ಬಿಇಒ ಕುರ್ಚಿ ಸಂಘರ್ಷಕ್ಕೆ ತೆರೆ

7

ಬಿಇಒ ಕುರ್ಚಿ ಸಂಘರ್ಷಕ್ಕೆ ತೆರೆ

Published:
Updated:
Prajavani

ಕೋಲಾರ: ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ ಅವರ ವರ್ಗಾವಣೆ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು (ಕೆಎಟಿ) ರದ್ದುಪಡಿಸಿದ್ದು, ಅಧಿಕಾರಿಗಳ ನಡುವಿನ ಕುರ್ಚಿ ಸಂಘರ್ಷಕ್ಕೆ ತೆರೆ ಬಿದ್ದಿದೆ.

ರಘುನಾಥರೆಡ್ಡಿ ಅವರನ್ನು ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಯು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್‌) ಹಿರಿಯ ಉಪನ್ಯಾಸಕರ ಹುದ್ದೆಗೆ ವರ್ಗಾವಣೆ ಮಾಡಿ 2018ರ ನ.16ರಂದು ಆದೇಶ ಹೊರಡಿಸಿದ್ದರು.

ರಘುನಾಥರೆಡ್ಡಿ ಅವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ ಸರ್ವ ಶಿಕ್ಷಣ ಅಭಿಯಾನದ (ಎಸ್‌ಎಸ್‌ಎ) ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ಸಮನ್ವಯಾಧಿಕಾರಿ ಕೆ.ಎಸ್‌.ನಾಗರಾಜಗೌಡ ಅವರನ್ನು ನಿಯೋಜಿಸಲಾಗಿತ್ತು. ನಂತರ ರಘುನಾಥರೆಡ್ಡಿ ತಮ್ಮನ್ನು ಅವಧಿಗೂ ಮುನ್ನವೇ ವರ್ಗಾವಣೆ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಕೆಎಟಿ ಮೆಟ್ಟಿಲೇರಿದ್ದರು. ಈ ನಡುವೆ ನಾಗರಾಜಗೌಡ ನ.19ರಂದು ಬಿಇಒ ಹುದ್ದೆಯ ಅಧಿಕಾರ ವಹಿಸಿಕೊಂಡಿದ್ದರು.

ರಘುನಾಥರೆಡ್ಡಿ ಅವರ ಅರ್ಜಿಯ ವಿಚಾರಣೆ ನಡೆಸಿದ ಕೆಎಟಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿ ಬಿಇಒ ಹುದ್ದೆಯಲ್ಲೇ ಮುಂದುವರಿಯುವಂತೆ ಡಿ.27ರಂದು ಆದೇಶ ನೀಡಿತ್ತು. ಈ ಆದೇಶದ ಅನ್ವಯ ರಘುನಾಥರೆಡ್ಡಿ ಡಿ.27ರಂದು ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಅಧಿಕಾರ ವಹಿಸಿಕೊಡುವಂತೆ ಕೇಳಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನಾಗರಾಜಗೌಡ, ‘ಕೆಎಟಿ ಆದೇಶದ ಸಂಗತಿ ತಿಳಿದಿದೆ. ಅಧಿಕಾರ ವಹಿಸಿಕೊಳ್ಳಲು ಹಿರಿಯ ಅಧಿಕಾರಿಗಳಿಂದ ಅನುಮತಿ ಪತ್ರ ತನ್ನಿ’ ಎಂದು ಸೂಚಿಸಿದ್ದರು. ಇದಕ್ಕೆ ಒಪ್ಪದ ರಘುನಾಥರೆಡ್ಡಿ, ನಾಗರಾಜಗೌಡರ ಪಕ್ಕದಲ್ಲೇ ಕುರ್ಚಿ ಹಾಕಿಕೊಂಡು ಕುಳಿತು ಕಾರ್ಯ ನಿರ್ವಹಿಸಿದ್ದರು. ಇದರಿಂದ ಆಡಳಿತಾತ್ಮಕ ಗೊಂದಲ ಸೃಷ್ಟಿಯಾಗಿತ್ತು.

ಹೊಸ ಆದೇಶ: ಕೆಎಟಿ ರಘುನಾಥರೆಡ್ಡಿಯವರ ವರ್ಗಾವಣೆ ಆದೇಶ ರದ್ದುಪಡಿಸಿ ಅಂತಿಮ ಆದೇಶ ಹೊರಡಿಸಿದೆ. ಜತೆಗೆ ನಾಗರಾಜಗೌಡ ಅವರನ್ನು ಬೇರೆ ಹುದ್ದೆಗೆ ನಿಯೋಜಿಸುವಂತೆ ನಿರ್ದೇಶಿಸಿದೆ. ಕೆಎಟಿ ಆದೇಶದ ಅನ್ವಯ ಶಿಕ್ಷಣ ಇಲಾಖೆ (ಆಡಳಿತ) ಅಧೀನ ಕಾರ್ಯದರ್ಶಿ ಟಿ.ಡಿ.ನಾಗೇಂದ್ರ ಅವರು ರಘುನಾಥರೆಡ್ಡಿಯವರ ವರ್ಗಾವಣೆ ಆದೇಶ ರದ್ದುಪಡಿಸಿ ಕೋಲಾರ ಬಿಇಒ ಹುದ್ದೆಯಲ್ಲೇ ಮುಂದುವರಿಯುವಂತೆ ಸೂಚಿಸಿ ಕರ್ತವ್ಯಕ್ಕೆ ಹಾಜರಾಗಲು ಚಾಲನಾ ಆದೇಶ ನೀಡಿದ್ದಾರೆ.

ಬಿಇಒ ಹುದ್ದೆ ಜವಾಬ್ದಾರಿಯಿಂದ ಬಿಡುಗಡೆ ಹೊಂದಿ ರಘುನಾಥರೆಡ್ಡಿ ಅವರಿಗೆ ಕಾರ್ಯಭಾರ ವಹಿಸಿಕೊಡುವಂತೆ ನಾಗೇಂದ್ರ ಅವರು ನಾಗರಾಜಗೌಡ ಅವರಿಗೆ ಆದೇಶಿಸಿದ್ದಾರೆ. ಈ ಆದೇಶದ ಅನ್ವಯ ರಘುನಾಥರೆಡ್ಡಿ ಬಿಇಒ ಕಚೇರಿಯಲ್ಲಿ ಬುಧವಾರ ಕರ್ತವಕ್ಕೆ ಹಾಜರಾಗಿದ್ದು, ಗೊಂದಲಕ್ಕೆ ತೆರೆ ಬಿದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !