ರಣಜಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ ಇನಿಂಗ್ಸ್ ಮುನ್ನಡೆ

7
ರೋನಿತ್‌ಗೆ ಐದು ವಿಕೆಟ್‌; ಮನೀಷ್ ಅರ್ಧಶತಕ

ರಣಜಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ ಇನಿಂಗ್ಸ್ ಮುನ್ನಡೆ

Published:
Updated:
Prajavani

ಬೆಂಗಳೂರು: ಬೆಳಗಾವಿ ಹುಡುಗ ರೋನಿತ್ ಮೋರೆ ಮಿಂಚಿನ ಬೌಲಿಂಗ್‌ನಿಂದ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲೀಟ್ ಗುಂಪಿನ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿತು. 

ಅಲೂರಿನ ಕೆಎಸ್‌ಸಿಎ ಕ್ರೀಡಾಂಗಣದ ರಾಮಪ್ರಸಾದ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಮಂಗಳವಾರ ಆತಿಥೇಯ ತಂಡವು 135 ರನ್‌ಗಳ ಮುನ್ನಡೆ ಸಾಧಿಸಿತು.  ಕರ್ನಾಟಕ ತಂಡವು ಗಳಿಸಿದ್ದ 418 ರನ್‌ಗಳ ಮೊತ್ತಕ್ಕೆ  ಉತ್ತರವಾಗಿ ಛತ್ತೀಸಗಡ ತಂಡವು 283 ರನ್‌ ಗಳಿಸಿತು.

ಹರಪ್ರೀತ್ ಸಿಂಗ್ ಭಾಟಿಯಾ (120; 239ಎಸೆತ, 365 ನಿಮಿಷ, 17ಬೌಂಡರಿ) ತಾಳ್ಮೆಯ ಶತಕ ಹೊಡೆದರು. ಇದರಿಂದಾಗಿ ಛತ್ತೀಸಗಡ ತಂಡವು ಫಾಲೋ ಆನ್ ಭೀತಿಯಿಂದ ತಪ್ಪಿಸಿಕೊಂಡಿತು. ರೋನಿತ್ ಮೋರೆ (48ಕ್ಕೆ5) ಅವರ ಚುರುಕಿನ ದಾಳಿಯಿಂದಾಗಿ ಛತ್ತೀಸಗಡ ತಂಡಕ್ಕೆ ಮುನ್ನೂರರ ಗಡಿ ಮುಟ್ಟಲೂ ಸಾಧ್ಯವಾಗಲಿಲ್ಲ.

ಚಹಾ ವಿರಾಮದ ನಂತರ ಎರಡನೇ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ ತಂಡವು ಆರಂಭಿಕ ಆಘಾತ ಎದುರಿಸಿತು. ಆದರೆ ಅರ್ಧಶತಕ ಬಾರಿಸಿದ ನಾಯಕ ಮನೀಷ್ ಪಾಂಡೆ (ಬ್ಯಾಟಿಂಗ್ 57) ಮತ್ತು ಶ್ರೇಯಸ್ ಗೋಪಾಲ್ (ಬ್ಯಾಟಿಂಗ್ 21) ತಂಡವನ್ನು ಕಷ್ಟದಿಂದ ಪಾರು ಮಾಡಿದ್ದಾರೆ. ಇವರಿಬ್ಬರು ಐದನೇ ವಿಕೆಟ್‌ ಜೊತೆಯಾಟದಲ್ಲಿ ಸೇರಿಸಿದ 63 ರನ್‌ಗಳ ನೆರವಿನಿಂದ ತಂಡವು 34 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 113 ರನ್‌ ಗಳಿಸಿದೆ.

ಸೋಮವಾರ ಸಂಜೆ 36 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 121 ರನ್‌ ಗಳಿಸಿದ್ದ ಪ್ರವಾಸಿ ತಂಡವು ಮೂರನೇ ದಿನ ಬೆಳಿಗ್ಗೆಯ ಅವಧಿಯಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.  ನಂತರದ ಅವಧಿಯಲ್ಲಿ ರೋನಿತ್ ದಾಳಿಯು ರಂಗೇರಿತು.

ಸ್ಕೋರು ವಿವರ: ಮೊದಲ ಇನಿಂಗ್ಸ್

ಕರ್ನಾಟಕ: 418ರನ್‌ಗಳಿಗೆ ಆಲೌಟ್‌

ಛತ್ತೀಸಗಡ: 283 (89 ಓವರ್‌ಗಳಲ್ಲಿ)

ಅಮನದೀಪ್ ಖರೆ 45, ಹರಪ್ರೀತ್ ಸಿಂಗ್ ಭಾಟಿಯಾ 120, ಅಜಯ್ ಮಂಡಲ್ 41

ಬೌಲಿಂಗ್: ಅಭಿಮನ್ಯು ಮಿಥುನ್ 4 ವಿಕೆಟ್‌, ರೋನಿತ್ ಮೋರೆ 5 ವಿಕೆಟ್‌

ಎರಡನೇ ಇನಿಂಗ್ಸ್

ಕರ್ನಾಟಕ: 34 ಓವರ್‌ಗಳಲ್ಲಿ 4ವಿಕೆಟ್‌ಗೆ 113ರನ್‌

ದೇವದತ್ತ ಪಡಿಕ್ಕಲ್ 19ರನ್‌, ಮನೀಷ್ ಪಾಂಡೆ ಬ್ಯಾಟಿಂಗ್ 57 ರನ್‌, ಶ್ರೇಯಸ್ ಗೋಪಾಲ್ ಬ್ಯಾಟಿಂಗ್ 21

ಬೌಲಿಂಗ್: ಪಂಕಜ್ ರಾವ್ 3 ವಿಕೆಟ್‌, ಅಜಯ್ ಮಂಡಲ್ 1ವಿಕೆಟ್‌

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !