ಕೆ.ಸಿ ವ್ಯಾಲಿ ನೀರು: ಆತಂಕ ಬೇಡ

7

ಕೆ.ಸಿ ವ್ಯಾಲಿ ನೀರು: ಆತಂಕ ಬೇಡ

Published:
Updated:
Deccan Herald

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆಯಡಿ ಜಿಲ್ಲೆಗೆ ಹರಿದು ಬರುತ್ತಿರುವ ನೀರಿನ ಶುದ್ಧತೆ ಬಗ್ಗೆ ಜನ ಆತಂಕಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಇಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತಿ ಸಮ್ಮೇಳನದ ವೇದಿಕೆಯಲ್ಲಿ ಸಂದೇಶ ರವಾನಿಸಿದರು.

ಸಮ್ಮೇಳನಾಧ್ಯಕ್ಷ ಸಿ.ಎಸ್‌.ದ್ವಾರಕನಾಥ್‌ ಅಧ್ಯಕ್ಷೀಯ ಭಾಷಣದ ವೇಳೆ ಕೆ.ಸಿ ವ್ಯಾಲಿ ನೀರಿನ ಶುದ್ಧತೆ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಕೆ.ಸಿ ವ್ಯಾಲಿ ನೀರಿನಲ್ಲಿ ಆತಂಕಪಡುವಂತಹ ವಿಷಕಾರಿ ಅಂಶಗಳಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೆ.ಸಿ ವ್ಯಾಲಿ ಯೋಜನೆಗೆ ₹ 1,650 ಕೋಟಿ ವೆಚ್ಚ ಮಾಡಲಾಗಿದೆ. ಬೆಂಗಳೂರಿನ ತ್ಯಾಜ್ಯ ನೀರನ್ನು 2 ಹಂತದಲ್ಲಿ ಸಂಸ್ಕರಿಸಲಾಗುತ್ತಿದೆ. ಒಂದು ದಿನ ಮಾತ್ರ ನೀರು ಹರಿಸುವಿಕೆಯಲ್ಲಿ ಲೋಪವಾಗಿತ್ತು. ನಂತರ ಪ್ರತಿನಿತ್ಯ ನೀರಿನ ಪರಿಶೀಲನೆ ಮಾಡಲಾಗುತ್ತಿದೆ. ಈ ಉದ್ದೇಶಕ್ಕೆ ಸರ್ಕಾರ ತಜ್ಞರ ಸಮಿತಿಯನ್ನೇ ರಚಿಸಿದೆ. ನಿಗದಿತ ಮಾನದಂಡದ ಪ್ರಕಾರವೇ ನೀರು ಸಂಸ್ಕರಿಸಿ ಹರಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಕರ್ನಾಟಕದಲ್ಲಿ ಸಮುದ್ರ, ಬೆಟ್ಟ ಗುಡ್ಡ, ಇತಿಹಾಸ, ಧಾರ್ಮಿಕ ಕ್ಷೇತ್ರ ಎಲ್ಲವೂ ಇರುವುದರಿಂದ ಇದು ಒಂದು ರಾಜ್ಯ ಹಲವು ಜಗತ್ತು ಆಗಿದೆ. ಬೇರೆ ರಾಜ್ಯಗಳಿಂದ ಬಂದಿದ್ದರೂ ಇಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕು. ಗಡಿ ಜಿಲ್ಲೆ ಕೋಲಾರದಲ್ಲಿ ಕನ್ನಡ ಉಳಿಸಿ ಬೆಳೆಸಬೇಕಿದ್ದು, ಜಿಲ್ಲಾಡಳಿತ ವತಿಯಿಂದ ಕನ್ನಡದ ಕಾರ್ಯ ಚಟುವಟಿಕೆಗಳಿಗೆ ನೆರವು ನೀಡುತ್ತೇವೆ’ ಎಂದರು.

ಭಾಷಾ ನೀತಿ: ‘ಭಾಷೆ ವಿಚಾರವಾಗಿ ಸಾಕಷ್ಟು ಗೊಂದಲಗಳಿದ್ದು, ರಾಷ್ಟ್ರೀಯ ಭಾಷಾ ನೀತಿ ಜಾರಿಯಾಗಬೇಕು. ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರೂ ರಾಜ್ಯದ ಭಾಷೆಯನ್ನೇ ಸ್ವೀಕರಿಸಬೇಕು. ಆದ್ಯತೆ ಮೇರೆಗೆ ಹಿಂದಿ, ಇಂಗ್ಲೀಷ್ ಭಾಷೆ ಕಲಿಯಬೇಕು’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕಿವಿಮಾತು ಹೇಳಿದರು.

‘ಬೇರೆ ರಾಜ್ಯಗಳಿಗೆ ಹೋದಾಗ ಅಲ್ಲಿನ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವುದು ನಮ್ಮ ಕರ್ತವ್ಯ. ಭಾಷೆ ಮತ್ತು ಸಾಹಿತ್ಯ ನಿಂತ ನೀರಲ್ಲ. ಬೇಕಾದ್ದನ್ನು ಪಡೆದು ಬೇಡವಾದ್ದನ್ನು ಬಿಡುವುದು ಉತ್ತಮ. ಜನ ದೇವಾಲಯ, ಮಸೀದಿ, ಚರ್ಚ್‌ಗಳಿಗೆ ಹೋಗದಿದ್ದರೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಾರೆ. ಧಾರ್ಮಿಕ ಭಾವನೆ ಜತೆಗೆ ವೈಜ್ಞಾನಿಕ ಚಿಂತನೆ ಅಗತ್ಯ’ ಎಂದು ಅಭಿಪ್ರಾಯಪಟ್ಟರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !