ಆರ್ಥಿಕ ಇಲಾಖೆ ಎಡವಟ್ಟು: ಆರ್‌ಎಂಎಸ್‌ಎ– ಎಸ್‌ಎಸ್‌ಎ ಶಿಕ್ಷಕರ ವೇತನ ಸ್ಥಗಿತ

7
ಕಚೇರಿಯಿಂದ ಕಚೇರಿಗೆ ಶಿಕ್ಷಕರ ಅಲೆದಾಟ

ಆರ್ಥಿಕ ಇಲಾಖೆ ಎಡವಟ್ಟು: ಆರ್‌ಎಂಎಸ್‌ಎ– ಎಸ್‌ಎಸ್‌ಎ ಶಿಕ್ಷಕರ ವೇತನ ಸ್ಥಗಿತ

Published:
Updated:

ಕೋಲಾರ: ಜಿಲ್ಲೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ) ಹಾಗೂ ಸರ್ವ ಶಿಕ್ಷಣ ಅಭಿಯಾನದ (ಎಸ್‌ಎಸ್‌ಎ) ಶಿಕ್ಷಕರಿಗೆ ಏಳೆಂಟು ತಿಂಗಳಿಂದ ವೇತನ ಸ್ಥಗಿತಗೊಂಡಿದ್ದು, ಶಿಕ್ಷಕರು ವೇತನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆರ್ಥಿಕ ಇಲಾಖೆ, ಯೋಜನಾ ನಿರ್ದೇಶಕರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಡುವಿನ ಸಮನ್ವಯ ಕೊರತೆಯಿಂದಾಗಿ ರಾಜ್ಯದ 10ಕ್ಕೂ ಜಿಲ್ಲೆಗಳ ಆರ್‌ಎಂಎಸ್‌ಎ ಮತ್ತು ಎಸ್‌ಎಸ್‌ಎ ಶಿಕ್ಷಕರಿಗೆ ವೇತನ ಬಂದಿಲ್ಲ. ಈ ಯೋಜನೆಗಳಡಿ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೂ ವೇತನ ವಿಳಂಬವಾಗಿದೆ.

ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ರಾಜ್ಯದ ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕುಗಳ ಶಿಕ್ಷಕರಿಗೆ ವೇತನ ಬಂದಿಲ್ಲ.

ವೇತನಾನುದಾನ ವ್ಯತ್ಯಾಸ

ನಿಯಮದ ಪ್ರಕಾರ ಪ್ರತಿ ಜಿಲ್ಲೆಯ ವೇತನ ಬೇಡಿಕೆಯನ್ನು ಜಿಲ್ಲಾ ಪಂಚಾಯಿತಿಯು ಆರ್ಥಿಕ ಇಲಾಖೆಗೆ ಸಲ್ಲಿಸಬೇಕು. ಬಳಿಕ ಆರ್ಥಿಕ ಇಲಾಖೆಯು ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಇಡೀ ವರ್ಷದ ವೇತನ ಅನುದಾನವನ್ನು 4 ಕಂತುಗಳಲ್ಲಿ ಆನ್‌ಲೈನ್‌ ಮೂಲಕ ಆಯಾ ಜಿಲ್ಲೆ, ತಾಲ್ಲೂಕುಗಳಿಗೆ ಹಂಚಿಕೆ ಮಾಡುತ್ತದೆ. ನಂತರ ತಾಲ್ಲೂಕು ಪಂಚಾಯಿತಿ ಖಜಾನೆ ಮೂಲಕ ಶಿಕ್ಷಕರಿಗೆ ವೇತನ ನೀಡಲಾಗುತ್ತದೆ.

ಆದರೆ, ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲೇ ಆರ್ಥಿಕ ಇಲಾಖೆ ಆನ್‌ಲೈನ್‌ ವ್ಯವಸ್ಥೆಯಲ್ಲಿ ಎಡವಟ್ಟು ಮಾಡಿದೆ. ಒಂದು ತಾಲ್ಲೂಕಿನ ವೇತನಾನುದಾನವನ್ನು ಬೇರೊಂದು ತಾಲ್ಲೂಕಿಗೆ ಹಂಚಿಕೆ ಮಾಡಿದೆ. ಮತ್ತೆ ಕೆಲ ತಾಲ್ಲೂಕುಗಳ ವೇತನ ಅನುದಾನ ಮೊತ್ತದಲ್ಲಿ ವ್ಯತ್ಯಾಸವಾಗಿದೆ. ಹೆಚ್ಚು ಶಿಕ್ಷಕರಿರುವ ತಾಲ್ಲೂಕುಗಳಿಗೆ ಕಡಿಮೆ ಅನುದಾನ ಬಂದಿದ್ದು, ವೇತನ ನೀಡಲು ಸಾಧ್ಯವಾಗಿಲ್ಲ. ಕಡಿಮೆ ಶಿಕ್ಷಕರಿರುವ ತಾಲ್ಲೂಕುಗಳಿಗೆ ಹೆಚ್ಚಿನ ವೇತನಾನುದಾನ ಬಿಡುಗಡೆಯಾಗಿದ್ದು, ಆ ಹಣ ಖಜಾನೆಯಲ್ಲೇ ಉಳಿದಿದೆ.

₹ 8.18 ಕೋಟಿ ಬಾಕಿ

ಕೋಲಾರ ಜಿಲ್ಲೆಯೊಂದರಲ್ಲೇ ಬಂಗಾರಪೇಟೆ, ಕೆಜಿಎಫ್‌, ಕೋಲಾರ ಹಾಗೂ ಮಾಲೂರು ತಾಲ್ಲೂಕಿನಲ್ಲಿ 56 ಮಂದಿ ಆರ್‌ಎಂಎಸ್‌ಎ ಶಿಕ್ಷಕರ ₹ 1.03 ಕೋಟಿ ವೇತನ ಬಾಕಿಯಿದೆ. ಕೋಲಾರ ತಾಲ್ಲೂಕಿನಲ್ಲಿ ಎಸ್‌ಎಸ್‌ಎ ಶಿಕ್ಷಕರು ಹಾಗೂ ಸಿಬ್ಬಂದಿ ಸೇರಿದಂತೆ 225 ಮಂದಿಯ ₹ 7.15 ಕೋಟಿ ವೇತನ ವಿಳಂಬವಾಗಿದೆ.

ಇನ್ನೂ ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಆರ್‌ಎಂಎಸ್‌ಎ ಅಡಿ ಬೇಡಿಕೆಗಿಂತಲೂ ಹೆಚ್ಚಿನ ವೇತನಾನುದಾನ ಬಿಡುಗಡೆಯಾಗಿದೆ. ಈ ಪೈಕಿ ₹ 58.18 ಲಕ್ಷ ಬಳಕೆಯಾಗದೆ ಖಜಾನೆಯಲ್ಲಿ ಉಳಿದಿದ್ದು, ಸರ್ಕಾರಕ್ಕೆ ವಾಪಸ್‌ ಹೋಗುವ ಆತಂಕ ಎದುರಾಗಿದೆ. ವೇತನ ವಿಳಂಬ ಸಂಬಂಧ ಡಿಡಿಪಿಐ, ರಾಜ್ಯ ಯೋಜನಾ ನಿರ್ದೇಶಕರು, ಆರ್ಥಿಕ ಇಲಾಖೆ ಹಾಗೂ ಟ್ರೆಸರಿ ನೆಟ್‌ವರ್ಕ್‌ ಮ್ಯಾನೇಜ್‌ಮೆಂಟ್‌ ಕೇಂದ್ರದ (ಟಿಎನ್‌ಎಂಸಿ) ನಡುವೆ ಮೇಲಿಂದ ಮೇಲೆ ಪತ್ರ ವ್ಯವಹಾರ ನಡೆಯುತ್ತಿದೆಯೇ ಹೊರತು ಸಮಸ್ಯೆ ಬಗೆಹರಿದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !