ತಂಡದ ಆಯ್ಕೆ;ಕೊಹ್ಲಿ ಮೇಲೆ ಕೆಂಗಣ್ಣು

7

ತಂಡದ ಆಯ್ಕೆ;ಕೊಹ್ಲಿ ಮೇಲೆ ಕೆಂಗಣ್ಣು

Published:
Updated:
Deccan Herald

ಪರ್ತ್: ಶುಕ್ರವಾರ ಇಲ್ಲಿ ಆರಂಭವಾದ ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಡುವ ಬಳಗದ ಆಯ್ಕೆಯ ವಿಷಯದಲ್ಲಿ ನಾಯಕ ವಿರಾಟ್ ಕೊಹ್ಲಿ  ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ಅವರ ವಿರುದ್ಧ ಹಿರಿಯ ಕ್ರಿಕೆಟಿಗರು ಟೀಕೆ ಮಾಡಿದ್ದಾರೆ.

ನಾಲ್ವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿದಿರುವುದು ಎಲ್ಲರ ಹುಬ್ಬೇರಿಸಿದೆ. ಹೊಟ್ಟೆನೋವಿನಿಂದ ಬಳಲುತ್ತಿರುವ ಆರ್. ಆಶ್ವಿನ್‌ಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಅವರ ಬದಲಿಗೆ ಅನುಭವಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರಿಗೆ ಅವಕಾಶ ನೀಡಬಹುದಿತ್ತು.  ಏಳನೇ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ಸಮರ್ಥ ಆಟಗಾರನಾಗಿರುವ ಜಡೇಜ ಅವರನ್ನು ಆಯ್ಕೆ ಪರಿಗಣಿಸದಿರುವುದು ಅಚ್ಚರಿ ಮೂಡಿಸಿದೆ. ಮೂರನೇ ದಿನದಾಟದಲ್ಲಿ ಇಲ್ಲಿಯ ಪಿಚ್ ವೇಗಿಗಳಿಗೆ ಹೆಚ್ಚು ನೆರವು ನೀಡಲಿಕ್ಕಿಲ್ಲ. ಮೂವರು ವೇಗಿಗಳು ಮತ್ತು ಒಬ್ಬ ಸ್ಪಿನ್ ಬೌಲರ್‌ ಇರಬೇಕಿತ್ತು ಎಂದು ಇಂಗ್ಲೆಂಡ್ ಹಿರಿಯ ಆಟಗಾರ ಮೈಕಲ್ ವಾನ್ ಆಭಿಪ್ರಾಯಪಟ್ಟಿದ್ಧಾರೆ.

ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್ ಹನುಮವಿಹಾರಿ ಅವರಿಗೆ ಅವಕಾಶ ನೀಡಲಾಗಿದೆ. ಅವರು ಆಫ್‌ಸ್ಪಿನ್ ಬೌಲಿಂಗ್ ಮಾಡುವ ಅವರು ಮೊದಲ ದಿನವೇ ಎರಡು ವಿಕೆಟ್ ಪಡೆದಿದ್ದಾರೆ. ಇದು ಮುಂಬರುವ ದಿನಗಳಲ್ಲಿ  ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆಯನ್ನು ತೋರಿಸುತ್ತಿದೆ. ಆಸ್ಟ್ರೇಲಿಯಾ ತಂಡದಲ್ಲಿರುವ ಸ್ಪಿನ್ನರ್ ನೇಥನ್ ಲಯನ್ ಈ ಅವಕಾಶವನ್ನು ಬಳಸಿಕೊಳ್ಳುವ ನಿರೀಕ್ಷೆ ಇದೆ.

ಈ ಹಿಂದೆ ದಕ್ಷಿಣ ಆಫ್ರಿಕಾ  ಮತ್ತು ಇಂಗ್ಲೆಂಡ್ ಪ್ರವಾಸಗಳ ಸಂದರ್ಭದಲ್ಲಿ ತಂಡದ ಆಯ್ಕೆಯಲ್ಲಿ ಇಂತಹ ಲೋಪ ‌ಮಾಡಿದ್ದ ಭಾರತ ತಂಡವು ಸೋಲನುಭವಿಸಿತ್ತು. ನ್ಯೂಲ್ಯಾಂಡ್ಸ್‌ ಮತ್ತು ಸೆಂಚುರಿಯನ್ ನಲ್ಲಿ ನಡೆದಿದ್ದ ಟೆಸ್ಟ್‌ಗಳಲ್ಲಿ ರೋಹಿತ್ ಶರ್ಮಾ ಆವರನ್ನು ಆಡಿಸಿ, ಅಜಿಂಕ್ಯ ರಹಾನೆ ಅವರನ್ನು ಕೈಬಿಡಲಾಗಿತ್ತು. ರೋಹಿತ್ ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಸೆಂಚುರಿಯನ್‌ನಲ್ಲಿ ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಅವರನ್ನು  ಕೊಹ್ಲಿ ಕೈಬಿಟ್ಟಿದ್ದರು. ಆ ಸರಣಿಯ ಮೊದಲ ಪಂದ್ಯದಲ್ಲಿ ಭುವಿ ಆರು ವಿಕೆಟ್‌ ಪಡೆದಿದ್ದರೂ ಅವರನ್ನು ಎರಡನೇ ಟೆಸ್ಟ್‌ಗೆ ಆಯ್ಕೆ ಮಾಡಿರಲಿಲ್ಲ.

ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಅವರನ್ನು ಬೆಂಚ್‌ನಲ್ಲಿ ಕೂರಿಸಲಾಗಿತ್ತು. 31 ರನ್‌ಗಳ ಸೋಲನುಭವಿಸಿತ್ತು. ಲಾರ್ಡ್ಸ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಲಾಗಿತ್ತು. ವಿರಾಟ್‌ ಮಾಡಿದ್ದ ಆ ನಿರ್ಧಾರವೂ ಸೋಲಿಗೆ ಕಾರಣವಾಗಿತ್ತು ಎಂದು ಪರಿಣತರು ವಿಶ್ಲೇಷಿಸಿದ್ದರು. ಆ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿಗಳು ಮಿಂಚಿದ್ದರು.

ಇದೀಗ ಆಪ್ಟರ್‌ ಕ್ರೀಡಾಂಗಣದ ಪಿಚ್‌ ಅನ್ನು ಸರಿಯಾಗಿ ಅರಿಯದೇ ತಂಡದ ಆಯ್ಕೆ ಮಾಡಿಕೊಂಡಿರುವುದು ಭಾರತಕ್ಕೆ ಯಾವ ರೀತಿಯ ಫಲಿತಾಂಶ ನೀಡಲಿದೆ ನೋಡಬೇಕು ಎಂದು ಹಿರಿಯ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !