ಮಂಗಳವಾರ, ಸೆಪ್ಟೆಂಬರ್ 21, 2021
25 °C
ಭೂತದಹನ ಮಾಡಿ ಬಿಜೆಪಿ ಕಾರ್ಯಕರ್ತರ ಆಕ್ರೋಶ

ಭಗವಾನ್‌ ಹೇಳಿಕೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ದೇಶದ ಸಂಸ್ಕೃತಿಯ ಪ್ರತೀಕವಾದ ಶ್ರೀರಾಮ ಮತ್ತು ಸೀತಾಮಾತೆ ವಿರುದ್ಧ ಸಾಹಿತಿ ಕೆ.ಎಸ್‌.ಭಗವಾನ್‌ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದಲ್ಲಿ ಭಗವಾನ್‌ರ ಭೂತದಹನ ಮಾಡಿದ ಪ್ರತಿಭಟನಾಕಾರರು, ‘ಭಗವಾನ್‌ ಅವರು ಶ್ರೀರಾಮ ಮತ್ತು ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶ್ರೀರಾಮ ದೇವರೇ ಅಲ್ಲವೆಂದು ಭಗವಾನ್‌ ಹೇಳಿದ್ದಾರೆ. ಜತೆಗೆ ಮಹರ್ಷಿ ವಾಲ್ಮೀಕಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರ ವರ್ತನೆಯಿಂದ ವಾಲ್ಮೀಕಿ ಸಮುದಾಯಕ್ಕೆ ಅವಮಾನವಾಗಿದೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಎಂ.ಪಿ.ನಾರಾಯಣಸ್ವಾಮಿ ಹೇಳಿದರು.

‘ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ ಎಂಬ ಕಾರಣಕ್ಕೆ ಭಗವಾನ್‌ ಧರ್ಮ ವಿರೋಧಿ, ಸಂಸ್ಕೃತಿ ವಿರೋಧಿ ಹಾಗೂ ಜಾತಿ ನಿಂದನೆ ಹೇಳಿಕೆ ನೀಡುತ್ತಿದ್ದಾರೆ. ಶಾಂತಿ ಕದಡುವ ಭಗವಾನ್‌ ಅಂತಹ ದೇಶ ದ್ರೋಹಿಗಳಿಗೆ ರಾಜ್ಯ ಸರ್ಕಾರ ಪೊಲೀಸ್‌ ಭದ್ರತೆ ಒದಗಿಸಿರುವುದು ಸರಿಯಲ್ಲ. ಅವರ ಭದ್ರತೆಗಾಗಿ ಖರ್ಚು ಮಾಡುತ್ತಿರುವ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲಿ’ ಎಂದು ಒತ್ತಾಯಿಸಿದರು.

ಹೇಳಿಕೆ ಸರಿಯಲ್ಲ: ‘ದೇವರಿಲ್ಲ ಎಂಬುದು ಅವರ ವೈಯಕ್ತಿಕ ನಂಬಿಕೆ. ಅದು ಅವರ ಮನೆಗೆ ಸೀಮಿತವಾಗಿರಲಿ. ಆದರೆ, ದೇವರಿದ್ದಾನೆ ಎಂದು ನಂಬಿರುವ ಜನರ ಭಾವನೆಗೆ ನೋವುಂಟು ಮಾಡುವಂತೆ ಹೇಳಿಕೆ ನೀಡುವುದು ಸರಿಯಲ್ಲ. ಹಿಂದೂ ವಿರೋಧಿಯಾದ ಭಗವಾನ್‌ ಪ್ರಚಾರಕ್ಕಾಗಿ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಅಂಬೇಡ್ಕರ್ ಮಾಡಿದ ಸಮಾನತೆಯ ಸಾಧನೆಗಾಗಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಜನ ಅವರನ್ನು ದೇವರೆಂದೂ ಪೂಜಿಸುತ್ತಾರೆ. ಭಗವಾನ್‌ ಅವರಿಗೆ ಜನರ ಭಾವನೆ ಪ್ರಶ್ನಿಸುವ ಅಧಿಕಾರ ಯಾರು ಕೊಟ್ಟರು? ಭಗವಾನ್‌ ಅವರು ಇನ್ನಾದರೂ ಗೌರವಯುತವಾಗಿ ನಡೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಕ್ಷಮೆ ಯಾಚಿಸಬೇಕು: ‘ಭಗವಾನ್ ತಮ್ಮ ಹೆಸರು ಬದಲಿಸಿಕೊಳ್ಳಬೇಕು. ವಾಲ್ಮೀಕಿ ಕುರಿತ ಅವಹೇಳನ ಸಂಬಂಧ ವಾಲ್ಮೀಕಿ ಸಮುದಾಯದ ಕ್ಷಮೆ ಯಾಚಿಸಬೇಕು. ಶಾಂತಿ ಭಂಗಕ್ಕೆ ಮುಂದಾಗಿರುವ ಅವರನ್ನು ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ರಾಜ್ಯದೆಲ್ಲೆಡೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ನಗರ ಘಟಕದ ಕೆ.ಎನ್.ಸುರೇಶ್, ದೇವರಾಜ್, ಶಿವಕುಮಾರ್, ನಾರಾಯಣಸ್ವಾಮಿ, ಅರುಣಮ್ಮ, ಆರ್.ಬಾಲಾಜಿ, ಮಹೇಶ್, ಬೈಚಪ್ಪ, ವಿಜಯಕುಮಾರ್, ಮಮತಾ, ಮಂಜುನಾಥ್, ಶ್ರೀನಾಥ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು