ಮೇವು, ಕುಡಿಯುವ ನೀರಿಗೆ ತೊಂದರೆ ಸಲ್ಲ: ಶಿವಾನಂದ ಪಾಟೀಲ

7
ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸೂಚನೆ

ಮೇವು, ಕುಡಿಯುವ ನೀರಿಗೆ ತೊಂದರೆ ಸಲ್ಲ: ಶಿವಾನಂದ ಪಾಟೀಲ

Published:
Updated:
Deccan Herald

ಬಾಗಲಕೋಟೆ: ‘ಬರದ ದವಡೆಗೆ ಸಿಲುಕಿರುವ ಜಿಲ್ಲೆಯ ರೈತರ ಪಾಲಿಗೆ ಬೆಳೆ ವಿಮೆಯಾದರೂ ಆಸರೆಯಾಗಲಿ. ಕನಿಷ್ಠ 2 ಲಕ್ಷ ರೈತರಿಗಾದರೂ ಅದರ ಉಪಯೋಗ ದೊರೆಯುವಂತೆ ಮಾಡಿ’ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚನೆ ನೀಡಿದರು.

ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಬರ ನಿರ್ವಹಣೆ ಪರಿಶೀಲನಾ ಸಮಿತಿ ಸಭೆಯಲ್ಲಿ ಬೆಳೆ ವಿಮೆ ವಿಚಾರದಲ್ಲಿ ಕೃಷಿ ಇಲಾಖೆಯ ನಿರ್ಲಕ್ಷ್ಯ ಧೋರಣೆ ವಿರುದ್ಧ ಜಿಲ್ಲೆಯ ಶಾಸಕರು ಎತ್ತಿದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಶೇ 84ರಷ್ಟು ಮಳೆಯ ಕೊರತೆ ಇದೆ. ಜೋಳ ಹಾಗೂ ಕಡಲೆ ಬೆಳೆ ಸಂಪೂರ್ಣ ಬತ್ತಿ ಹೋಗಿವೆ. ಈಗ ಮಳೆ ಬಂದರೂ ಏನೂ ಉಪಯೋಗವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ ಸಭೆಗೆ ತಿಳಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ವೀರಣ್ಣ ಚರಂತಿಮಠ, ’ಬರದಿಂದ ಬೆಳೆ ನಷ್ಟಕ್ಕೀಡಾದವರಿಗೆ ವಿಮೆಯಾದರೂ ನೆರವಾಗುತ್ತಿತ್ತು. ಜೋಳಕ್ಕೆ ಕೇವಲ ಒಂದು ದಿನ ಕಾಲಾವಕಾಶ ನೀಡಿ ವಿಮೆಯ ಪ್ರಿಮಿಯಂ ತುಂಬಿಸಿಕೊಳ್ಳಲಾಗಿದೆ. ಅದು ರೈತರು ಪ್ರತಿಭಟನೆ ನಡೆಸಿದಾಗಲೇ ಆ ವಿಚಾರ ಗೊತ್ತಾಯಿತು. ಅಧಿಕಾರಿಗಳು ಸಕಾಲದಲ್ಲಿ ನಮ್ಮ ಗಮನಕ್ಕೆ ಈ ವಿಚಾರ ತಂದಿದ್ದರೆ ರೈತರನ್ನು ಜಾಗೃತಿಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಿಮಿಯಂ ತುಂಬಿಸುತ್ತಿದ್ದೆವು’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಕೂಡ ದನಿಗೂಡಿಸಿದರು.

ಜಿಲ್ಲೆಯಲ್ಲಿ 2.27 ಲಕ್ಷ ರೈತರು ಇದ್ದು, ಅವರಲ್ಲಿ 41 ಸಾವಿರ ಮಂದಿ ಮಾತ್ರ ಬೆಳೆ ವಿಮೆ ತುಂಬಿರುವುದು ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಇದಕ್ಕೆ ತುಷಾರ್ ಗಿರಿನಾಥ ಕೂಡ ಅತೃಪ್ತಿ ವ್ಯಕ್ತಪಡಿಸಿ ಕಳಪೆ ಸಾಧನೆಯಾಗಿದೆ ಎಂದರು. ಆಗ ಮಧ್ಯಪ್ರವೇಶಿಸಿದ ಸಚಿವ ಶಿವಾನಂದ ಪಾಟೀಲ, ‘ಕನಿಷ್ಠ 2 ಲಕ್ಷ ರೈತರಾದರೂ ಇದರ ಉಪಯೋಗ ಪಡೆಯಬೇಕು. ಅದಕ್ಕೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ವ್ಯಾಪಕ ಪ್ರಚಾರ ಮಾಡಿ’ ಎಂದರು.

ಉದ್ಯೋಗ ಕೊಡಿ: ‘ಜಿಲ್ಲೆಯಲ್ಲಿ 40 ವರ್ಷಗಳ ನಂತರ ಭೀಕರ ಬರ ಕಾಣಿಸಿಕೊಂಡಿದೆ. ಈಗಾಗಲೇ ತಾಂಡಾ ಹಾಗೂ ಕೇರಿಗಳಲ್ಲಿ ಶೇ 50ಕ್ಕೂ ಹೆಚ್ಚು ಮಂದಿ ಉದ್ಯೋಗ ಅರಸಿ ಗುಳೇ ಹೋಗಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸುವ ಹಾಗೂ ಮೇವು ಬ್ಯಾಂಕ್ ಸ್ಥಾಪಿಸಿ ಜಾನುವಾರುಗಳಿಗೆ  ನೆರವಾಗಿ’ ಎಂದು ಸಭೆಯಲ್ಲಿ ಶಾಸಕ ಗೋವಿಂದ ಕಾರಜೋಳ ಆಗ್ರಹಿಸಿದರು. 

ಹಿಪ್ಪರಗಿ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಮಾಡುವ ಮೋಟಾರ್‌ಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಎರಡು ತಿಂಗಳಿನಿಂದ ಈ ಸಮಸ್ಯೆ ತಲೆದೋರಿದೆ ಎಂದು ಶಾಸಕ ಆನಂದ ನ್ಯಾಮಗೌಡ ಸಭೆಯ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಧಿಕಾರಿ, ವೋಲ್ಟೇಜ್ ಸಮಸ್ಯೆ ಇಲ್ಲ. ನಾವು ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ಯಂತ್ರದಲ್ಲಿಯೇ ಏನೊ ತೊಂದರೆ ಇದೆ ಎಂದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಮಗೌಡ, ಇಬ್ಬರ ನಡುವಿನ ತಿಕ್ಕಾಟದಿಂದ ನೀರಿಗೆ ತೊಂದರೆಯಾಗಿದೆ ಎಂದರು. ತಾಂತ್ರಿಕ ತೊಂದರೆಗೆ ಅವಕಾಶವಾಗದಂತೆ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲು ಶಿವಾನಂದ ಪಾಟೀಲ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ಸಿಇಒ ಗಂಗೂಬಾಯಿ ಮಾನಕರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !