ಗಡಿದಂ ಲಕ್ಷ್ಮೀವೆಂಕಟರಮಣ ಸ್ವಾಮಿ ದರ್ಶನಕ್ಕೆ ಭಕ್ತರ ದಂಡು

7

ಗಡಿದಂ ಲಕ್ಷ್ಮೀವೆಂಕಟರಮಣ ಸ್ವಾಮಿ ದರ್ಶನಕ್ಕೆ ಭಕ್ತರ ದಂಡು

Published:
Updated:
Deccan Herald

ಬಾಗೇಪಲ್ಲಿ: ವೈಕುಂಠ ಏಕಾದಶಿ ಅಂಗವಾಗಿ ಪಟ್ಟಣದ ಗಡಿದಂ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ನಡೆಯಿತು. ವೈಕುಂಠದ ಉತ್ತರದ ದ್ವಾರದ ಕೆಳಗೆ ಉಯ್ಯಾಲೆಯಲ್ಲಿ ಕೂರಿಸಿದ್ದ ದೇವರ ದರ್ಶನ ಪಡೆದ ಭಕ್ತರು, ತಮ್ಮ ಹರಕೆ ಸಲ್ಲಿಸಿದರು.

ತಾಲ್ಲೂಕಿನ ದೇವರಗುಡಿಪಲ್ಲಿ (ಗಡಿದಂ) ಭೂನೀಳಾ ಸಮೇತ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವರಿಗೆ ವಜ್ರ ಕವಚಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರ ಎಲ್ಲರ ಗಮನ ಸೆಳೆಯುತ್ತಿತ್ತು. 108 ಅಡಿ ಎತ್ತರದ ಮುಖ್ಯದ್ವಾರದ ಮೇಲೆ ದೇವರಿಗೆ ಪ್ರಿಯವಾದ ನಾಮಕ್ಕೆ ಬಣ್ಣ ಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ದೇವಾಲಯದ ಪ್ರಧಾನ ಅರ್ಚಕ ಕೆ.ಪ್ರಕಾಶ್‌ರಾವ್‌ ಮಾತನಾಡಿ, ಬೆಳಗಿನ ಜಾವ 3 ಗಂಟೆಗೆ ಅಭಿಷೇಕ, ಫಲಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ದೇವಾಲಯದ ಸುತ್ತ ಪ್ರಕಾರೋತ್ಸವ ನಡೆಯಿತು. ಉತ್ತರದ ದಿಕ್ಕಿನ ದ್ವಾರದ ಕೆಳಗೆ ಉಯ್ಯಾಲೆಯಲ್ಲಿ ಉತ್ಸವ ಮೂರ್ತಿಯ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು.

ದೇವಾಲಯಕ್ಕೆ ಬೆಂಗಳೂರು, ಚಿಕ್ಕಬಳ್ಳಾಪುರ, ಆಂಧ್ರಪ್ರದೇಶದ ಕದಿರಿ, ಗೋರಂಟ್ಲ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಬಂದಿದ್ದರು. ಸರತಿ ಸಾಲಿನಲ್ಲಿ ನಿಂತು ಮೂಲ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ನಂತರ ವೈಕುಂಠದ ದ್ವಾರದಲ್ಲಿ ದರ್ಶನ ಪಡೆದರು, ಹರಕೆ ಸಲ್ಲಿಸಿದರು. ಭಕ್ತರಿಗೆ ಲಾಡು ಪ್ರಸಾದ ವಿತರಿಸಲಾಯಿತು.

ವೈಕುಂಠ ದೇವರಿಗೆ ಅತ್ಯಂತ ಪ್ರಿಯ ತಾಣ. ಅಲಂಕಾರ ಪ್ರಿಯ. ಆದ್ದರಿಂದ ವೈಕುಂಠ ಏಕಾದಶಿಯಂದು ಎಣ್ಣೆ ಅಭಿಷೇಕ ಮುಗಿಸಿ, ಉತ್ತರ ದಿಕ್ಕಿನಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಇಂದು 25 ಸಾವಿರಕ್ಕೂ ಹೆಚ್ಚು ಮಂದಿ ದೇವರ ದರ್ಶನ ಪಡೆದರು ಎಂದು ದೇವಾಲಯದ ಅರ್ಚಕ ಅಶ್ವತ್ಥಪ್ಪಸ್ವಾಮಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !