ಮೈಷುಗರ್‌ ಕಾರ್ಖಾನೆ ಕಾರ್ಮಿಕರ ಸ್ವಯಂ ನಿವೃತ್ತಿ

7
ಕಾರ್ಮಿಕರು ಅರ್ಜಿ ಸಲ್ಲಿಸಲು ಡಿ. 17 ಕೊನೆಯ ದಿನಾಂಕ, ಜ. 1ರಿಂದ ಕಾರ್ಖಾನೆ ಸ್ಥಗಿತ?

ಮೈಷುಗರ್‌ ಕಾರ್ಖಾನೆ ಕಾರ್ಮಿಕರ ಸ್ವಯಂ ನಿವೃತ್ತಿ

Published:
Updated:
Deccan Herald

ಮಂಡ್ಯ: ಮೈಷುಗರ್‌ ಕಾರ್ಖಾನೆ ನೌಕರರ ಸ್ವಯಂ ನಿವೃತ್ತಿಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಕಾಯಂ ಕಾರ್ಮಿಕರನ್ನು ಮನೆಗೆ ಕಳುಹಿಸಲು ಸಿದ್ಧತೆ ನಡೆಸಿದ್ದು ಜ. 1ರಿಂದ ಕಾರ್ಖಾನೆಯ ಚಕ್ರಗಳು ಮತ್ತೊಮ್ಮೆ ಸ್ಥಗಿತಗೊಳ್ಳಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.

ಡಿ.12ರಂದು ಬೆಂಗಳೂರಿನಲ್ಲಿ ನಡೆದ ಮೈಷುಗರ್ ಆಡಳಿತ ಮಂಡಳಿ ಸಭೆಯಲ್ಲಿ ನೌಕರರ ಸ್ವಯಂ ನಿವೃತ್ತಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತ ಪ್ರಕಟಣೆಯನ್ನು ಕಾರ್ಖಾನೆ ಕಟ್ಟಡದ ಫಲಕದಲ್ಲಿ ಪ್ರದರ್ಶಿಸಲಾಗಿದೆ. ಈಗಾಗಲೇ 50 ಕಾರ್ಮಿಕರು ಸ್ವಯಂ ನಿವೃತ್ತಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಲು ಡಿ. 17 ಕೊನೆಯ ದಿನವಾಗಿದೆ. ಆಡಳಿತ ಮಂಡಳಿ ಹಾಗೂ ನೌಕರರ ಸಂಘದ ನಡುವೆ ಮಾತುಕತೆ ನಡೆದಿದ್ದು ಕಾರ್ಮಿಕರು ನಿವೃತ್ತಿಗೆ ಒಪ್ಪಿಗೆ ನೀಡಿದ್ದಾರೆ. ಒಡಂಬಡಿಕೆಯಂತೆ ಒಂದೆರಡು ತಿಂಗಳುಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಲಿದೆ.

ಸದ್ಯ ಕಾರ್ಖಾನೆಯಲ್ಲಿ 323 ಕಾಯಂ ಕಾರ್ಮಿಕರಿದ್ದಾರೆ. ಅವರ ಜೊತೆಗೆ 30 ಗುತ್ತಿಗೆ, 150 ದಿನಗೂಲಿ ನೌಕರರು ಇದ್ದಾರೆ. ಸ್ವಯಂ ನಿವೃತ್ತಿ ಯೋಜನೆ ಕಾಯಂ ನೌಕರರಿಗೆ ಮಾತ್ರ ಅನ್ವಯವಾಗಲಿದೆ. ನೌಕರರಿಗೆ ನಿವೃತ್ತಿ ಭತ್ಯೆಗಳ ಜೊತೆಗೆ ಹೆಚ್ಚುವರಿ ವೇತನ ನೀಡಲು ಆಡಳಿತ ಮಂಡಳಿ ಒಪ್ಪಿದೆ. ಒಂದು ವರ್ಷ ಸೇವಾ ಅವಧಿಯುಳ್ಳ ನೌಕರರಿಗೆ ₹ 2 ಲಕ್ಷ, 2 ವರ್ಷ ಸೇವಾ ಅವಧಿ ಉಳ್ಳವರಿಗೆ ₹ 4 ಲಕ್ಷ, 3 ರಿಂದ 5 ವರ್ಷ ಅವಧಿಯುಳ್ಳವರಿಗೆ ₹ 6.5 ಲಕ್ಷ, 5 ವರ್ಷಕ್ಕಿಂತ ಹೆಚ್ಚು ಅವಧಿ ಇರುವವರಿಗೆ ₹ 8.5 ಲಕ್ಷ ಪ್ಯಾಕೇಜ್‌ ನೀಡುವುದಾಗಿ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.

‘ನೌಕರರಿಗೆ ಸಂಬಳ ಕೊಡಲು ಕಾರ್ಖಾನೆ ಬಳಿ ಹಣವಿಲ್ಲ, ಆದರೆ ನಿಗದಿತ ಪ್ಯಾಕೇಜ್‌ ಹಣ ಕೊಟ್ಟು ಕಾರ್ಮಿಕರನ್ನು ಮನೆಗೆ ಕಳುಹಿಸಲು ಹಣವಿದೆ. ಕಾರ್ಮಿಕರು ಇದ್ದರೆ ಎಲ್ಲದಕ್ಕೂ ಪ್ರಶ್ನೆ ಮಾಡುತ್ತಾರೆ, ಹೀಗಾಗಿ ನಮ್ಮನ್ನು ಸಾಗಹಾಕಲಾಗುತ್ತಿದೆ. ಈ ನಿರ್ಧಾರದ ಹಿಂದೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಹುನ್ನಾರ ಅಡಗಿದೆ. ಮೈಷುಗರ್ ಆಸ್ತಿ ಕಬಳಿಸಲು ಕೆಲವರು ಸಜ್ಜಾಗಿದ್ದಾರೆ. 2014ರ ನಂತರ ನಮ್ಮ ವೇತನ ಪರಿಷ್ಕರಣೆ ಆಗಿಲ್ಲ. 2017ರಿಂದ ಅನ್ವಯವಾಗುವಂತೆ ನಮಗೆ ಹೊಸ ವೇತನ ಬರಬೇಕಾಗಿತ್ತು. ಆ ಹಣವನ್ನು ನೋಡುವುದಕ್ಕೂ ಮೊದಲು ನಾವು ಮೈಷುಗರ್‌ ತೊರೆಯಬೇಕಾಗಿದೆ’ ಎಂದು ಕಾರ್ಮಿಕರೊಬ್ಬರು ನೋವು ವ್ಯಕ್ತಪಡಿಸಿದರು.

ಜ.1ರಿಂದ ಕಾರ್ಖಾನೆ ಸ್ಥಗಿತ?: ಕಾರ್ಖಾನೆಗೆ ಕಬ್ಬು ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಕಾರ್ಖಾನೆ ಸ್ಥಗಿತಗೊಳಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ನಿತ್ಯ 5 ಸಾವಿರ ಟನ್‌ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದ್ದ ಯಂತ್ರಗಳನ್ನು 3 ಸಾವಿರ ಕ್ವಿಂಟಲ್‌ಗೆ ನಿಗದಿ ಮಾಡಿಕೊಳ್ಳಲಾಗಿದೆ. ಆದರೆ ಅಷ್ಟೂ ಕಬ್ಬು ಕಾರ್ಖಾನೆಗೆ ಪೂರೈಕೆಯಾಗುತ್ತಿಲ್ಲ. ದಿನಕ್ಕೆ ಕೇವಲ 700–800 ಟನ್‌ ಮಾತ್ರ ಅರೆಯಲಾಗುತ್ತಿದೆ. ಇದರಿಂದ ಯಂತ್ರಗಳು ಹಾಳಾಗುತ್ತಿವೆ. ಇಳುವರಿಯೂ ಕುಗ್ಗಿದೆ, ಸಕ್ಕರೆ ಕಳಪೆಯಾಗುತ್ತಿದೆ, ಮಾರಾಟವೂ ಆಗುತ್ತಿಲ್ಲ, ಐದು ತಿಂಗಳುಗಳಿಂದ ಕಾರ್ಮಿಕರಿಗೆ ವೇತನವನ್ನೂ ನೀಡಿಲ್ಲ, ರೈತರಿಗೆ ನೀಡಬೇಕಾದ ಕಬ್ಬು ಪೂರೈಕೆಯ ಬಾಕಿಯನ್ನೂ ಪಾವತಿಸಿಲ್ಲ. ಈ ಎಲ್ಲ ಕಾರಣಗಳಿಂದ ಕಾರ್ಖಾನೆ ಸ್ಥಗಿತಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

‘ಮೈಷುಗರ್‌ಗೆ ಆಗಾಗ ಗ್ಲುಕೋಸ್‌ (ಹಣ) ಕೊಡಬೇಕು. ಈಚೆಗೆ ಸರ್ಕಾರ ₹ 20 ಕೋಟಿ ಗ್ಲುಕೋಸ್‌ ಕೊಟ್ಟಿತ್ತು. ಅದು ಈಗ ಮುಗಿದು ಹೋಗಿದೆ. ಹೀಗಾಗಿ ಕಾರ್ಖಾನೆ ಮುಚ್ಚುವ ಹಂತಕ್ಕೆ ಬಂದಿದೆ. ಮತ್ತೆ ಆರಂಭಗೊಳ್ಳಲು ಮತ್ತೊಮ್ಮೆ ಗ್ಲುಕೋಸ್‌ ಕೊಡಬೇಕು’ ಎಂದು ರೈತ ಮುಖಂಡ ಕೆ.ಎಸ್‌.ನಂಜುಂಡೇಗೌಡ ಮೈಷುಗರ್‌ ಸ್ಥಿತಿಯನ್ನು ವರ್ಣಿಸಿದರು.

**

ಹೊರಗುತ್ತಿಗೆ ಕಾರ್ಮಿಕರ ನೇಮಕ

‘ಈಗ ಎಲ್ಲೆಡೆ ಭತ್ತ ಕೊಯ್ಲು ನಡೆಯುತ್ತಿದ್ದು ಕಬ್ಬು ಪೂರೈಕೆ ಕಡಿಮೆಯಾಗಿದೆ. ಇದರಿಂದ ಜನವರಿಯಲ್ಲಿ ಕೆಲ ಕಾಲ ಕಾರ್ಖಾನೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಸ್ವಯಂ ನಿವೃತ್ತಿ ಪ್ರಕ್ರಿಯೆ ಮುಗಿದ ನಂತರ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನೇಮಕ ಮಾಡಿಕೊಂಡು ಕಾರ್ಖಾನೆ ನಡೆಸಲಾಗುವುದು’ ಎಂದು ಮೈಷುಗರ್‌ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಬೋರೇಗೌಡ ಹೇಳಿದರು.

‘ಕಾರ್ಖಾನೆ ಇನ್ನೂ 60 ಸಾವಿರ ಟನ್‌ ಒಪ್ಪಿತ ಕಬ್ಬು ಅರೆಯಬೇಕು. ಸ್ಥಗಿತಗೊಳಿಸುವ ಉದ್ದೇಶವಿದ್ದರೆ ಈ ಬಗ್ಗೆ ರೈತರಿಗೆ ನೋಟಿಸ್‌ ನೀಡಬೇಕು. ಯಾವುದೇ ಸೂಚನೆ ಇಲ್ಲದೆ ಕಾರ್ಖಾನೆ ನಿಲ್ಲಿಸುವಂತಿಲ್ಲ. 2015–16ರಲ್ಲಿ ಆದಂತೆ ಬೇರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಲು ಸಾಗಣೆ ವೆಚ್ಚವನ್ನು ಕಾರ್ಖಾನೆಯೇ ನೀಡಬೇಕು’ ಎಂದು ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್‌.ಕೃಷ್ಣ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !