ಅಧಿಕಾರಿಗಳು ಮುಲಾಜಿಗೆ ಒಳಗಾಗಬಾರದು

7
ಉನ್ನತ ಅಧಿಕಾರಿಗಳಿಗೆ ತವರಿನ ಅಂಭಿನಂದನೆ; ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅಭಿಮತ

ಅಧಿಕಾರಿಗಳು ಮುಲಾಜಿಗೆ ಒಳಗಾಗಬಾರದು

Published:
Updated:
Prajavani

ಮಂಡ್ಯ: ‘ರಾಜಕಾರಣಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಬಾರದು. ಕಾನೂನಾತ್ಮಕವಾಗಿ ಕೆಲಸ ಮಾಡಲು ಅವರಿಗೆ ಮುಕ್ತ ಅವಕಾಶ ನೀಡಬೇಕು. ಆಗ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆದು ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ದೇಶದ ವಿವಿಧೆಡೆ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ರೈತ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜಕಾರಣಿಗಳಿಗೆ ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಅಧಿಕಾರಿಗಳು ನಿರಂತರವಾಗಿ 30–40 ವರ್ಷಗಳ ಕಾಲ ಸಾರ್ವಜನಿಕ ಸೇವೆ ಮಾಡುತ್ತಾರೆ. ಹೀಗಾಗಿ ಕೆಲಸ ಮಾಡಲು ಮುಕ್ತ ಅವಕಾಶ ಪಡೆಯಬೇಕು. ಅಧಿಕಾರಿಗಳು ಯಾರ ಮುಲಾಜಿಗೂ ಒಳಗಾಗದಂತೆ ಕಾನೂನಿನ ಚೌಕಟ್ಟಿನಲ್ಲಿ ಶಿಸ್ತಿನಿಂದ, ಶುದ್ಧ ಹಸ್ತರಾಗಿ ಕೆಲಸ ನಿರ್ವಹಿಸಬೇಕು. ಅಧಿಕಾರದಲ್ಲಿ ಇರುವವರೆಗೂ ಒಳ್ಳೆಯ ಕಾರ್ಯ ಮಾಡುತ್ತಾ ಹುಟ್ಟಿದ ಊರು ಹಾಗೂ ನಾಡಿಗೆ ಕೀರ್ತಿ ತರಬೇಕು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ವಿ.ಸಿ.ಫಾರಂನಲ್ಲಿ ಹೊಸ ಮಾದರಿಯ ಕೃಷಿ ಯೋಜನೆ ಜಾರಿಗೊಳಿಸಲಿದ್ದಾರೆ. ಇದಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ, ಜಿಲ್ಲೆಯವರೇ ಆದ ಡಾ.ಎಸ್.ರಾಜೇಂದ್ರಪ್ರಸಾದ್ ಹಾಗೂ ಜಂಟಿ ನಿರ್ದೇಶಕ ಡಾ.ಬಿ.ಕೃಷ್ಣ ಅವರ ಸಹಾಯ ಅತೀ ಮುಖ್ಯವಾಗಿದೆ’ ಎಂದರು.

ಅಭಿನಂದನೆ ಸ್ವೀಕಾರ ಮಾಡಿದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಿಇಒ ಡಾ.ಎನ್.ಶಿವಶಂಕರ್ ಮಾತನಾಡಿ ‘ನಾವು ಸಾಕಷ್ಟು ವೇದಿಕೆಯಿಂದ ಅಭಿನಂದನೆ ಸ್ವೀಕಾರ ಮಾಡಿದ್ದೇವೆ. ಆದರೆ ತವರಿನ ಅಭಿನಂದನೆ ನಮಗೆ ವಿಶೇಷವಾಗಿದೆ. ಜಿಲ್ಲೆಯ ಜನರ ಸೇವೆ ಹಾಗೂ ಜಿಲ್ಲೆಗಾಗಿ ಕೊಡುಗೆ ನೀಡುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಐಎಎಸ್, ಐಎಫ್‌ಎಸ್ ಹಾಗೂ ಕೆಎಎಸ್ ಹುದ್ದೆ ಸೇರಿ ಅನೇಕ ಹುದ್ದೆಗಳನ್ನು ಪಡೆಯುವುದು ಗಗನ ಕುಸುಮ ಎಂದು ಇಂದಿನ ಯುವಕರು ಭಾವಿಸಿದ್ದಾರೆ. ಆದರೆ ಶ್ರದ್ಧೆ, ಪ್ರಾಮಾಣಿಕ ಹಾಗೂ ನಿರಂತರ ಓದಿನಿಂದ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಬಹುದು’ ಎಂದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ‘ವಿಶ್ವವಿದ್ಯಾಲಯಗಳು ಜ್ಞಾನದ ಶಿಖರಗಳಾಗಿದ್ದು, ಜಾತಿ, ಧರ್ಮದ ಮಿತಿಗಳಿಗೆ ಒಳಗಾಗಬಾರದು. ಉನ್ನತ ಅಧಿಕಾರಿಗಳು ಕೂಡ ಜಾತಿ, ಮತದ ಹೊರತಾಗಿ ಇಡೀ ಸಮುದಾಯದ ಅಭ್ಯುದಯಕ್ಕೆ ಕೆಲಸ ಮಾಡಬೇಕು’ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಿಇಒ ಆರ್.ಲತಾ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಅವರನ್ನು ಅಭಿನಂದಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಶಾಸಕ ಎಂ.ಶ್ರೀನಿವಾಸ್, ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷ ಟಿ.ತಿಮ್ಮೇಗೌಡ, ಜಿಪಂ ಸಿಇಒ ಕೆ.ಯಾಲಕ್ಕಿಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ನಾಗರಿಕ ಅಭಿನಂದನಾ ಸಮಿತಿಯ ಪೋಷಕ ಡಾ.ಬಿ.ಕೃಷ್ಣ, ಸಮಿತಿಯ ಅಧ್ಯಕ್ಷ ಸಿ.ತಮ್ಮಯ್ಯ, ಕಾರ್ಯಾಧ್ಯಕ್ಷ ನಾಗಣ್ಣ ಬಾಣಸವಾಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !