ಜಾತಿಯ ಜಾಡು ಹಿಡಿದ ದೇಶದ ಅಭಿವೃದ್ಧಿ

7
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ದ್ವಾರಕನಾಥ್‌ ಮಾರ್ಮಿಕ ನುಡಿ

ಜಾತಿಯ ಜಾಡು ಹಿಡಿದ ದೇಶದ ಅಭಿವೃದ್ಧಿ

Published:
Updated:
Deccan Herald

ಕೋಲಾರ: ‘ದೇಶದಲ್ಲಿ ಅಭಿವೃದ್ಧಿ ಕೂಡ ಜಾತಿಯ ಜಾಡು ಹಿಡಿದು ಹೊರಟಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ಹೈಕೋರ್ಟ್‌ ಹಿರಿಯ ವಕೀಲ ಸಿ.ಎಸ್‌.ದ್ವಾರಕನಾಥ್‌ ಮಾರ್ಮಿಕವಾಗಿ ನುಡಿದರು.

‘ಪ್ರಗತಿಪರ ಕಾಳಜಿ ಹೊಂದಿದ್ದ ಮತ್ತು ಅಭಿವೃದ್ಧಿಯ ಕನಸು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕವಾಗಿ ಹೆಣಗಾಡುತ್ತಿದ್ದ ರಾಜಕಾರಣಿಗಳ ಪರಂಪರೆ ಕಣ್ಣ ಮುಂದೆಯೇ ಕಾಲಗರ್ಭದಲ್ಲಿ ಕರಗಿ ಹೋಗಿದೆ. ಪ್ರಗತಿಯ ಕಲ್ಪನೆ ಮತ್ತು ಆಲೋಚನೆಯಿಲ್ಲದ ಇಂದಿನ ರಾಜಕಾರಣ ಹಿನ್ನೆಡೆಗೆ ಕಾರಣವಾಗಿದೆ’ ಎಂದು ಪ್ರತಿಪಾದಿಸಿದರು.

‘ಜಿಲ್ಲೆಯು ರಾಜ್ಯದ ರಾಜಧಾನಿಗೆ ಹತ್ತಿರದಲ್ಲಿದ್ದರೂ ಅಭಿವ್ಯಕ್ತಿಯ ದೃಷ್ಟಿಯಿಂದ ಸಹಸ್ರಾರು ಮೈಲಿ ದೂರದಲ್ಲಿದ್ದಂತಿದೆ. ಜಿಲ್ಲೆಗೆ ಯಾವುದೇ ಅಭಿವೃದ್ಧಿ ಯೋಜನೆ ಬಾರದಿರುವುದು ಇಲ್ಲಿನ ರಾಜಕಾರಣ ಸೋತಿರುವುದರ ಮತ್ತು ಜನಪ್ರತಿನಿಧಿಗಳು ಪಂಚೇಂದ್ರಿಯ ಕಳೆದುಕೊಂಡಿರುವುದರ ಸಂಕೇತ’ ಎಂದರು.

‘ಚಿನ್ನದ ಗಣಿ ಕೆಜಿಎಫ್‌ನ ರಸ್ತೆಗಳ ಬದಿಯಲ್ಲಿ ಹಿಂದೆ ಬೋಗನ್ ವಿಲ್ಲಾ ಹೂವು ನಳನಳಿಸುತಿದ್ದವು. ಈಗ ಲಂಟಾನ ಗಿಡಗಳು, ಪಾರ್ಥೇನಿಯಂ ಪೊದೆಗಳು ಮೊಳೆತಿವೆ. ಲಿಟಲ್ ಇಂಗ್ಲೆಂಡ್ ಎಂದೇ ಗುರುತಿಸಿಕೊಂಡಿದ್ದ ಕೆಜಿಎಫ್ ಈಗ ಪಾಳು ಕೊಂಪೆಯಾಗಿದೆ. ಚಿನ್ನದ ಗಣಿ ಮುಚ್ಚಿದಾಗ 3,800 ಕಾರ್ಮಿಕ ಕುಟುಂಬಗಳು ಬೀದಿಗೆ ಬಿದ್ದವು. ಚಿನ್ನ ಬಾಚಿದವರ ಕೈಗೆ ಅನಿರೀಕ್ಷಿತವಾಗಿ ಕೆಲಸವಿಲ್ಲದೆ ಅನ್ನಕ್ಕಾಗಿ ಪರದಾಡುವ ಸ್ಥಿತಿ ಎದುರಾಯಿತು. ಕಾರ್ಮಿಕರು ಬಡತನದ ಜತೆಗೆ ಕ್ರಿಮಿನಲ್ ಪ್ರಕರಣಗಳ ಚಕ್ರವ್ಯೂಹದಲ್ಲಿ ಸಿಲುಕಿ ಕಂಗಾಲಾಗಿದ್ದಾರೆ’ ಎಂದು ವಿಷಾದಿಸಿದರು.

‘ಕೆಜಿಎಫ್‌ನಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿಯಿದೆ. ನೆಲದ ಆಳದಲ್ಲಿ ಜಲಸಾಗರವೇ ಇದೆ. ಬೆವರು ಬಸಿದು ದುಡಿಯಲು ಅಸಂಖ್ಯಾತ ಕಾರ್ಮಿಕರಿದ್ದಾರೆ. ಈ ಸಂಪನ್ಮೂಲ ಬಳಸಿಕೊಂಡು ಬೃಹತ್‌ ಕೈಗಾರಿಕೆ ಸ್ಥಾಪಿಸಲು ವಿಪುಲ ಅವಕಾಶಗಳಿವೆ. ಆದರೆ, ರಾಜಕಾರಣಿಗಳಿಗೆ ರಾಜಕೀಯ ಇಚ್ಛಾಶಕ್ತಿಯಿಲ್ಲ’ ಎಂದು ಕಿಡಿಕಾರಿದರು.

ಚಳವಳಿಗಳ ಬೀಡು: ‘ಕೋಲಾರ ಜಿಲ್ಲೆಯು ವೈದಿಕೇತರ ಪರಂಪರೆಯ ಜನ್ಮ ಭೂಮಿ. ಅತಿ ಹೆಚ್ಚು ಅಸ್ಪೃಶ್ಯರಿರುವ ಜಿಲ್ಲೆಯಲ್ಲಿ ಪ್ರತಿರೋಧದ ಕಾವ್ಯಗಳು ಜನಪದರದಲ್ಲಿ ಹರಿದವು. ದಲಿತ ಚಳವಳಿಯ ಬೆಳವಣಿಗೆಗೆ ಬುನಾದಿಯಾದ ಜಿಲ್ಲೆಯು ಚಳವಳಿಗಳ ಬೀಡು. ರಾಜ್ಯದಲ್ಲಿ ಕಮುನಿಸ್ಟ್ ಹೋರಾಟದ ಮೊದಲ ದನಿ ಜಿಲ್ಲೆಯಿಂದಲೇ ಮೊಳಗಿತು. ಅಂಬೇಡ್ಕರ್‌ರ ಆರ್‌ಪಿಐ ಚಳವಳಿ ಕೂಡ ಇಲ್ಲಿಯೇ ಪ್ರಭಾವಶಾಲಿಯಾಯಿತು. ಜಿಲ್ಲೆಯಲ್ಲಿ ಕೆಂಬಾವುಟ ಹಾರಾಡಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲು’ ಎಂದು ಬಣ್ಣಿಸಿದರು.

ಕೆಟ್ಟ ರಾಜಕಾರಣ: ‘ನೀರಿನ ಸಮಸ್ಯೆ ಜಿಲ್ಲೆಯನ್ನು ನಿರಂತರವಾಗಿ ಕಾಡುತ್ತಿದೆ. ನೀರಾವರಿ ಹೋರಾಟಗಳು ಮೊನಚು ಕಳೆದುಕೊಂಡಿವೆ. ಸರ್ಕಾರಗಳು ಹೋರಾಟಗಾರರನ್ನು ವಂಚಿಸುತ್ತಲೇ ಇವೆ. ಕೆ.ಸಿ.ವ್ಯಾಲಿ ಯೋಜನೆ ಮೂಲಕ ಬೆಂಗಳೂರಿನ ಕೊಳಚೆ ನೀರನ್ನು ಜಿಲ್ಲೆಗೆ ಹರಿಸಲಾಗುತ್ತಿದೆ. ಆದರೆ, ಈ ನೀರು ಬಳಕೆಗೆ ಯೋಗ್ಯವಲ್ಲವೆಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಜನರಿಗೆ ಕನಿಷ್ಠ ಶುದ್ಧ ನೀರು ಕೊಡಲಾಗದ ಸರ್ಕಾರಗಳು ಕೊಳಚೆ ನೀರಿಗಿಂತಲೂ ಕೆಟ್ಟ ರಾಜಕಾರಣ ಮಾಡುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯ ನೀರಿನ ಸಮಸ್ಯೆಗೆ ಕಾವೇರಿ ನದಿ ನೀರು ಶಾಶ್ವತ ಪರಿಹಾರ. ಜನರ ಮತ್ತು ನೆಲದ ದಾಹ ತಣಿಸುವ ಶಕ್ತಿ ಕಾವೇರಿ ನದಿಗೆ ಮಾತ್ರ ಇದೆ. ಈ ಬಗ್ಗೆ ಗಂಭೀರ ಚರ್ಚೆಯಾಗಬೇಕು ಮತ್ತು ಹೋರಾಟ ನಡೆಯಬೇಕು’ ಎಂದು ಸಲಹೆ ನೀಡಿದರು.

ಬದುಕಾಗಿ ನೋಡಿ: ‘ಕನ್ನಡವನ್ನು ಭಾಷೆಯಾಗಿ ನೋಡದೆ ಬದುಕಾಗಿ ನೋಡಬೇಕು. ಜಿಲ್ಲೆಯು ತ್ರಿಭಾಷಾ ನೆಲೆಯಾದರೂ ಕನ್ನಡದ ಹೋರಾಟಕ್ಕೆ ಎಂದಿಗೂ ಹಿನ್ನೆಡೆಯಾಗಿಲ್ಲ. ಸಂಸ್ಕೃತ ಹೇರಿಕೆ ವಿರುದ್ಧ ಸಿಡಿದೆದ್ದ ಗೋಕಾಕ್‌ ಚಳವಳಿಯ ಕಿಡಿ ಕೋಲಾರದಿಂದಲೇ ಹುಟ್ಟಿಕೊಂಡಿತು’ ಎಂದು ಹೇಳಿದರು.

‘ಸೋದರ ಭಾಷೆಗಳ ಬಾಂಧವ್ಯದ ಬಗೆಗಿನ ಅರಿವಿನ ಜತೆಗೆ ಕನ್ನಡದ ಬೆಳವಣಿಗೆಗೆ ಅಡ್ಡಿಯಾದ ಭಾಷೆಗಳ ಬಗ್ಗೆ ಎಚ್ಚರ ಅಗತ್ಯ. ಸಂಸ್ಕೃತ ಎಂಬ ವೈದಿಕಶಾಹಿ, ಹಿಂದಿ ಎಂಬ ಸಾಮ್ರಾಜ್ಯಶಾಹಿ ಹಾಗೂ ಇಂಗ್ಲೀಷ್ ಎಂಬ ವಸಾಹತುಶಾಹಿ ಭಾಷೆಗಳ ಬಗ್ಗೆ ಕನ್ನಡಿಗರು ಜಾಗೃತರಾಗಬೇಕು’ ಎಂದು ಕಿವಿಮಾತು ಹೇಳಿದರು.

ತಲೆ ಬರಡಾಗಿವೆ: ‘ಸದಾಶಿವ ಆಯೋಗದ ವರದಿ ಬಗ್ಗೆ ಮೌನವಾಗಿದ್ದ ಹಿಂದಿನ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಜಾತಿ ಸಮೀಕ್ಷೆಗಾಗಿ ₹ 175 ಕೋಟಿ ತೆರಿಗೆ ಹಣ ಖರ್ಚು ಮಾಡಿತು. ಬಳಿಕ ಜಾತಿ ಸಮೀಕ್ಷೆ ವರದಿಯನ್ನು ಕತ್ತಲಲ್ಲಿಟ್ಟಿತು. ಈ ತಪ್ಪನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ. ತಳ ಸಮುದಾಯಗಳ ಪ್ರಜ್ಞೆಯನ್ನು ಜಾಗೃತವಾಗಿ ಇಟ್ಟುಕೊಂಡ ಕಾಳಜಿ ಇರುವವರು ಅಧಿಕಾರದ ಚುಕ್ಕಾಣಿ ಹಿಡಿಯಬೇಕು’ ಎಂದು ಹೇಳಿದರು.

‘ಇಂದಿನ ರಾಜಕಾರಣಿಗಳಿಗೆ ಇತಿಹಾಸದ ಪುಟ ತಿರುವಿ ಹಾಕುವ ಕನಿಷ್ಠ ಪ್ರಜ್ಞೆಯಿಲ್ಲ. ಪ್ರಗತಿಪರ ಆಲೋಚನೆಯಿರಲಿ ಅಂತಹದ್ದೊಂದು ಕನಸು ಕೂಡ ಬೀಳಲಾರದಷ್ಟೂ ರಾಜಕಾರಣಿಗಳ ತಲೆ ಬರಡಾಗಿವೆ’ ಎಂದು ಟೀಕಿಸಿದರು.

ಕೇಡಿನ ಸಂಕೇತ: ‘ಸಂವಿಧಾನದತ್ತವಾಗಿ ದಕ್ಕಿರುವ ಮಾತನಾಡುವ ಹಕ್ಕನ್ನು ಕಸಿದುಕೊಳ್ಳುವ ವಾತಾವರಣ ಸೃಷ್ಟಿಯಾಗಿದೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಮಂತ್ರಿಯಾದವರೂ ಸಂವಿಧಾನದ ವಿರುದ್ಧ ವಿಷ ಕಾರುತಿದ್ದಾರೆ. ಸಾರ್ವಜನಿಕವಾಗಿ ಸಂವಿಧಾನ ಸುಡಲಾಗುತ್ತಿದೆ. ಸಂವಿಧಾನದ ವಿರುದ್ಧ ನಾಯಿ ನರಿಗಳೆಲ್ಲಾ ಘೀಳಿಡುತ್ತಿವೆ. ಇದು ದೇಶಕ್ಕೆ ಎದುರಾಗಿರುವ ಕೇಡಿನ ಸಂಕೇತ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸಂವಿಧಾನದ ಆಶಯ ಅನುಷ್ಠಾನಕ್ಕೆ ತರಬೇಕು ಎನ್ನುವವರಿಗೆ, ಪ್ರಜಾಪ್ರಭುತ್ವವಾದಿಗಳಿಗೆ, ಮಾನವತಾವಾದಿಗಳಿಗೆ ಜೀವ ಬೆದರಿಕೆಯಿದೆ. ಸಂವಿಧಾನ ಉಳಿಸುವುದು ಎಲ್ಲರ ಜವಾಬ್ದಾರಿ. ದೇಶದ ಬಗ್ಗೆ ಕಾಳಜಿ ಇರುವವರು ಪಟ್ಟಭದ್ರ ಶಕ್ತಿಗಳನ್ನು ಸದೆಬಡಿಯಬೇಕು. ದೇಶವು ಎದುರಿಸುತ್ತಿರುವ ಹಿಂಸೆ, ಪ್ರತಿಹಿಂಸೆ, ನೆತ್ತರ ದಾಹ, ಮೋಸ, ಪಿತೂರಿ, ಆತ್ಮದ್ರೋಹದಿಂದ ಹೊರಬರಲು ದೇಶವು ಬುದ್ದ ಭಾರತವಾಗಬೇಕು. ಸಂವಿಧಾನವೇ ದೇಶದ ಧರ್ಮವಾಗಬೇಕು’ ಎಂದು ಆಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !