ಹೊಸ ಮಿತ್ರರ ಹುಡುಕಾಟದಲ್ಲಿ ಬಿಜೆಪಿ

7

ಹೊಸ ಮಿತ್ರರ ಹುಡುಕಾಟದಲ್ಲಿ ಬಿಜೆಪಿ

Published:
Updated:

ಲಖನೌ: 2019ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಿಗಾಗಿ ಅಪ್ನಾ ದಳ (ಎ.ಡಿ) ಮತ್ತು ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿ (ಎಸ್‌ಬಿಎಸ್‌ಪಿ) ಬೇಡಿಕೆ ಇರಿಸಿವೆ. ಹಾಗಾಗಿ, ಉತ್ತರ ಪ್ರದೇಶದಲ್ಲಿ ಹೊಸ ಮಿತ್ರಪಕ್ಷಗಳಿಗಾಗಿ ಬಿಜೆಪಿ ಹುಡುಕಾಟ ಆರಂಭಿಸಿದೆ. ಬಿಜೆಪಿಯೇತರ ಪಕ್ಷಗಳ ಮಹಾಮೈತ್ರಿ ಕೂಟಕ್ಕೆ ತಿರುಗೇಟು ನೀಡುವುದಕ್ಕಾಗಿ ಜಾತಿ ಆಧರಿತ ಪಕ್ಷಗಳನ್ನು ಹತ್ತಿರಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ.‌

ಎ.ಡಿ. ಮತ್ತು ಎಸ್‌ಬಿಎಸ್‌ಪಿಯಲ್ಲಿರುವ ಅತೃಪ್ತರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ಮೂಲಕ ಈ ಎರಡೂ ಪಕ್ಷಗಳ ಚೌಕಾಶಿ ಸಾಮರ್ಥ್ಯವನ್ನು ಕುಗ್ಗಿಸುವುದು ಕಾರ್ಯತಂತ್ರ. ಅಜಿತ್‌ ಸಿಂಗ್‌ ನೇತೃತ್ವದ ರಾಷ್ಟ್ರೀಯ ಲೋಕ ದಳವನ್ನು (ಆರ್‌ಎಲ್‌ಡಿ) ಎನ್‌ಡಿಎಗೆ ಸೇರಿಸಿಕೊಳ್ಳುವ ಪ್ರಯತ್ನವನ್ನೂ ಬಿಜೆಪಿ ಮಾಡುತ್ತಿದೆ. ಆದರೆ, ಬಿಜೆಪಿಯೇತರ ಪಕ್ಷಗಳ ಮಹಾಮೈತ್ರಿಕೂಟಕ್ಕೆ ಸೇರುವುದಾಗಿ ಆರ್‌ಎಲ್‌ಡಿ ಈಗಾಗಲೇ ಪ್ರಕಟಿಸಿದೆ.

‘ಎ.ಡಿ ಮತ್ತು ಎಸ್‌ಬಿಎಸ್‌ಪಿ ದೂರ ಹೋದರೆ ಉಂಟಾಗುವ ನಷ್ಟವನ್ನು ಆರ್‌ಎಲ್‌ಡಿ ತುಂಬಿ ಕೊಡಬಲ್ಲುದು. ರಾಜ್ಯದ ಪಶ್ಚಿಮ ಭಾಗದಲ್ಲಿ ಪ್ರಬಲವಾಗಿರುವ ಜಾಟ್‌ ಸಮುದಾಯದ ಬೆಂಬಲವೂ ದೊರೆಯಬಹುದು’ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ಜಾತಿ ಆಧರಿತ ಪಕ್ಷಗಳತ್ತ ಗಮನ ಕೇಂದ್ರೀಕರಿಸುವುದು ಬಿಜೆಪಿಯ ಇನ್ನೊಂದು ಕಾರ್ಯತಂತ್ರ. ಇಂತಹ ಗುಂಪುಗಳು ಪ್ರಬಲವಾಗಿರುವಲ್ಲಿ ಆ ಪಕ್ಷಗಳ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಯೋಚನೆಯೂ ಬಿಜೆಪಿಗೆ ಇದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರತಿನಿಧಿಸುತ್ತಿದ್ದ ಗೋರಖಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಸ್‌ಪಿ ಇದೇ ಕಾರ್ಯತಂತ್ರ ಅನುಸರಿಸಿತ್ತು. ನಿಷಾದ್‌ ಪಕ್ಷದ ಅಧ್ಯಕ್ಷ ಸಂಜಯ ನಿಷಾದ್‌ ಅವರ ಮಗ ಪ್ರವೀಣ್‌ ನಿಷಾದ್‌ ಅವರಿಗೆ ಎಸ್‌ಪಿ ಬೆಂಬಲ ನೀಡಿತ್ತು. ಅವರು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದರು. ನಿಷಾದ್‌ ಅವರು ಎಸ್‌ಪಿ ಚಿಹ್ನೆಯ ಅಡಿಯಲ್ಲಿಯೇ ಸ್ಪರ್ಧಿಸಿದ್ದರು.

ಖೈರಾನಾ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿಯೂ ಎಸ್‌ಪಿ ಇದೇ ತಂತ್ರ ಅನುಸರಿಸಿತ್ತು. ಎಸ್‌ಪಿ ನಾಯಕಿ ತಬಸ್ಸುಮ್‌ ಹಸನ್‌ ಆರ್‌ಎಲ್‌ಡಿ ಚಿಹ್ನೆಯಲ್ಲಿ ಸ್ಪರ್ಧಿಸಿ ಗೆದ್ದರು. ಎಸ್‌ಬಿಎಸ್‌ಪಿಯ ಮುಖಂಡ ಮದನ್‌ ರಾಜಬರ್‌ ಅವರು ತಮ್ಮದೇ ಪಕ್ಷ ಸ್ಥಾಪಿಸಿದ್ದಾರೆ. ಅಪ್ನಾ ದಳ ಕೂಡ ಒಂದು ಬಾರಿ ವಿಭಜನೆ ಆಗಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !