ಪ್ರಸಾದದಲ್ಲಿ ವಿಷ ಹಾಕುವಷ್ಟು ಕ್ರೌರ್ಯ ಬೆಳೆಯಿತೇ?

7
ಪೂಜೆ ವಿವಾದ: ಸುಳ್ವಾಡಿ– ಬರಗೂರು ನಡುವೆ ವೈಷಮ್ಯ

ಪ್ರಸಾದದಲ್ಲಿ ವಿಷ ಹಾಕುವಷ್ಟು ಕ್ರೌರ್ಯ ಬೆಳೆಯಿತೇ?

Published:
Updated:

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದಲ್ಲಿ ಮಾರಮ್ಮನ ದೇವಸ್ಥಾನದಲ್ಲಿ ಸಂಭವಿಸಿದ ದುರಂತಕ್ಕೆ ಪ್ರಸಾದದಲ್ಲಿ ವಿಷ ಬರೆಸಿದ್ದೇ ಕಾರಣ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ ವಿಷದ ಕಾರಣಕ್ಕೇ ಈ ರೀತಿ ಆಗಿದೆ ಎಂಬುದನ್ನು ವೈದ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.

ಹಗೆತನದಿಂದ ಉದ್ದೇಶಪೂರ್ವಕವಾಗಿ ಪ್ರಸಾದದಲ್ಲಿ ವಿಷ ಬೆರೆಸಲಾಗಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ದೇವರ ಪ್ರಸಾದದಲ್ಲಿ ವಿಷ ಹಾಕುವಷ್ಟು ಕ್ರೌರ್ಯ ಬೆಳೆಯಿತೇ? ಆ ಮಟ್ಟಿನ ವೈಷಮ್ಯ ಏನಿತ್ತು ಎಂಬ ಪ್ರಶ್ನೆ ಕಾಡುತ್ತಿದೆ.

ದೇವಾಲಯದಲ್ಲಿ ಪೂಜೆ ಮಾಡುವ ವಿಚಾರದಲ್ಲಿ ಸುಳ್ವಾಡಿ ಗ್ರಾಮ ಹಾಗೂ ತಮಿಳುನಾಡು ವ್ಯಾಪ್ತಿಗೆ ಬರುವ ಬರಗೂರು ಗ್ರಾಮದ ಬಣಗಳ ನಡುವೆ ಜಗಳ ಇತ್ತು. ಎರಡು ಬಣಗಳಾಗಿ ಪೂಜೆ ಸಲ್ಲಿಸುತ್ತಿದ್ದರು. 13 ವರ್ಷಗಳ ಹಿಂದೆ ಎರಡೂ ಬಣಗಳ ನಡುವೆ ಮಾರಾಮಾರಿ ನಡೆದಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ಗೋಪುರ ನಿರ್ಮಿಸುವ ವಿಚಾರದಲ್ಲಿ ಅರ್ಚಕರ ಗುಂಪು ಹಾಗೂ ಗ್ರಾಮದ ಇನ್ನೊಂದು ಗುಂಪಿಗೂ ಭಿನ್ನಾಭಿಪ್ರಾಯ ಇತ್ತು ಎಂದೂ ಹೇಳಲಾಗುತ್ತಿದೆ. ‌ಇಂತಹ ಭಿನ್ನಾಭಿಪ್ರಾಯ ವಿಷ ಹಾಕುವಷ್ಟು ಮಟ್ಟಕ್ಕೆ ದ್ವೇಷವಾಗಿ ಮಾರ್ಪಟ್ಟಿತ್ತೆ? ಎಂಬ ಮಾತು ಗ್ರಾಮದಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ತನಿಖೆಯಿಂದಷ್ಟೇ ಎಲ್ಲವೂ ಬೆಳಕಿಗೆ ಬರುವ ಸಾಧ್ಯತೆಯಿದೆ.

ದೇವಸ್ಥಾನದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ, ಮಹದೇಶ್ವರಬೆಟ್ಟದ ದೊಡ್ಡಣ್ಣಯ್ಯ ಗ್ರಾಮದವರು ಅಡುಗೆ ಮಾಡುತ್ತಾರೆ. ಶುಕ್ರವಾರವೂ ಅವರೇ ಅಡುಗೆ ಮಾಡಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪೊಲೀಸರು ಚೆನ್ನಪ್ಪಿ ಹಾಗೂ ಮಾದೇಶ ಎಂಬುವವರನ್ನು ಬಂಧಿಸಿದ್ದಾರೆ. ವಿಚಾರಣೆಯೂ ನಡೆಯುತ್ತಿದೆ. ಆದರೆ ಅವರು ಇನ್ನೂ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

ಇಡೀ ಘಟನೆ ಬರಸಿಡಿಲಿನಂತೆ ಬಡಿದಿದೆ. ಘಟನೆ ನಡೆದ ಗ್ರಾಮವಷ್ಟೇ ಅಲ್ಲ, ಹನೂರು ಮತ್ತು ಕೊಳ್ಳೇಗಾಲ ತಾಲ್ಲೂಕಿನ ಜನರೂ ಆಘಾತಕ್ಕೆ ಒಳಗಾಗಿದ್ದಾರೆ.

ಮಹಾಪರಾಧ: ಘಟನೆಯ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಹನೂರು ಶಾಸಕ ಆರ್‌.ನರೇಂದ್ರ, ‘ದೇವರ ಪ್ರಸಾದ ಎಂದು ಏನೂ ಕೊಟ್ಟರು ಅಮಾಯಕ ಜನರು ಸೇವಿಸುತ್ತಾರೆ. ಒಂದು ವೇಳೆ ಪ್ರಸಾದದಲ್ಲಿ ವಿಷ ಬೆರೆಸಿದ್ದು ನಿಜವೇ ಆದರೆ, ಅದಕ್ಕಿಂತ ದೊಡ್ಡ ಮಹಾಪರಾಧ ಬೇರೊಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಆಘಾತ: ಜನರು ಮಧ್ಯಾಹ್ನದ ಹೊತ್ತಿಗೆ ಪ್ರಸಾದ ಸೇವಿಸಿದ್ದರೂ, ಸುದ್ದಿ ಗೊತ್ತಾಗಿದ್ದು ಮಧ್ಯಾಹ್ನ 3.30ರ ನಂತರ. ಎರಡು ಸಾವು, ಮೂರು ಸಾವು ಎಂಬ ಸುದ್ದಿಗಳು ಬರುತ್ತಿದ್ದಂತೆಯೇ ಅಸ್ವಸ್ಥರು ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಏರುತ್ತಾ ಹೋಯಿತು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !