ಮೆಟ್ರೊ ಬೀಮ್‌; ಪರಮೇಶ್ವರ ಪರಿಶೀಲನೆ

7

ಮೆಟ್ರೊ ಬೀಮ್‌; ಪರಮೇಶ್ವರ ಪರಿಶೀಲನೆ

Published:
Updated:
Deccan Herald

ಬೆಂಗಳೂರು: ಟ್ರಿನಿಟಿ ಮೆಟ್ರೊ ನಿಲ್ದಾಣದ ಬಳಿ ವಯಾಡಕ್ಟ್‌ ಕೆಳಗಿನ ಕ್ರಾಸ್‌ ಬೀಮ್‌ನಲ್ಲಿ ಕಾಂಕ್ರಿಟ್‌ ದುರ್ಬಲಗೊಂಡಿರುವುದನ್ನು ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ಶನಿವಾರ ಪರಿಶೀಲಿಸಿದರು. 

ಈ ಪರಿಶೀಲನೆಗೆ ವಿಧಾನಸೌಧ ನಿಲ್ದಾಣದಿಂದ ಟ್ರಿನಿಟಿ ಮಾರ್ಗವಾಗಿ ಹಲಸೂರು ನಿಲ್ದಾಣದವರೆಗೆ ಪ್ರಯಾಣಿಸಿದರು. 

ಟ್ರಿನಿಟಿ ನಿಲ್ದಾಣದ ಬಳಿ ಸಚಿವರ ಪರಿಶೀಲನೆ ವೇಳೆ ಕೆಲಕಾಲ ವಿಪರೀತ ಸಂಚಾರ ದಟ್ಟಣೆ ಉಂಟಾಯಿತು. ಮೊದಲೇ ದುರಸ್ತಿ ಕಾಮಗಾರಿಗಾಗಿ ಹೈಡ್ರಾಲಿಕ್‌ ಜಾಕ್‌ ಅಳವಡಿಸಿದ ಆಧಾರ ಸ್ತಂಭಗಳು ರಸ್ತೆ ಆವರಿಸಿವೆ. ಸಚಿವರ ಪರಿಶೀಲನೆ ವೇಳೆ ವಾಹನ ಸಂಚಾರ ನಿರ್ಬಂಧಿಸಲಾಯಿತು. ವಾಹನ ಸವಾರರು ಪರದಾಡಬೇಕಾಯಿತು. 

ದುರಸ್ತಿಗೆ ಒಳಗಾಗಲಿರುವ ಭಾಗ ಪರಿಶೀಲಿಸಿ ಮಾತನಾಡಿದ ಅವರು, ‘ಕ್ರಾಸ್‌ಬೀಮ್‌ ಬಿರುಕನ್ನು ದೆಹಲಿ ಹಾಗೂ ಬೆಂಗಳೂರಿನ ತಾಂತ್ರಿಕ ತಜ್ಞರು ಪರಿಶೀಲಿಸಿದ್ದಾರೆ. ದುರಸ್ತಿ ಕಾಮಗಾರಿ ಆರಂಭವಾಗಿದೆ. ಪಿಲ್ಲರ್‌ ಮೇಲ್ಭಾಗದ ಕ್ರಾಸ್‌ ಬೀಮ್‌ನಲ್ಲಿ ಸಮಸ್ಯೆ ಕಂಡುಬಂದಿದೆ. ಬೀಮ್‌ ಮೇಲ್ಭಾಗದ ಸ್ಪೇರ್‌ ರಿಂಗ್‌ ಸ್ವಲ್ಪ ಜರುಗಿದೆ. ಆದರೆ ಇದರಿಂದ ಯಾವುದೇ ತೊಂದರೆ ಇಲ್ಲ. ಇದರಿಂದ ಜನಸಾಮಾನ್ಯರು ಆತಂಕಕ್ಕೆ ಒಳಗಾಗಬೇಕಿಲ್ಲ’ ಎಂದು ಹೇಳಿದರು.

‘ಈ ಬಿರುಕಿನಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಇಡೀ ಮೆಟ್ರೊ ಮಾರ್ಗವನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ತಜ್ಞರಿಂದ ಪರಿಶೀಲನೆ

ಹೈಡ್ರಾಲಿಕ್‌ ಜಾಕ್‌ ಅಳವಡಿಸಲಾದ ಆಧಾರ ಸ್ತಂಭಗಳಿಗೆ ಹೊಂದಿಕೊಂಡಂತೆ ಅಟ್ಟಣಿಗೆ ನಿರ್ಮಿಸಲಾಗಿದೆ. ನಿರ್ಮಾಣ ಕ್ಷೇತ್ರದ ತಜ್ಞರು ಜತೆ ಮೆಟ್ರೊ ನಿಗಮದ ಎಂಜಿನಿಯರ್‌ಗಳು ಸೇರಿ ಸಮಸ್ಯೆಯುಳ್ಳ ಭಾಗವನ್ನು ಪರಿಶೀಲಿಸಿದರು. ಸಮಸ್ಯೆಯ ವ್ಯಾಪಕತೆಗೆ ತಕ್ಕಂತೆ ಕಾಮಗಾರಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದರು.

ಪ್ರಾಥಮಿಕ ಹಂತದ ಸಮೀಕ್ಷೆ, ಕೆಲಸಕ್ಕೆ ತಗಲುವ ಅವಧಿ, ಕಾಂಕ್ರಿಟ್‌ ಗಟ್ಟಿಯಾಗಲು ಬೇಕಾಗುವ ಸಮಯ ಇತ್ಯಾದಿ ಲೆಕ್ಕಾಚಾರ ಹಾಕಲಾಗಿದೆ. ಕಾಮಗಾರಿಗೆ ಬೇಕಾದ ಯಂತ್ರಗಳು ಸ್ಥಳಕ್ಕೆ ಬಂದಿವೆ. ಕಾಂಕ್ರಿಟ್‌ ಮಿಕ್ಸರ್‌ ಮತ್ತು ಮೇಲ್ಭಾಗಕ್ಕೆ ಪೂರೈಕೆ ವ್ಯವಸ್ಥೆಯನ್ನು ಕಾಮಗಾರಿಯ ಮುನ್ನಾದಿನ ತರಿಸಲಾಗುತ್ತದೆ ಎಂದು ನಿಗಮದ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !