ಬುಧವಾರ, ಏಪ್ರಿಲ್ 8, 2020
19 °C

ಆ ಮಾಯಾದೀಪ ಇಂದಿನಿಂದ ನಿಮ್ಮದು!

ರಮೇಶ್‌ ಅರವಿಂದ್ Updated:

ಅಕ್ಷರ ಗಾತ್ರ : | |

ಹೊಸ ವರ್ಷದ ಮೊದಲ ಬೆಳಗಿನ ಈ ಹೊತ್ತಿನಲ್ಲಿ ಭವಿಷ್ಯದ ನಮ್ಮ ಬದುಕು ಹೇಗಿರಬೇಕು ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ರೂಪವಾಗಿ ಅಪ್ಪಟ ಕನ್ನಡದ ತಾರೆ ರಮೇಶ ಅರವಿಂದ್‌ ಬರೆದಿರುವ ಈ ಲೇಖನ, ಓದುಗರಿಗೆ ‘ಪ್ರಜಾವಾಣಿ’ಯ ಶುಭಾಶಯ ಪತ್ರವೂ ಆಗಿದೆ

––––––

ಅಲ್ಲಾವುದ್ದೀನ್‌ ಮತ್ತು ಮಾಂತ್ರಿಕ ದೀಪದ ಕಥೆ ನೆನಪಾಗುತ್ತಿದೆ. ಅಲ್ಲಾವುದ್ದೀನ್‌ ಆ ದೀಪವನ್ನು ಉಜ್ಜಿದರೆ ಒಂದು ಭೂತ ಕಾಣುತ್ತಿತ್ತು. ಆ ಭೂತ, ಆತನ ಎಲ್ಲ ಆಸೆಗಳನ್ನೂ ನೆರವೇರಿಸುತ್ತಿತ್ತು. ಅಂದಹಾಗೆ, ಆ ಭೂತ ಹೇಗಿದ್ದೀತು? ಒಮ್ಮೆ ಕಲ್ಪಿಸಿಕೊಳ್ಳಿ. ಈಗ ಆ ಅಲ್ಲಾವುದ್ದೀನನ ದೀಪವನ್ನು, ನಾನು, ನಿಮಗೆ ಹೊಸ ವರ್ಷದ ಉಡುಗೊರೆಯಾಗಿ ಕೊಡ್ತಾ ಇದ್ದೀನಿ.

ನಿಮ್ಮ ಎಲ್ಲ ಕನಸುಗಳನ್ನು ನನಸು ಮಾಡುವ ಆ ಮಾಯಾದೀಪ ಇಂದಿನಿಂದ ನಿಮ್ಮದು. ಆ ದೀಪವನ್ನು ಉಜ್ಜಿ ನೋಡಿ, ಅದು ಲೋಹದ ದೀಪ ಸ್ವಾಮಿ. ಲೋಹದ ದೀಪವನ್ನು ಉಜ್ಜಿದರೆ ಏನಾಗುತ್ತೆ ಹೇಳಿ? ಕನ್ನಡಿಯಂತೆ ಹೊಳೆಯುತ್ತೆ. ಆಗ ಅಲ್ಲಿ ಕಾಣಿಸುವುದು ನಿಮ್ಮದೇ ಪ್ರತಿಬಿಂಬ. ನಿಮಗೆ ಎಲ್ಲ ವರಗಳನ್ನು ನೀಡಬಲ್ಲ ಶಕ್ತಿ ನೀವೇ. ಹೌದು, ನೀವೇ ಅಲ್ಲಾವುದ್ದೀನನಿಗೆ ಸಿಕ್ಕ ಆ ಭೂತ. ಹಣ, ಕೀರ್ತಿ, ನೆಮ್ಮದಿ, ಸುಖ, ಯಶಸ್ಸು, ಸಂತೋಷ ಹೀಗೆ ನಿಮಗೆ ಬೇಕಾದದ್ದನ್ನೆಲ್ಲ ನೀಡಬಲ್ಲ ಶಕ್ತಿ ನೀವೇ. ಅದು ನಿಮ್ಮಿಂದ ಮಾತ್ರ ಸಾಧ್ಯ. ಯು ಆರ್‌ ದಿ ಜೀನಿ ಆಫ್‌ ದಿ ಲ್ಯಾಂಪ್‌.

ಅಲ್ಲಾವುದ್ದೀನನ ದೀಪದ ಕಥೆಯ ಒಳ ಅರ್ಥ ಹೀಗೇಕೆ ಇರಬಾರದು? ಈ ಹೊಸ ವರ್ಷವನ್ನು, ಈ ಹೊಸ ಕಲ್ಪನೆಯಿಂದಲೇ ನೋಡಿ. ನಿಮ್ಮ ಜೀವನದ ಜವಾಬ್ದಾರಿ ನಿಮ್ಮದು. ನಿಮ್ಮ ಶ್ರೇಯಸ್ಸಿಗೆ ಹೊಣೆ ನೀವೇ. ಗೊತ್ತೆ? ಬೇರೆ ಯಾವುದೇ ನೆಪಕ್ಕೆ ಶರಣಾಗದೆ ‘ನಾನೇ ನನ್ನ ಜೀವನದ ಶಿಲ್ಪಿ’ ಎಂಬ ಒಪ್ಪಿಗೆ, ನಂಬಿಕೆಯೇ ಹೊಸ ವರ್ಷವನ್ನು ನಿಮ್ಮ ಪಾಲಿಗೆ ಅಲ್ಲಾವುದ್ದೀನನ ದೀಪವನ್ನಾಗಿ ಮಾಡಿಸುತ್ತೆ.

ಇಂದು ಜನವರಿ ಒಂದು. 24 ಗಂಟೆಗಳ ಈ ದಿನ ಮತ್ತೆ ಮತ್ತೆ ರಿಪೀಟ್‌ ಆಗಿ ಡಿಸೆಂಬರ್‌ 31ಕ್ಕೆ ಒಂದು ವರ್ಷ ಆಗುತ್ತೆ. ಆ ವರ್ಷ ರಿಪೀಟ್‌ ಆಗಿ ಆಗಿ ದಶಕಗಳಾಗಿ, ದಶಕಗಳು ರಿಪೀಟ್‌ ಆಗಿ ಆಗಿ ನಿಮ್ಮ ಜೀವನವಾಗುತ್ತೆ. ಹಾಗಾಗಿ ಈ ದಿನದ, ಈ 24 ಗಂಟೆಗಳೇ ನಿಮ್ಮ ಜೀವನದ ಬಿಲ್ಡಿಂಗ್‌ ಬ್ಲಾಕ್‌. ಬೇರೆ ಯಾವ ಭೂತದ ಸಹಾಯವೂ ನಿಮಗೆ ಬೇಕಾಗಿಲ್ಲ. ಈ 24 ಗಂಟೆಗಳನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಸಕ್ರಿಯರಾಗಿ. ಈ ದಿನ ಮಾಡುವ ಎಲ್ಲ ಕೆಲಸಗಳನ್ನು ಶ್ರೇಷ್ಠವಾಗಿ ಮಾಡುವುದೇ ಶ್ರೇಷ್ಠ ಜೀವನದ ಗುಟ್ಟು. ಯಶಸ್ಸಿನ ರಹಸ್ಯ ಕೂಡ ಇಷ್ಟೆ. ಮಾಡುವ ಪ್ರತಿಯೊಂದು ಕೆಲಸದಲ್ಲೂ ಎಕ್ಸ್‌ಟ್ರಾ ಅಟೆನ್ಶನ್‌ ಇರಲಿ, ತೀವ್ರವಾಗಿ ಗಮನಕೊಟ್ಟು ಮಾಡಿ.

ನೀವು ಒಂದು ಹಾರ್ಟ್‌ ಸರ್ಜರಿ ಮಾಡ್ತಿರಬಹುದು ಅಥವಾ ಬೃಹತ್‌ ಪ್ರಾಜೆಕ್ಟ್‌ ಹ್ಯಾಂಡಲ್‌ ಮಾಡ್ತಿರಬಹುದು ಇಲ್ಲವೆ ಒಂದು ದೊಡ್ಡ ಚಿತ್ರವನ್ನು ಡೈರೆಕ್ಟ್‌ ಮಾಡ್ತಿರಬಹುದು. ಇಂತಹ ದೊಡ್ಡ ಕೆಲಸಗಳು ಮಾತ್ರ ಅಲ್ಲ. ಬಟ್ಟೆಯನ್ನು ಇಸ್ತ್ರಿ ಮಾಡೋದು, ಮಡಿಚಿ ಕಬೋರ್ಡ್‌ನಲ್ಲಿ ಇಡೋದು, ಮನೆಯನ್ನು ನೀಟಾಗಿ, ಸ್ವಚ್ಛವಾಗಿ ಇಟ್ಕೊಳ್ಳೋದು, ಈ ತರಹದ ಸಣ್ಣ–ಪುಟ್ಟ ಕೆಲಸಗಳಿಂದ ಬೃಹತ್‌ ಕೆಲಸಗಳವರೆಗೆ ಎಲ್ಲವನ್ನೂ ಶ್ರೇಷ್ಠವಾಗಿ, ಹೆಚ್ಚಿನ ಗಮನಕೊಟ್ಟು ಮಾಡಿ. ಹೀಗೆ ಫೋಕಸ್‌ ಆಗಿ ಕೆಲಸ ಮಾಡೋದ್ರಿಂದ ಅಟೊಮ್ಯಾಟಿಕ್‌ ಆಗಿ ನಿಮ್ಮ ಕೈಯಲ್ಲಿ ಅಲ್ಲಾವುದ್ದೀನನ ದೀಪ ಸಿಗುತ್ತೆ.

ಎಲ್ಲರ ಮನಸ್ಸಿನಲ್ಲೂ ಆಸೆಗಳ ಕಣಜವೇ ಇದೆ. ಅದು ಸ್ವಾಭಾವಿಕ; ಅಗತ್ಯ ಕೂಡ. ಇಲ್ಲದಿದ್ದರೆ ಲೈಫು ಡಲ್‌, ಬೋರಿಂಗ್‌ ಆಗಿಬಿಡುತ್ತೆ. ಆದ್ರೆ ಆಸೆಗಳಷ್ಟೇ ಮುಖ್ಯವಾದುದು ನಮ್ಮ ಆಸೆಗೆ ಸೂಕ್ತ ತಯಾರಿಕೆಗಳನ್ನು ಮಾಡಿಕೊಳ್ಳುವುದು. ಸಂಬಂಧಪಟ್ಟ ಕೌಶಲಗಳನ್ನು ಹೆಚ್ಚಿಸಿಕೊಳ್ಳುವುದು. ಒಂದುವೇಳೆ ಹತ್ತು ವರ್ಷಗಳಲ್ಲಿ ನೀವು ಒಲಿಂಪಿಕ್‌ ಓಟಗಾರರಾಗಬೇಕು ಅನ್ನುವ ಆಸೆ ನಿಮಗಿದ್ದರೆ ನಾಳೆ ಬೆಳಿಗ್ಗೆ ಎದ್ದ ತಕ್ಷಣವೇ ಓಡೋದಕ್ಕೆ ಶುರು ಮಾಡಬೇಕು. ಒಲಿಂಪಿಕ್‌ ಮೆಡಲ್‌ನ ಕನಸು ಕಾಣ್ತಾ ಹಾಸಿಗೆ ಮೇಲೆಯೇ ಮಲಗಿದ್ರೆ ಹೇಗೆ ಸಾಧ್ಯ? ಹಾಗಾಗಿ ಕನಸುಗಳಿಗೆ ಪೂರಕವಾದ ಅರ್ಹತೆಗಳನ್ನು ಬೆಳೆಸಿಕೊಳ್ಳಬೇಕು. ನಿರಂತರ ಕಲಿಕೆ, ನಿರಂತರ ಪ್ರಾಕ್ಟೀಸೇ ಯಶಸ್ಸಿನ ಸೂತ್ರ. ಆಗ ಅಲ್ಲಾವುದ್ದೀನನ ದೀಪ ನಿಮ್ಮದಾಗುತ್ತೆ.

ಒಂದೊಂದು ಮನೆಯ ಎಲೆಕ್ಟ್ರಿಕಲ್‌ ಸರ್ಕೀಟ್ ಡ್ರಾಯಿಂಗ್‌ ಒಂದೊಂದು ತರಹ ಇರುವಂತೆ ಒಬ್ಬೊಬ್ಬರ ಮೆದುಳಿನ ವೈರಿಂಗ್‌ ಸಹ ಬೇರೆ ಬೇರೆ. ಅಂತೆಯೇ ಒಬ್ಬೊಬ್ಬರು ಕಾರ್ಯನಿರ್ವಹಿಸುವ ಶೈಲಿಯೂ ಬೇರೆ, ಬೇರೆ. ಹಲವು ಒಳ್ಳೆಯ ವ್ಯಕ್ತಿಗಳ ಮಧ್ಯೆ ಸಮಸ್ಯೆಗಳು ಬರುವುದು ಈ ವೈರಿಂಗ್‌ ಪ್ರಾಬ್ಲಂನಿಂದ. ನನ್ನ ಆದ್ಯತೆಗಳು, ನಿಮ್ಮ ಆದ್ಯತೆಗಳು ಬೇರೆ ಬೇರೆ ಇರಬಹುದು. ನನಗೆ ಮುಖ್ಯವಾದುದು ನಿಮಗೆ ಮುಖ್ಯವಾಗದೇ ಇರಬಹುದು. ಆದ್ರೆ ನಾವಿಬ್ಬರೂ ಸೇರಿ ಕೆಲಸ ಮಾಡುವಾಗ ಆ ಕೆಲಸ ಮುಖ್ಯ. ನಾನೂ ಅಲ್ಲ; ನೀವೂ ಅಲ್ಲ. ಒಂದು ಸಮಸ್ಯೆಯನ್ನು ಬಗೆಹರಿಸುವಾಗ ಏನು ಮಾಡಬೇಕು, ಹೇಗೆ ಮಾಡಬೇಕು ಎಂಬ ಆಬ್ಜೆಕ್ಟಿವ್‌ ಥಿಂಕಿಂಗೇ ಸರಿ. ‘ನಾನು, ನಾನು’ ಎನ್ನುವ ಇಗೊ ಒಳಗೆ ಸೇರಿದಾಗ ಎಲ್ಲ ಎಡವಟ್ಟು ಶುರುವಾಗುತ್ತೆ.

ಬುದ್ಧ ಅದ್ಭುತವಾದ ಒಂದು ಮಾತು ಹೇಳಿದ. ಎಂಟು ಸೂತ್ರದಾರರು ಹುಳಗಳಾಗಿ ನಮ್ಮ ತಲೆಯೊಳಗೆ ನುಗ್ಗಿ ನಮ್ಮನ್ನು ಕಾಡುತ್ತಿದ್ದಾರಂತೆ. ನಮ್ಮೆಲ್ಲರಿಗೂ ಯಾವಾಗಲೂ ಲಾಭವೇ ಬೇಕು. ಯಾರಿಗೂ ಸ್ವಲ್ಪಾನೂ ನಷ್ಟ ಇಷ್ಟವಿಲ್ಲ. ಎಲ್ಲರಿಗೂ ಯಾವಾಗಲೂ ಹ್ಯಾಪಿಯಾಗಿಯೇ ಇರಬೇಕು. ಒಂದು ಸಣ್ಣ ನೋವನ್ನೂ ನಮ್ಮಿಂದ ತಡೆದುಕೊಳ್ಳಲು ಆಗುತ್ತಿಲ್ಲ. ಎಲ್ಲರಿಗೂ ಯಾವಾಗಲೂ ಕೀರ್ತಿನೇ ಬೇಕು. ಯಾರೂ ನಮ್ಮನ್ನು ಅವಮಾನ ಮಾಡಬಾರದು. ಯಾರೂ ನಮ್ಮ ಮೇಲೆ ಆಪಾದನೆ ಹೊರಿಸಬಾರದು. ಎಲ್ಲರೂ ನಮ್ಮನ್ನು ಯಾವಾಗಲೂ ಹೊಗಳ್ತಾನೇ ಇರಬೇಕು. ಈ ಎಂಟು ಸೂತ್ರದಾರರಲ್ಲಿ ನಿಮ್ಮನ್ನು ಈ ಕ್ಷಣದಲ್ಲಿ ಆಟ ಆಡಿಸುತ್ತಿರೋರು ಯಾರು ಅಂತ ಗಮನಿಸಿ. ನಿಮ್ಮ ನಡವಳಿಕೆ ಹಿಂದಿರುವ ಆ ಸಿಲಿನೆಸ್‌ ಗುರುತಿಸಿ ಮತ್ತು ನಡುನೆಲೆಗೆ ಬನ್ನಿ. ವಿ ಹ್ಯಾವ್‌ ಟು ರಿಗೇನ್‌ ಲೈಫ್ಸ್‌ ಬ್ಯಾಲೆನ್ಸ್‌.

ವೃತ್ತಿಪರ ವಿಷಯಗಳಲ್ಲಿ, ಮನಃಶಾಂತಿ ವಿಷಯದಲ್ಲಿ, ಹಣಕಾಸಿನ ವಿಷಯದಲ್ಲಿ ಸಂಬಂಧಗಳ ವಿಷಯದಲ್ಲಿ, ಜೀವನದ ಎಲ್ಲಾ ವಿಷಯಗಳಲ್ಲಿ ರಿಗೇನ್‌ ಬ್ಯಾಲೆನ್ಸ್‌. ಆಗ ಅಲ್ಲಾವುದ್ದೀನನ ಮಾಂತ್ರಿಕ ದೀಪ ನಿಜವಾಗಿಯೂ ನಿಮ್ಮ ಕೈಯಲ್ಲಿ ಇದ್ದಂತಾಯಿತು. ಹ್ಯಾಪಿ ನ್ಯೂ ಇಯರ್‌. ಸರ್ವ ಶಕ್ತಿಗಳು ನಿಮ್ಮ ಜತೆಗಿರಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)