ಹನಿ ನೀರಿಗಾಗಿ ಹೊಲಗಳಿಗೆ ಅಲೆದಾಟ

6
ಜಾಯಗಾಂವ: ರಸ್ತೆ ಮೇಲೆ ಮನೆಗಳ ಹೊಲಸು ನೀರು

ಹನಿ ನೀರಿಗಾಗಿ ಹೊಲಗಳಿಗೆ ಅಲೆದಾಟ

Published:
Updated:
Deccan Herald

ಭಾಲ್ಕಿ: ಕೈ ಕೊಟ್ಟ ಕೊಳವೆ ಬಾವಿ, ಕೊಡ ನೀರಿಗಾಗಿ ದೂರದ ಹೊಲಗಳಿಗೆ ಅಲೆದಾಟ, ಎಲ್ಲೆಡೆ ನಿರ್ಮಾಣವಾಗದ ಸಿಸಿ ರಸ್ತೆ, ಚರಂಡಿ, ರಸ್ತೆ, ಮನೆಗಳ ಮುಂದೆ ಹೊಲಸು ನೀರು, ವಿಪರೀತ ಸೊಳ್ಳೆಗಳ ಕಾಟ, ಅಪಾಯವನ್ನು ಆಹ್ವಾನಿಸುವ ಮನೆಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ...ಹೀಗೆ ನಾನಾ ಸಮಸ್ಯೆಗಳಿಂದ ಬಳಲುತ್ತಿರುವ ಗ್ರಾಮ ಜಾಯಗಾಂವ.

ಇದು ತಾಲ್ಲೂಕು ಕೇಂದ್ರದಿಂದ 7 ಕಿ.ಮೀ ದೂರದಲ್ಲಿದ್ದು, ತೆಲಗಾಂವ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ.

ಗ್ರಾಮದ ಪರಿಶಿಷ್ಟ ಜಾತಿಯ ಓಣಿಯಲ್ಲಿ ಇದ್ದ 2 ಕೊಳವೆ ಬಾವಿ, 1 ಬಾವಿಯ ಜಲಮೂಲ ಬತ್ತಿ ಹೋಗಿದೆ. ಮನೆಗಳ ನಳಗಳಿಗೆ 10-15 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಕುಡಿಯಲು, ನಿತ್ಯದ ಕಾರ್ಯಗಳಿಗೆ ನೀರು ತರಲು ದೂರದ ಹೊಲಗಳಿಗೆ ಖಾಲಿ ಕೊಡ ಹಿಡಿದು ಮಹಿಳೆಯರು, ಮಕ್ಕಳು, ವಯೋವೃದ್ಧರು ಅಲೆದಾಡುತ್ತಿದ್ದೇವೆ. ಕೆಲವರು ನೀರು ಒಯ್ಯಲು ಅನುಮತಿಸುತ್ತಿದ್ದಾರೆ. ಇನ್ನು ಕೆಲವರು ನಿರಾಕರಿಸುತ್ತಿದ್ದಾರೆ. ದೂರದ ಹೊಲಗಳಿಗೆ ತೆರಳಿದಾಗ ಮಧ್ಯದಲ್ಲಿ ವಿದ್ಯುತ್ ಕೈ ಕೊಟ್ಟರಂತು ಕಥೆ ಮುಗಿಯಿತು. ಅನಿವಾರ್ಯವಾಗಿ ಸಣ್ಣ ಹೊಂಡದಲ್ಲಿರುವ ಅಶುದ್ಧ ನೀರನ್ನೇ ಬಟ್ಟೆ ಒಗೆಯಲು, ದನಗಳಿಗೆ ಕುಡಿಸಲು ಬಳಸುತ್ತಿದ್ದೇವೆ ಎಂದು ಸಮಸ್ಯೆಯ ಗಂಭೀರತೆ ಕುರಿತು ಗ್ರಾಮದ ಲತಾ, ಸ್ಯಾಮುವೆಲ್ ಮಾಳಗೆ, ಜಹಾಂಗೀರ್ ಸಯ್ಯದ್, ಲತಾ ತಿಳಿಸಿದರು.

ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಿದ ಸಿಸಿ ರಸ್ತೆ ಕೆಲವೆಡೆ ಹಾಳಾಗಿದೆ. ಕೆಲವೆಡೆ ಒಂದು ಭಾಗದಲ್ಲಿ ಮಾತ್ರ ಚರಂಡಿ ನಿರ್ಮಿಸಲಾಗಿದೆ. ಉಳಿದೆಡೆ ನಿರ್ಮಿಸಿಯೇ ಇಲ್ಲ. ಹೊಲಸು ನೀರು ರಸ್ತೆ ಮಧ್ಯೆ ಹರಿಯುತ್ತಿದೆ. ಮನೆಗಳ ಮುಂದೆ ಸಂಗ್ರಹವಾಗುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೇಳತೀರದಷ್ಟು ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ನಮ್ಮನ್ನು ಆವರಿಸಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಇನ್ನು ಗ್ರಾಮದಲ್ಲಿ ಒಟ್ಟಾರೆ ಏಳೆಂಟು ಕೊಳವೆ ಬಾವಿಗಳು ಇವೆ. ಎಲ್ಲವೂ ನೀರಿಲ್ಲದೆ ಬತ್ತಿ ಹೋಗಿವೆ. ಸದ್ಯ ರೇವಪ್ಪಯ್ಯ ದೇವಸ್ಥಾನ ಪಕ್ಕದ ಕೊಳವೆ ಬಾವಿಯಲ್ಲಿ ಮಾತ್ರ ನೀರು ಇದೆ. ಹೀಗಾಗಿ ಎಲ್ಲ ಜನರು ಇಲ್ಲಿಯೇ ಬರುತ್ತಿರುವುದರಿಂದ ಮನೆಯ ಎಲ್ಲ ಕೆಲಸ ಬಿಟ್ಟು ಕೊಡ ನೀರಿಗಾಗಿ ಗಂಟೆಗಟ್ಟಲೇ ಕಾಯಬೇಕಾಗಿದೆ. ನಡುವೇ ವಿದ್ಯುತ್ ಸಮಸ್ಯೆ ಆದಲ್ಲಿ ಇಡೀ ದಿನವೇ ನೀರು ತುಂಬುವುದರಲ್ಲಿ ಹಾಳಾಗುತ್ತಿದೆ.

ಸಂಬಂಧಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಾಮದ ವಿವಿಧೆಡೆ ನೀರಿನ ಲಭ್ಯತೆ ಆಧರಿಸಿ ನೂತನವಾಗಿ ಕೊಳವೆ ಬಾವಿ ಕೊರೆಯಿಸಿ ನೀರಿನ ಬವಣೆಯನ್ನು ತಪ್ಪಿಸಬೇಕು ಎಂದು ಜನರು ಒತ್ತಾಯಿಸುತ್ತಾರೆ.

ಕೆರೆ ಹೊಳೆತ್ತಲು ಆಗ್ರಹ:

ನೀರಿಲ್ಲದೆ ಬತ್ತಿ ಹೋಗಿರುವ ಗ್ರಾಮದ ಕೆರೆಯಲ್ಲಿನ ಹೊಳು ತೆಗೆದು ಆಳ ಹೆಚ್ಚಿಸಬೇಕು. ಮುಂದೆ ಮಳೆ ಬಂದಾಗ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡು ಅಂತರ್ಜಲ ಮಟ್ಟದಲ್ಲಿ ಏರಿಕೆ ಆಗುತ್ತದೆ. ಇದರಿಂದ ಸದ್ಯ ಬತ್ತಿರುವ ಬಹುತೇಕ ಕೊಳವೆ ಬಾವಿ, ಬಾವಿಗಳಲ್ಲಿ ನೀರು ಬರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಅಪಾಯ ಆಹ್ವಾನಿಸುತ್ತಿರುವ ವಿದ್ಯುತ್ ತಂತಿ:

ಪರಿಶಿಷ್ಟರ ವಾರ್ಡ್‍ನ ಕೆಲ ಮನೆಗಳ ಮೇಲ್ಛಾವಣಿ ಮೇಲಿಂದ ವಿದ್ಯುತ್ ತಂತಿ ಹಾದು ಹೋಗಿದೆ. ಜೋರಾಗಿ ಗಾಳಿ ಬೀಸಿದಾಗ ವಿದ್ಯುತ್ ತಂತಿ ಕಡಿದು ಮನೆಗಳ ಮೇಲೆ ಬೀಳುವ ಆತಂಕ ಕುಟುಂಬ ಸದಸ್ಯರನ್ನು ಕಾಡುತ್ತಿದೆ. ವಿದ್ಯುತ್ ಕಂಬ ಬದಲಾಯಿಸಲು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !