ದೇವೇಗೌಡರು ಪ್ರಧಾನಿ ಅಭ್ಯರ್ಥಿ ಘೋಷಿಸಲಿ: ರವಿಕುಮಾರ್ ಸವಾಲು

7

ದೇವೇಗೌಡರು ಪ್ರಧಾನಿ ಅಭ್ಯರ್ಥಿ ಘೋಷಿಸಲಿ: ರವಿಕುಮಾರ್ ಸವಾಲು

Published:
Updated:
Prajavani

ಚಿಕ್ಕಬಳ್ಳಾಪುರ: ‘ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರು ಎಲ್ಲ ಪಕ್ಷಗಳ ಸಹಕಾರ ಪಡೆದು ನಾವು ಅಧಿಕಾರಕ್ಕೆ ಬರುತ್ತೇವೆ ಎಂಬ ಹಗಲುಗನಸು ಕಾಣುತ್ತಿದ್ದಾರೆ. ಅದು ನನಸಾಗುವುದಿಲ್ಲ. ಅವರು ಮೊದಲು ತಮ್ಮ ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಲಿ’ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸವಾಲು ಹಾಕಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭ್ರಷ್ಟಾಚಾರ ರಹಿತ, ಅಭಿವೃದ್ಧಿ ಪರವಾದ ಆಡಳಿತ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ. ಅವರೇ ಪುನಃ ಅಧಿಕಾರಕ್ಕೆ ಕೂಡ ಬರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿನಾ? ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಅವರು ಮೈತ್ರಿಕೂಟದ ಒಳಗೆ ಬಂದಿಲ್ಲ. ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ಚಂದ್ರಬಾಬು ನಾಯ್ಡು ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ದೇವೇಗೌಡರು ಬೇಕಿದ್ದರೆ ಒಂದು ತಿಂಗಳು ಸಮಯ ತೆಗೆದುಕೊಂಡು ತಮ್ಮ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂದು ಹೇಳಲಿ’ ಎಂದು ಹೇಳಿದರು.

‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದು ಇಲ್ಲದಂತಾಗಿದೆ. ಜೆಡಿಎಸ್‌ನವರು ಬರೀ ವ್ಯವಹಾರ ಮಾಡಿಕೊಂಡು ಇದ್ದಾರೆ. ಕಾಂಗ್ರೆಸ್‌ನವರದು ಏನೂ ನಡೆಯುತ್ತಿಲ್ಲ. ಜೆಡಿಎಸ್‌ನ ಅಪ್ಪ–ಮಕ್ಕಳ ಅಧಿಕಾರ ಮಾತ್ರ ನಡೆಯುತ್ತಿದೆ. ಸೂಪರ್‌ ಸಿಎಂ ಆಗಿ ರೇವಣ್ಣ ತಮ್ಮ ಕೆಲಸ ಮುಂದುವರಿಸಿದ್ದಾರೆ’ ಆರೋಪಿಸಿದರು.

‘ಬರ ನಿರ್ವಹಣೆಗೆ ಮುಖ್ಯಮಂತ್ರಿ ಆದಿಯಾಗಿ ಯಾವುದೇ ಸಚಿವರು ಪ್ರವಾಸ ಮಾಡಿಲ್ಲ. 20 ಜಿಲ್ಲೆಗಳಲ್ಲಿ ರೈತರು ಜೀವನೋಪಾಯಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಅಧಿಕಾರ ನಡೆಸುವವರು ರೈತರ ಸಾಲ ಮನ್ನಾ ಮಾಡಿದ್ದೇವೆ ಎನ್ನುತ್ತಾರೆ. ಮನ್ನಾ ಮಾಡಿದ್ದರೆ, ಸರಿಯಾಗಿ ಬರ ನಿರ್ವಹಿಸಿದ್ದರೆ, ರೈತರ ಸಂಕಷ್ಟಗಳಿಗೆ ಪರಿಹಾರ ಒದಗಿಸಿದ್ದರೆ ಕಳೆದ 187 ದಿನಗಳಲ್ಲಿ 387 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ರೈತರು ಬೇಸರಗೊಂಡಿದ್ದಾರೆ. ಸಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಿನಕ್ಕೆ ಸರಾಸರಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಅವರಿಗೆ ಸರ್ಕಾರ ಬಂಗಲೆ, ಸಿಬ್ಬಂದಿ, ಕಾರು ಕೊಟ್ಟಿದೆ. ಇಷ್ಟಿದ್ದರೂ ಅವರು ಸ್ಟಾರ್ ಹೋಟೆಲ್‌ಗಳಲ್ಲಿ ಇದ್ದು ಆಡಳಿತ ನಡೆಸುತ್ತಿದ್ದಾರೆ’ ಎಂದು ಆಪಾದಿಸಿದರು.

‘ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರಿಗೆ ಇಷ್ಟೊಂದು ಸವಲತ್ತು ಇರಲಿಲ್ಲ. ಈಗ ಎಷ್ಟೊಂದು ಸೌಕರ್ಯಗಳಿದ್ದಾಗಲೂ ಸ್ಟಾರ್‌ ಹೋಟೆಲ್‌ನಿಂದ ಆಡಳಿತ ನಡೆಸಬೇಕಾ? ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಹೊಸ ಇತಿಹಾಸ ಬರೆಯುತ್ತಿದ್ದಾರೆ. ಆದ್ದರಿಂದ ಅವರು ಜನಕ್ಕೆ ಉತ್ತರಿಸಬೇಕು’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !