ಪ್ರಥಮ ಶಾಸಕ ಎಸ್.ಎಂ.ಲಿಂಗಪ್ಪ ಜನ್ಮಶತಮಾನೋತ್ಸವ

7
ನಾಡು ಕಂಡ ಅಪರೂಪದ ರಾಜಕಾರಣಿ, ಸಹಕಾರಿ ಮುಂದಾಳು, ಅಪ್ಪಟ ಶಿಕ್ಷಣ ಪ್ರೇಮಿ

ಪ್ರಥಮ ಶಾಸಕ ಎಸ್.ಎಂ.ಲಿಂಗಪ್ಪ ಜನ್ಮಶತಮಾನೋತ್ಸವ

Published:
Updated:
Deccan Herald

ಕೆ.ಆರ್.ಪೇಟೆ: ಅಪರೂಪದ ರಾಜಕಾರಣಿ, ತಾಲ್ಲೂಕಿನ ಪ್ರಥಮ ಶಾಸಕ ಹಾಗೂ ಸಹಕಾರ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ದಿ.ಎಸ್.ಎಂ.ಲಿಂಗಪ್ಪ ಅವರ ಜನ್ಮ ಶತಮಾನೋತ್ಸವ ಪಟ್ಟಣದಲ್ಲಿ ಮಂಗಳವಾರ ನಡೆಯಲಿದೆ.

ಶತಮಾನದ ಹಿಂದೆ ಇದೇ ದಿನ ಎಸ್.ಎಂ.ಲಿಂಗಪ್ಪ ಅವರು ತಾಲ್ಲೂಕಿನ ಶೀಳನೆರೆ ಗ್ರಾಮದ ವ್ಯವಸಾಯವನ್ನೇ ಅವಲಂಬಿಸಿದ ಸಾಹುಕಾರರ ಕುಟುಂಬದಲ್ಲಿ ಜನಿಸಿದರು. ತಂದೆ ಮರಿಗೌಡ, ತಾಯಿ ಮಾದಮ್ಮ. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದ ಕೂಲಿಮಠದಲ್ಲಿ ಪಡೆದ ಅವರು ನಂತರ ಮೇಲುಕೋಟೆ, ಮೈಸೂರಿನಲ್ಲಿ ಪಡೆದರು . ಕೊಲ್ಲಾಪುರದಲ್ಲಿ ಕಾನೂನು ಪದವಿ ಪಡೆದರು.

ಇವರ ದೊಡ್ಡಪ್ಪನ ಮಗ, ಹಿರಿಯ ಸಹೋದರ ಎಸ್.ಟಿ ತಮ್ಮಯ್ಯ ಗೌಡರು ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ನಾಲ್ಕು ಬಾರಿ ಕೆ.ಆರ್.ಪೇಟೆ ತಾಲ್ಲೂಕನ್ನು ಪ್ರತಿನಿಧಿಸಿದರು. ದೊಡ್ಡಪ್ಪನ ಇನ್ನೊಬ್ಬ ಮಗ ಸಾಹುಕಾರ್ ಎಸ್.ಕೆ.ಚಿಕ್ಕಣ್ಣಗೌಡರು ಕೆ.ಆರ್.ಪೇಟೆಯಲ್ಲಿ ಪ್ರಥಮಬಾರಿಗೆ ಸ್ಥಾಪಿಸಿದ್ದ ಒಕ್ಕಲಿಗರ ವಿದ್ಯಾರ್ಥಿನಿಲಯದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಇವರಿಬ್ಬರ ಸಹಕಾರ- ಪ್ರೋತ್ಸಾಹದಿಂದಾಗಿ ಲಿಂಗಪ್ಪ ಅವರು ತಾಲ್ಲೂಕಿನ ರಾಜಕೀಯ ಪ್ರವೇಶಿಸಿದರು. ರಾಜಕೀಯ ಪ್ರವೇಶಿಸಿದ ಅವರು ಸಹಕಾರಸಂಘಗಳ ಸ್ಥಾಪನೆಗೆ ಮೊದಲ ಆದ್ಯತೆ ನೀಡಿದರು. ಕೆ.ಆರ್.ಪೇಟೆಯಲ್ಲಿ ಪ್ರಥಮ ಬಾರಿಗೆ ಸಹಕಾರಸಂಸ್ಥೆ ಸದೃಢಗೊಳಿಸಿದರು. ಟಿ.ಎ.ಪಿ.ಸಿ.ಎಂಎಸ್ ಸಹಕಾರಸಂಘ ಸ್ಥಾಪಿಸಿ ಅದನ್ನು ರಾಜ್ಯಕ್ಕೆ ಪ್ರಥಮ ಸಹಕಾರಿ ಸಂಸ್ಥೆಯಾಗಿ ರೂಪಿಸಿದ ಹೆಗ್ಗಳಿಕೆ ಅವರದು.

19 ವರ್ಷಗಳ ಕಾಲ ಅದರ ಅಧ್ಯಕ್ಷರಾಗಿ, ತಮ್ಮ ಉಸಿರು ಇರುವವರೆವಿಗೂ ಅದರ ನಿರ್ದೇಶಕರಾಗಿ ಕಾರ್ಯ ಕಾರ್ಯ ನಿರ್ವಹಿಸಿದ ಲಿಂಗಪ್ಪ ನವರು ತಾಲ್ಲೂಕಿನ ಹಳ್ಳಿ-ಹಳ್ಳಿಯಲ್ಲೂ ಪ್ರಾಥಮಿಕ ಸಹಕಾರ ಸಂಘ ಸ್ಥಾಪಿಸುವಲ್ಲಿ ಶ್ರಮಿಸಿದರು. ತಾಲ್ಲೂಕು ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾಗಿಯೂ ಅವರು ದಶಕಗಳ ಕಾಲ ಕೆಲಸ ಮಾಡಿದರು.

1952ರಲ್ಲಿ ಮೊದಲ ಬಾರಿಗೆ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. 1952.1972,1978 ರಲ್ಲಿ ಗೆದ್ದು ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಅವರು ತಾಲ್ಲೂಕಿನ ಕೆರೆ-ಕಟ್ಟೆಗಳ ಅಭಿವೃದ್ದಿಗೆ, ರಸ್ತೆ ಅಭಿವೃದ್ದಿಗೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಶ್ರಮಿಸಿದರು.

ಅತ್ಯಂತ ಸರಳವಾಗಿ , ಕ್ರಮ ಬದ್ಧವಾಗಿ ಮಾತನಾಡುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ , ಚಾಟಿ ಬೀಸುವ ಅವರ ಮಾತಿನ ವಾಕ್ಜರಿಗೆ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ, ವೀರೇಂದ್ರಪಾಟೀಲ್, ಡಿ.ದೇವರಾಜು ಅರಸ್, ಗುಂಡೂರಾವ್, ರಾಮಕೃಷ್ಣ ಹೆಗ್ಗಡೆ, ಎಸ್.ಎಂ.ಕೃಷ್ಣ, ಬಿ.ಡಿ.ಜತ್ತಿ ಸೇರಿ ಹಲವರು ಬೆರಗಾಗಿದ್ದರು. ವಿಧಾನಸಭೆಯ ನಡಾವಳಿಗಳ ರಚನೆಯ ಕಮಿಟಿಯ ಸದಸ್ಯರಾಗಿದ್ದ ಲಿಂಗಪ್ಪ ಸದನದಲ್ಲಿ ಸದಸ್ಯರು ಹೇಗೆ ನಡೆದುಕೊಳ್ಳಬೇಕೆಂಬ ಬಗ್ಗೆ ಅಪಾರ ಸಲಹೆ ನೀಡಿದ್ದರು.

ಶಿಕ್ಷಣ ಪ್ರೇಮಿಯಾಗಿದ್ದ ಲಿಂಗಪ್ಪ ನವರು ಗ್ರಾಮೀಣ ಪ್ರದೇಶದ ರೈತಾಪಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಆಶೆಯಿಂದ ಪಟ್ಟಣದಲ್ಲಿ ಗ್ರಾಮಭಾರತಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಆ ಕಾಲದಲ್ಲಿಯೇ ಸಿ.ಇ.ಟಿ ಮಾದರಿ ಪರಿಕ್ಷೆ ನಡೆಸಿ ಶಾಲೆಗೆ ಪ್ರವೇಶ ನೀಡಲಾಗುತ್ತಿತ್ತು. ಅಲ್ಲದೆ ಒಕ್ಕಲಿಗರ ಹಾಸ್ಟೆಲ್ ಕಟ್ಟಡಕ್ಕೆ ಕಾಯಕಲ್ಪ ನೀಡಿ ಅದು ಮುಂಚೂಣಿ ಸಂಸ್ಥೆಯಾಗುವಂತೆ ಮಾಡಿದರು. ಜೀವನಪೂರ್ತಿ ಬ್ರಹ್ಮಚಾರಿಯಾಗಿಯೇ ಉಳಿದು, ಒಕ್ಕಲಿಗರ ಹಾಸ್ಟೆಲ್ ಕಟ್ಟಡದಲ್ಲೇ ಆದರ್ಶದಿಂದ ಜೀವಿಸಿದ ಅವರು ಅವರು 1990ರಲ್ಲಿ ಇಹಲೋಕ ತ್ಯಜಿಸಿದರು.

‘ಅವರು ಮಂತ್ರಿಗಿರಿ, ವಿದಾನಪರಿಷತ್‌ ಸ್ಥಾನ ಸ್ವೀಕರಿಸಲಿಲ್ಲ. ಸರ್ಕಾರ ನೀಡಿದ ಬಿಡಿಎ ನಿವೇಶನವನ್ನೂ ತಿರಸ್ಕರಿಸಿ ಸರಳವಾಗಿ ಬದುಕಿದರು. ಅಂಥವರ ಸ್ಮರಣೆ ನಮ್ಮ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಿಗಬೇಕೆನ್ನುವ ಉದ್ದೇಶದಿಂದ ಸಾರ್ವಜನಿಕರು, ವಿವಿಧ ಸಂಸ್ಥೆಗಳ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಅವರ ಮೊಮ್ಮಗ, ಗ್ರಾಮಭಾರತಿ ವಿದ್ಯಾಸಂಸ್ಥೆಯ ಆಧ್ಯಕ್ಷ ಎಸ್.ಸಿ.ಕಿರಣ್ ಕುಮಾರ್ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !