₹ 1.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ತೃತೀಯಲಿಂಗಿಗಳು

7
ಅಮಾಯಕ ಬಾಲಕನ ಲಿಂಗಪರಿವರ್ತನೆ, ಮತ್ತೆ ನಾಪತ್ತೆಯಾದ ಬಾಲಕ

₹ 1.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ತೃತೀಯಲಿಂಗಿಗಳು

Published:
Updated:

ಮಂಡ್ಯ: ಕೆ.ಆರ್‌.ಪೇಟೆ ತಾಲ್ಲೂಕು ಅಕ್ಕಿಮಂಚನಹಳ್ಳಿ ಗ್ರಾಮದ ಬಾಲಕನಿಗೆ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿದ್ದ ತೃತೀಯಲಿಂಗಿಗಳು ಆಸ್ಪತ್ರೆಯ ಖರ್ಚಿಗಾಗಿ ಆತನ ಪೋಷಕರಿಗೆ ₹ 1.5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಪ್ರಕರಣ ಬಹಿರಂಗಗೊಂಡ ನಂತರ ತೃತೀಯ ಲಿಂಗಿಗಳನ್ನು ಬಂಧಿಸಿ ಬಾಲಕನಿಗೆ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿತ್ತು. ಆತ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅನುಭವಿಸಿದ ಯಾತನೆಯನ್ನು ಮನೆಯವರು ಹಾಗೂ ಗ್ರಾಮಸ್ಥರೊಂದಿಗೆ ಹಂಚಿಕೊಂಡಿದ್ದಾನೆ.

ಶಸ್ತ್ರಚಿಕಿತ್ಸೆಯ ₹ 1.5 ಲಕ್ಷ ವೆಚ್ಚವನ್ನು ಮನೆಯವರಿಂದ ಕೊಡಿಸುವಂತೆ ಬಾಲಕನಿಗೆ ಒತ್ತಡ ಹೇರಿದ್ದರು. ಮನೆಯವರಿಗೆ ಕರೆ ಮಾಡಿ, ತನಗೆ ಆರೋಗ್ಯ ಸರಿಯಿಲ್ಲದ ಕಾರಣ ಶಸ್ತ್ರಚಿಕಿತ್ಸೆಯಾಗಿದ್ದು ನೋವು ತಡೆಯಲು ಆಗುತ್ತಿಲ್ಲ. ಹಣ ಪಾವತಿಸಿ ಆಸ್ಪತ್ರೆಯಿಂದ ಬಿಡಿಸಿಕೊಳ್ಳುವಂತೆ ಮನವಿ ಮಾಡಿದ್ದಾನೆ. ಆದರೆ ಮನೆಯವರು ಅಷ್ಟೊಂದು ಹಣ ಇಲ್ಲ ಎಂದು ಹೇಳಿದ್ದಾರೆ. ನಂತರ ತೃತೀಯಲಿಂಗಿಗಳೇ ಹಣ ಪಾವತಿಸಿ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ 40 ದಿನ ಆರೈಕೆ ಮಾಡಿದ್ದಾರೆ. ನಂತರ ‘ಲೇಖನಾ’ ಎಂದು ನಾಮಕರಣ ಮಾಡಿ ಭಿಕ್ಷಾಟನೆಗೆ ಬಿಟ್ಟಿದ್ದಾರೆ.

ಶಸ್ತ್ರಚಿಕಿತ್ಸೆಯ 40 ದಿನಗಳ ನಂತರ ಆತನನ್ನು ಕೆ.ಆರ್‌.ಪೇಟೆಗೆ ಕರೆತಂದಿದ್ದಾರೆ. ಪಾಂಡವಪುರ, ಮಂಡ್ಯ, ಮದ್ದೂರು ಪಟ್ಟಣದಲ್ಲೂ ಜನರಿಂದ ಹಣ ವಸೂಲಿ ಮಾಡಿಸಿದ್ದಾರೆ. ನಂತರ ಬಾಲಕ ಸಂಪರ್ಕಕ್ಕೆ ಸಿಗದ ಕಾರಣ ಮನೆಯವರು ಕೆ.ಆರ್‌.ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೆ. 24ರಂದು ಕೆ.ಆರ್‌.ಪೇಟೆ ಪಟ್ಟಣದಲ್ಲಿ ಭಿಕ್ಷೆ ಬೇಡುತ್ತಿದ್ದಾಗ ಚಿಕ್ಕಮಂಚನಹಳ್ಳಿ ಗ್ರಾಮಸ್ಥ ಮಂಜೇಗೌಡ ಆತನ ಮುಖ ಗಮನಿಸಿ ಮಾತನಾಡಿಸಿದ್ದಾರೆ. ಇವರನ್ನು ಕಂಡೊಡನೆ ಆತ ಓಡಿ ಹೋಗಿದ್ದಾನೆ. ತಕ್ಷಣ ಮಂಜೇಗೌಡರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದರು.

‘ತೃತೀಯಲಿಂಗಿಗಳು ಮುಗ್ಧ ಬಾಲಕನ ಜೀವನ ಹಾಳು ಮಾಡಿದ್ದಾರೆ. ಬಾಲಕನಿಗೆ ತಾಯಿ ಇಲ್ಲ, ತಂದೆ ಬುದ್ಧಿಮಾಂದ್ಯ. ಅಜ್ಜಿ ಮತ್ತು ತಂಗಿ ಈತನನ್ನು ನೋಡಿಕೊಳ್ಳುತ್ತಿದ್ದರು. ಬೆಂಗಳೂರಿಗೆ ತೆರಳಿದ್ದ ಬಾಲಕ ತೃತೀಯಲಿಂಗಿಯಾಗಿ ಬದಲಾಗಿರುವುದು ನಮ್ಮ ಊರಿನ ಜನರಿಗೆ ಆಶ್ಚರ್ಯ ಉಂಟಾಗಿದೆ. ಬಡತನದಲ್ಲಿರುವ ಮಕ್ಕಳನ್ನು ಪುಸಲಾಯಿಸಿ ಈ ರೀತಿ ಮಾಡಿದವರನ್ನು ಸುಮ್ಮನೆ ಬಿಡಬಾರದು’ ಎಂದು ಮಂಜೇಗೌಡ ಹೇಳಿದರು.

ಬಾಲಕ ಮತ್ತೆ ನಾಪತ್ತೆ:
ಈ ನಡುವೆ ಬಾಲಕ ನಗರದ ಬಾಲಮಂದಿರದಲ್ಲಿ ಇರಲು ನಿರಾಕರಿಸಿದ್ದ. ಗ್ರಾಮಸ್ಥರು ಹಾಗೂ ಆತನ ಅಜ್ಜಿ, ಮನೆಯಲ್ಲೇ ಇಟ್ಟುಕೊಳ್ಳುವುದಾಗಿ ಹೇಳಿ ಬಿಡಿಸಿಕೊಂಡು ಗ್ರಾಮಕ್ಕೆ ಕರೆತಂದಿದ್ದರು. ಮೂರು ದಿನ ಗ್ರಾಮದಲ್ಲಿದ್ದ ಆತ ಈಗ ನಾಪತ್ತೆಯಾಗಿದ್ದಾನೆ. ಮತ್ತೆ ತೃತೀಯಲಿಂಗಿಗಳ ಜೊತೆಯಲ್ಲೇ ತೆರಳಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಾರೆ. ‘ನನ್ನ ಜೀವನ ಮುಗಿಯಿತು. ಇನ್ನು ಮುಂದೆ ನಾನು ಮಂಗಳಮುಖಿಯರ ಜೊತೆಯಲ್ಲೇ ಇರುತ್ತೇನೆ ಎಂದು ಹೇಳುತ್ತಿದ್ದ’ ಎಂದು ಗ್ರಾಮಸ್ಥರು ತಿಳಿಸಿದರು.

‘ಈಗಾಗಲೇ ಬಾಲಕನ ಹೇಳಿಕೆ ಪಡೆದಿದ್ದೇವೆ. ಆತ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯೆಯ ಬಂಧನಕ್ಕಾಗಿ ನಾವು ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದು ಕೆ.ಆರ್‌.ಪೇಟೆ ಸಿಪಿಐ ಸುಧಾಕರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !