ನಗರಸಭೆ ಅಧ್ಯಕ್ಷರಿಗೆ ಲೆಕ್ಕಾಧಿಕಾರಿ ನೋಟಿಸ್!

7

ನಗರಸಭೆ ಅಧ್ಯಕ್ಷರಿಗೆ ಲೆಕ್ಕಾಧಿಕಾರಿ ನೋಟಿಸ್!

Published:
Updated:

ಶಹಾಬಾದ: ನಗರಸಭೆ ಮುಂದಿನ ವರ್ಷದ ಖರ್ಚು ವೆಚ್ಚಗಳ, ಮತ್ತಿತರ ಲೆಕ್ಕಪತ್ರಗಳ ವಿವರ ಕೋರಿ ಜಿಲ್ಲಾ ಮಟ್ಟದ ಅಧಿಕಾರಿಗಳು ನಗರಸಭೆಯ ಲೆಕ್ಕಾಧಿಕಾರಿಗೆ ತಾಕೀತು ಮಾಡಿರುವ ಹಿನ್ನೆಲೆಯಲ್ಲಿ ಲೆಕ್ಕಾಧಿಕಾರಿಯೆ  ನಗರಸಭೆ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಿರುವ ಘಟನೆ ವರದಿಯಾಗಿದೆ.ನಗರಸಭೆ ಸದಸ್ಯರ ಮಧ್ಯೆ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿರುವ ಈ ವಿಷಯಕ್ಕೆ ಸಂಬಂಧಿಸಿದಂತೆ ಇದಕ್ಕೆ ಕಾರಣ ಅಧ್ಯಕ್ಷ, ಪೌರಾಯುಕ್ತರ ಮಧ್ಯದ ಹೊಂದಾಣಿಕೆಯ ಕೊರತೆಯೆ ಎಂದು ಹೇಳಲಾಗುತ್ತಿದೆ.‘ಪ್ರಜಾವಾಣಿ’ಗೆ ಲಭ್ಯವಾದ ಮಾಹಿತಿಗಳ ಪ್ರಕಾರ ಸಾಮಾನ್ಯ ಸಭೆ ಕರೆದು ಮುಂದಿನ ವರ್ಷದ ಆಯವ್ಯಯ ಮಂಡಿಸಲು ಲೆಕ್ಕಾಧಿಕಾರಿಗಳು ಅಧ್ಯಕ್ಷ ಮಹಮದ ರಫೀಕ್ ಕಾರೋಬಾರಿ ಮತ್ತು ಪೌರಾಯುಕ್ತ ಎಂ.ಬಿ.ನಡುವಿನಮನಿ ಅವರಿಗೆ ಹಲವು ಬಾರಿ ಕೋರಿದ್ದರು. ಅಧ್ಯಕ್ಷ ಹಾಗೂ ಪೌರಾಯುಕ್ತರ ಮಧ್ಯದ ಸಮನ್ವಯತೆ ಸಮಸ್ಯೆಯಿಂದ ಈಗಲೂ ಆಯವ್ಯಯ ಕುರಿತು ಯಾವುದೇ ನಿರ್ಣಯ ಕೈಗೊಳ್ಳದೆ ಇರುವುದು ಮತ್ತು ಜಿಲ್ಲಾ ಹಿರಿಯ ಅಧಿಕಾರಿಗಳು ಪದೆಪದೇ ಲೆಕ್ಕಾಧಿಕಾರಿಗಳನ್ನು ವಿವರ ಕೇಳುತ್ತಿರುವುದು ಇರುಸು ಮುರುಸಾಗುವಂತೆ ಮಾಡಿ, ಅನಿವಾರ್ಯ ವಾಗಿ ಅಧ್ಯಕ್ಷರಿಗೆ ನೋಟಿಸ್ ಜಾರಿಮಾಡಿದ್ದಾರೆ ಎನ್ನಲಾಗಿದೆ.  ನಗರಸಭೆ ಅಧ್ಯಕ್ಷ ನಗರದ ಪ್ರಥಮ ಪ್ರಜೆ. ಅಗತ್ಯಬಿದ್ದರೆ ಅಧಿಕಾರಿಗಳು ಅಥವಾ ಸಿಬ್ಬಂದಿಗೆ ಸೂಕ್ತ ಕೆಲಸ, ಕಾರ್ಯಚಟುವಟಿಕೆ ಕುರಿತು ಮಾಹಿತಿ ಕೇಳಿ ನೋಟಿಸ್ ಜಾರಿಗೊಳಿಸಬಹುದು. ಆದರೆ ಲೆಕ್ಕಾಧಿಕಾರಿಯೆ ನಗರಸಭೆ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿರುವುದು ನಗರಸಭೆ ಆಡಳಿತದಲ್ಲಿನ ದುರ್ಬಲತೆಯನ್ನು ತೋರಿಸುತ್ತದೆ ಎಂದು ನಗರಸಭೆ ಆಡಳಿತರೂಢ ಪಕ್ಷದ ಹಿರಿಯ ಸದಸ್ಯ ಅಬ್ದುಲ ರಬ್ ಬಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ಹಲವು ಸಮಸ್ಯೆಗಳ ಆಗರಾಗಿರುವ ಶಹಾಬಾದ ನಗರಸಭೆ, ಲೆಕ್ಕಾಧಿಕಾರಿಗಳ ಈ ನೋಟಿಸ್ ಪ್ರಕರಣ ಹೊಸ ಸಮಸ್ಯೆಯೊಂದನ್ನು ಹುಟ್ಟುಹಾಕಿದಂತಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry