ದೇಶದಲ್ಲಿ ಅಭಿವ್ಯಕ್ತಿಗೆ ಗ್ರಹಣ ಬಡಿದಿದೆ: ಲೇಖಕಿ ಗಾಯಿತ್ರಿ ಕಳವಳ

7
ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭ

ದೇಶದಲ್ಲಿ ಅಭಿವ್ಯಕ್ತಿಗೆ ಗ್ರಹಣ ಬಡಿದಿದೆ: ಲೇಖಕಿ ಗಾಯಿತ್ರಿ ಕಳವಳ

Published:
Updated:
Deccan Herald

ಕೋಲಾರ: ‘ದೇಶದಲ್ಲಿ ಅಭಿವ್ಯಕ್ತಿಗೆ ಗ್ರಹಣ ಬಡಿದಿದ್ದು, ಆಳುವ ಸರ್ಕಾರಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪ್ರತಿಬಂಧಕ ಹೇರುತ್ತಿವೆ’ ಎಂದು ಲೇಖಕಿ ಎನ್.ಗಾಯಿತ್ರಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಮಂಗಳವಾರ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದೊಡ್ಡ ಗಂಡಾಂತರ ಎದುರಾಗಿದೆ. ಇಂತಹ ವಿಷಮ ಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿಲ್ಲಬೇಕು’ ಎಂದು ಕಿವಿಮಾತು ಹೇಳಿದರು.

‘ಕೋಮುಶಕ್ತಿಗಳು ಅಕ್ಷರ ಶತೃಗಳಾಗಿ ಪರಿವರ್ತಿತವಾಗಿವೆ. ರಾಜ್ಯದಲ್ಲಿ ಸಾಹಿತಿಗಳು, ವಿಚಾರವಾದಿಗಳು ಹಾಗೂ ಚಿಂತಕರ ಮೇಲೆ ದಾಳಿ ನಡೆಯುತ್ತಿವೆ. ಸ್ವತಂತ್ರ ವಿಚಾರಶಕ್ತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಹೆಚ್ಚುತ್ತಿದೆ’ ಎಂದು ವಿಷಾದಿಸಿದರು.

‘ಜಾಗತೀಕರಣದ ಕಾಲಘಟ್ಟದಲ್ಲಿ ರಾಮಾಯಣದ ಕೋಮುವಾದಿ ಆವೃತ್ತಿಯು ಕೋಮುಹಿಂಸೆಯ ಪ್ರೇರಣೆಗೆ ಮಾಧ್ಯಮವಾಯಿತು. 80ರ ದಶಕದಲ್ಲೇ ದೃಶ್ಯ ಮಾಧ್ಯಮವು ಮಿಲಿಟೆಂಟ್‌ ರಾಮನನ್ನು ಪ್ರತಿಷ್ಠಾಪಿಸುವ ಮೂಲಕ ಸಾಂಸ್ಕೃತಿಕ ರಾಜಕಾರಣ ಆರಂಭವಾಯಿತು. ಕೋಮುವಾದ ಯಾವ ಪುರಾಣಗಳನ್ನು ರೂಪಕವಾಗಿ ಬಳಸಿ ಕೋಮುಹಿಂಸೆಗೆ ಪ್ರಚೋದನೆ ನೀಡುತ್ತಿದೆಯೋ ಅದೇ ಪುರಾಣ ರೂಪಕಗಳನ್ನು ಕನ್ನಡ ಕಾವ್ಯ ಪ್ರತಿರೋಧಕ್ಕೂ ಬಳಸಿಕೊಂಡಿದೆ’ ಎಂದರು.

‘ಕನಕ, ಕುವೆಂಪು, ಎಚ್.ವಿ.ಸಾವಿತ್ರಮ್ಮ ವಿಭಿನ್ನ ನೆಲೆಯಿಂದ ರಾಮಾಯಣದ ರೂಪಕಗಳನ್ನು ಮುರಿದು ಕಟ್ಟಿದ್ದಾರೆ. ಇವರು ಪ್ರತಿಗಾಮಿ ರಾಮಾಯಣದ ಆವೃತ್ತಿಯನ್ನು ನಿರಾಕರಿಸಿದ್ದಾರೆ. ದಲಿತ, ಜನಪದ ಹಾಗೂ ಬೌದ್ಧ ರಾಮಾಯಣದ ಸಂಪಾದನೆ ಕೂಡ ಇದರ ಭಾಗವಾಗಿಯೇ ನಡೆದಿದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯಕ್ಕೆ ಸೀಮಿತಗೊಂಡಿಲ್ಲ: ‘104 ವರ್ಷಗಳ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಪರಿಷತ್‌ ಸಾಹಿತ್ಯಕ್ಕಷ್ಟೇ ಸೀಮಿತಗೊಂಡಿಲ್ಲ. ಬದುಕಿಲ್ಲದೆ ಸಾಹಿತ್ಯವಿಲ್ಲ, ಸಂಸ್ಕೃತಿಯೂ ಇಲ್ಲ ಎಂಬ ನಂಬಿಕೆಯ ತಳಹದಿಯ ಮೇಲೆ ಕನ್ನಡ ನಾಡಿನ ನೆಲ, ಜಲ ಹಾಗೂ ನುಡಿಯ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ. ಸಾಹಿತ್ಯ ಚಟುವಟಿಕೆಯ ಜತೆಗೆ ನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಸ್ಯೆಗಳನ್ನು ಜನರ ಸಮಸ್ಯೆಗಳೆಂದು ಗುರುತಿಸಿ ಪರಿಹಾರಕ್ಕೆ ಮುಂದಾಗಿದೆ’ ಎಂದು ಹೇಳಿದರು.

‘ಕನ್ನಡಪರ ಹೋರಾಟವು ರೈತರ, ಕಾರ್ಮಿಕರ, ದಲಿತರ, ಮಹಿಳೆಯರ ಹಾಗೂ ಎಲ್ಲಾ ತಳ ಸಮುದಾಯಗಳ ಜನಪರ ಹೋರಾಟದೊಂದಿಗೆ ಸಮನ್ವಯ ಸಾಧಿಸಬೇಕು. ಜತೆಗೆ ಸಾಮಾಜಿಕ ಆರ್ಥಿಕ ಬದಲಾವಣೆಗೆ ನಡೆಯಬೇಕಾದ ಐಕ್ಯ ಹೋರಾಟದ ಅವಿಭಾಜ್ಯ ಅಂಗವಾಗಬೇಕು’ ಎಂದು ಸಲಹೆ ನೀಡಿದರು.

ಧರ್ಮ ನಿರಪೇಕ್ಷ ಸಿದ್ಧಾಂತ: ‘ಆಧುನಿಕ ಕನ್ನಡ ಕಾವ್ಯದ ಆರಂಭಕಾರರಾದ ತತ್ವಪದಕಾರರು ಅನುಭಾವ ಹಾಗೂ ಸೂಫಿ ಪರಂಪರೆಯ ಧರ್ಮ ನಿರಪೇಕ್ಷ ಸಿದ್ಧಾಂತವನ್ನು ಕಾವ್ಯದಲ್ಲಿ ಪ್ರತಿಪಾದಿಸಿದ್ದಾರೆ. ಮತ, ಭಾಷೆ, ಜಾತಿ, ಪಂಥ, ಲಿಂಗಗಳ ನಿರಾಕರಣೆಯ ಆರೂಢ ತತ್ವವು ಶಿಷ್ಟ ಧರ್ಮಗಳನ್ನು ತಿರಸ್ಕರಿಸುತ್ತದೆ. ಅನುಭಾವಿಕ ನೆಲೆ ಮತ್ತು ಜಾತ್ಯಾತೀತ ತತ್ವದ ಪ್ರತಿಪಾದನೆಯಲ್ಲಿ ಕನ್ನಡ ಸಾಹಿತ್ಯ ಉದಯವಾಯಿತು’ ಎಂದು ಅಭಿಪ್ರಾಯಪಟ್ಟರು.

‘ಕನ್ನಡ ಸಾಹಿತ್ಯವನ್ನು ಬಹು ಜನರ ಸಾಹಿತ್ಯವಾಗಿಸುವ ಸವಾಲು ಬರಹಗಾರರ ಮೇಲಿದೆ. ಮಾನವೀಯತೆಯ ಘನತೆ ಎತ್ತಿ ಹಿಡಿಯುವ, ಸಂವಿಧಾನದ ಸೂತ್ರಗಳಿಂದ ರೂಪಿತವಾದ ಸಮಾಜದ ಎಲ್ಲಾ ವರ್ಗದವರ ಸೃಜನಶೀಲ ಅಭಿವ್ಯಕ್ತಿ ಸಾಹಿತ್ಯವಾಗಬೇಕು’ ಎಂದು ಆಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !