‘ಚಿನ್ನ’ ಉಡುಗೊರೆ ಕೊಟ್ಟ ಪೊಲೀಸರು

7
ಕಳುವಾಗಿದ್ದ ವಸ್ತುಗಳನ್ನು ದೂರುದಾರರಿಗೆ ತಲುಪಿಸಿ ವರ್ಷಾಚರಣೆ

‘ಚಿನ್ನ’ ಉಡುಗೊರೆ ಕೊಟ್ಟ ಪೊಲೀಸರು

Published:
Updated:
Prajavani

ಬೆಂಗಳೂರು: ಪೊಲೀಸರು ಮನೆಗೆ ಬಂದರೆ, ಏನೋ ಆಗಿದೆ ಎಂದು ಆತಂಕಗೊಳ್ಳುವವರೇ ಹೆಚ್ಚು. ರಾತ್ರಿ ಬಂದರಂತೂ ಮುಗಿದೇ ಹೋಯಿತು. ಆದರೆ, ಸೋಮವಾರ ಮಧ್ಯರಾತ್ರಿ ಅಂಥ ಆತಂಕವಿರಲಿಲ್ಲ. ಮನೆ ಬಾಗಿಲಿಗೆ ಬಂದ ಪೊಲೀಸರು, ‘ಚಿನ್ನ’ವನ್ನು ಕೈಗಿಡುತ್ತಿದ್ದಂತೆ ಮನೆಯವರೆಲ್ಲ ಸಂಭ್ರಮಪಟ್ಟರು.

ನಗರದಲ್ಲಿ ನಡೆದಿದ್ದ ಕಳವು ಪ್ರಕರಣಗಳಲ್ಲಿ ಆರೋಪಿಗಳಿಂದ ಜಪ್ತಿ ಮಾಡಲಾಗಿದ್ದ ಚಿನ್ನಾಭರಣ, ಕ್ಯಾಮೆರಾ ಹಾಗೂ ವಾಹನಗಳನ್ನು ದೂರುದಾರರಿಗೆ ಮಧ್ಯರಾತ್ರಿಯೇ ತಲುಪಿಸುವ ಮೂಲಕ ನಗರದ ಪೊಲೀಸರು, ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಿದರು.

ಹೊಸ ವರ್ಷಾಚರಣೆ ಪ್ರಯುಕ್ತ ನಗರದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದ ಪೊಲೀಸರು, ಮಧ್ಯರಾತ್ರಿ 12 ಗಂಟೆ ನಂತರ ಬಿಡುವು ಮಾಡಿಕೊಂಡು ದೂರುದಾರರ ಮನೆಗಳಿಗೆ ಭೇಟಿ ನೀಡಿದರು. 

ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಸಮ್ಮುಖದಲ್ಲಿ ಡಿಸಿಪಿಗಳಾದ ರವಿ ಚನ್ನಣ್ಣನವರ, ಕೆ. ಅಣ್ಣಾಮಲೈ, ಅಬ್ದುಲ್ ಅಹದ್ ಹಾಗೂ ಚೇತನ್‌ಸಿಂಗ್ ರಾಥೋಡ್, ತಮ್ಮ ವಿಭಾಗದ ಸಿಬ್ಬಂದಿ ಜೊತೆಯಲ್ಲಿ ದೂರುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಿ ‘ಹ್ಯಾಪಿ ನ್ಯೂ ಇಯರ್’ ಶುಭಾಶಯ ಹೇಳಿದರು.

ಹೊಸ ವರ್ಷದ ಉಡುಗೊರೆಯಾಗಿ ಬಂದ ವಸ್ತುಗಳನ್ನು ಸ್ವೀಕರಿಸಿದ ದೂರುದಾರರು, ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು. ಸೈರನ್ ಶಬ್ದ ಕೇಳಿ ಮನೆಯಿಂದ ಹೊರಗೆ ಬಂದಿದ್ದ ಜನ ಸಹ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ನಾವು, ಬಂದೋಬಸ್ತ್ ಮಾಡುತ್ತಲೇ ಹೊಸ ವರ್ಷ ಸ್ವಾಗತಿಸುತ್ತೇವೆ. ಈ ಬಾರಿ, ಠಾಣೆ ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾಗಿದ್ದ ವಸ್ತುಗಳನ್ನು ದೂರುದಾರರಿಗೆ ತಲುಪಿಸುವ ಮೂಲಕ ಹೊಸ ವರ್ಷ ಆಚರಿಸಿದೆವು. ಇದುವೇ ಜನಸ್ನೇಹಿ ಪೊಲೀಸ್’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ ಹೇಳಿದರು.

ವೈಟ್‌ಫೀಲ್ಡ್‌ ಡಿಸಿಪಿ ಅಬ್ದುಲ್ ಅಹದ್, ‘ದೂರುದಾರರಿಗೆ ವಸ್ತುಗಳನ್ನು ತಲುಪಿಸಿ, ಅಪರಾಧ ತಡೆಗಟ್ಟಲು ಪೊಲೀಸರು ನಿಮ್ಮೊಂದಿಗೆ ಇದ್ದಾರೆ ಎಂದು ಧೈರ್ಯ ಹೇಳಲಾಯಿತು’ ಎಂದು ತಿಳಿಸಿದರು.  

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !