ಚಿಂತಾಮಣಿ: ಕ್ಷಯ ರೋಗ ಪತ್ತೆಗೆ 31 ತಂಡ

7
12 ರವರೆಗೆ ಕ್ಷಯರೋಗ ಪತ್ತೆ ಆಂದೋಲನ; ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ

ಚಿಂತಾಮಣಿ: ಕ್ಷಯ ರೋಗ ಪತ್ತೆಗೆ 31 ತಂಡ

Published:
Updated:
Prajavani

ಚಿಂತಾಮಣಿ: ತಾಲ್ಲೂಕಿನಲ್ಲಿ ಕ್ಷಯ ರೋಗದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಹಾಗೂ ರೋಗ ಪತ್ತೆ ಮಾಡುವ ಎರಡನೇ ಸಕ್ರಿಯ ಆಂದೋಲನಕ್ಕೆ ಆರೋಗ್ಯ ಇಲಾಖೆ ಬುಧವಾರ ಚಾಲನೆ ನೀಡಿದೆ. ಜ.12ರವರೆಗೆ ಅಭಿಯಾನ ನಡೆಯಲಿದೆ.

ಕ್ಷಯರೋಗವನ್ನು ತಾಲ್ಲೂಕಿನಲ್ಲಿ ಪತ್ತೆ ಮಾಡಿ ಚಿಕಿತ್ಸೆ ನೀಡುವುದರ ಮೂಲಕ ಸಂಪೂರ್ಣ ನಿರ್ನಾಮ ಮಾಡುವುದನ್ನು ಆರೋಗ್ಯ ಇಲಾಖೆಯು ಸವಾಲಾಗಿ ಸ್ವೀಕರಿಸಿದೆ. ಅದಕ್ಕಾಗಿ ವರ್ಷಕ್ಕೆ ಎರಡರಂತೆ ಅಭಿಯಾನವನ್ನು ಕೈಗೊಂಡಿದೆ. ಪ್ರತಿವರ್ಷ ಜುಲೈ ಮತ್ತು ಜನವರಿಯಲ್ಲಿ 2 ವಾರ ಅಭಿಯಾನ ನಡೆಯಲಿದೆ. ಇಲಾಖೆ ಸಿಬ್ಬಂದಿ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಾರೆ. ಕ್ಷಯರೋಗ ಲಕ್ಷಣವುಳ್ಳವರಿಂದ ಕಫ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುತ್ತಾರೆ. ರೋಗ ದೃಢಪಟ್ಟರೆ ತೀವ್ರತೆ ಆಧರಿಸಿ 6 ತಿಂಗಳಿನಿಂದ ಒಂದು ವರ್ಷದವರೆಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜುಲೈನಲ್ಲಿ ನಡೆದ ಅಭಿಯಾನದಲ್ಲಿ 22 ರೋಗಿಗಳು ಪತ್ತೆಯಾಗಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗಿದೆ. ಈಗ ಎರಡನೆ ಅಭಿಯಾನ ಶುರುವಾಗಿದೆ. ಈ ಬಾರಿ 29660 ಜನರನ್ನು ಅಭಿಯಾನಕ್ಕೆ ಒಳಪಡಿಸುವ ಗುರಿಯನ್ನು ಇಲಾಖೆ ಹೊಂದಿದೆ. ಇದಕ್ಕಾಗಿ 31 ತಂಡಗಳನ್ನು ರಚಿಸಲಾಗಿದೆ. ತಂಡದಲ್ಲಿ ಆಶಾ ಕಾರ್ಯಕರ್ತೆ ಹಾಗೂ ಇಲಾಖೆಯ ಸಿಬ್ಬಂದಿ ಇರುತ್ತಾರೆ. ವಿಶೇಷವಾಗಿ ಕೊಳಚೆ ಪ್ರದೇಶಗಳು, ಕಾಲೊನಿಗಳು, ಇಟ್ಟಿಗೆ ಕಾರ್ಖಾನೆ, ಕೋಳಿ ಫಾರಂಗಳಿಗೆ ಭೇಟಿ ನೀಡುತ್ತಾರೆ. ಜನರಿಗೆ ಕ್ಷಯರೋಗದ ಕುರಿತು ಮನವರಿಕೆ ಮಾಡುವರು. ರೋಗದ ಅನುಮಾನ ಬಂದರೆ ಕಫ ಸಂಗ್ರಹಿಸಿ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸುವರು. ದೃಢಪಟ್ಟರೆ ಉಚಿತ ಚಿಕಿತ್ಸೆ ನೀಡುತ್ತಾರೆ ಎಂದು ತಿಳಿಸಿದರು.

2 ವಾರಕ್ಕಿಂತ ಹೆಚ್ಚಿನ ಸತತ ಕೆಮ್ಮು, ಕಫದ ಜತೆಗೆ ರಕ್ತ ಕಾಣಿಸುವುದು, ಸತತ ಜ್ವರ, ರಾತ್ರಿ ವೇಳೆಯಲ್ಲಿ ತೂಕ ಕಡಿಮೆಯಾಗುವುದು, ರಾತ್ರಿ ವೇಳೆಯಲ್ಲಿ ಬೆವರುವುದು, ಹಸಿವಾಗದಿರುವುದು, ಕ್ಷಯ ರೋಗದ ಮುಖ್ಯ ಲಕ್ಷಣಗಳು. ಈ ಬಗ್ಗೆ ಪ್ರತಿ ಅಭಿಯಾನದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಜನರಲ್ಲಿ ಮಾಹಿತಿ ಕೊರತೆ ಇದ್ದು, ಚಿಕಿತ್ಸೆಗೆ ತಾತ್ಸಾರ ಮಾಡುತ್ತಾರೆ ಎಂದು ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸರೆಡ್ಡಿ ತಿಳಿಸಿದರು.

ಅಭಿಯಾನಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಚಾಲನೆ ನೀಡಿದರು. ವೈದ್ಯಾಧಿಕಾರಿ ಡಾ.ಶ್ರುತಿ, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !