದರು.

ಕೊಟ್ಟಾರ ಚೌಕಿಯಲ್ಲಿ ನಿಗದಿತ ಸ್ಥಳ ಬಿಟ್ಟು ರಸ್ತೆ ಮಧ್ಯದಲ್ಲೇ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಮಾಲೆಮಾರ್‌ ಕಡೆಯಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂಬ ದೂರು ಕೂಡ ಬಂತು. ಕಿನ್ನಿಗೋಳಿ ಬಸ್‌ ನಿಲ್ದಾಣದಲ್ಲೂ ಇದೇ ರೀತಿಯ ಸಮಸ್ಯೆ ಇರುವುದಾಗಿ ಮಹಿಳೆಯೊಬ್ಬರು ಅಹವಾಲು ಹೇಳಿದರು.

ಮೀನಿನ ನೀರಿನ ಸಮಸ್ಯೆ: ಮೀನು ಸಾಗಣೆ ವಾಹನಗಳಿಂದ ರಸ್ತೆ ಮೇಲೆ ನೀರು ಸೋರಿಕೆ ಆಗುತ್ತಿರುವುದು ಮತ್ತೆ ಹೆಚ್ಚಾಗಿದೆ ಎಂಬ ದೂರುಗಳು ಬಂದವು. ಮಂಗಳಾದೇವಿ, ಜೆಪ್ಪಿನಮೊಗರು, ಮಾರ್ನಮಿಕಟ್ಟೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ ಎಂದು ಕೆಲವರು ದೂರಿದರು.

ಮೀನು ಸಾಗಣೆ ವಾಹನಗಳ ತಪಾಸಣೆಗೆ ಕಾರ್ಯಾಚರಣೆ ಆರಂಭಿಸಲಾಗುವುದು. ನೀರು ಸೋರಿಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಭರವಸೆ ನೀಡಿದರು.

ಎಸ್‌.ಎಲ್‌.ಮಥಾಯ್ಸ್‌ ರಸ್ತೆ ಸೇರಿದಂತೆ ನಗರದ ಕೆಲವೆಡೆ ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲ್ಲಿಸಿಕೊಂಡು ಮೀನು ಮಾರಾಟ ಮಾಡುತ್ತಿರುವ ಬಗ್ಗೆಯೂ ಸ್ಥಳೀಯರು ದೂರಿದರು. ಅಂತಹ ವಾಹನಗಳನ್ನು ತೆರವು ಮಾಡುವಂತೆ ಡಿಸಿಪಿ ಸಂಚಾರ ವಿಭಾಗದ ಪೊಲೀಸರಿಗೆ ನಿರ್ದೇಶನ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !