ಶಬರಿಮಲೆಗೆ ಮಹಿಳೆಯರ ಪ್ರವೇಶ: ಪ್ರತಿಭಟನೆ

7
ಕೇರಳ ಸರ್ಕಾರದ ವಿರುದ್ಧ ಹಿಂದೂಪರ ಸಂಘಟನೆಗಳ ಆಕ್ರೋಶ: ರಸ್ತೆ ತಡೆ

ಶಬರಿಮಲೆಗೆ ಮಹಿಳೆಯರ ಪ್ರವೇಶ: ಪ್ರತಿಭಟನೆ

Published:
Updated:
Prajavani

ಕೋಲಾರ: ಕೇರಳದ ಶಬರಿಮಲೆ ದೇವಸ್ಥಾನ ಪ್ರವೇಶಿಸಿದ ಮಹಿಳೆಯರ ಕ್ರಮ ಖಂಡಿಸಿ ಅಖಿಲ ಭಾರತ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ಹಾಗೂ ಹಿಂದೂಪರ ಸಂಘಟನೆಗಳ ಸದಸ್ಯರು ಇಲ್ಲಿ ಬುಧವಾರ ರಾತ್ರಿ ಪ್ರತಿಭಟನೆ ಮಾಡಿದರು.

ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದವರೆಗೆ ಮೆರವಣಿಗೆ ಬಂದ ಪ್ರತಿಭಟನಾಕಾರರು ರಸ್ತೆ ತಡೆ ಮಾಡಿ ಕೇರಳ ಸರ್ಕಾರ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯವು ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಕೇರಳ ಸರ್ಕಾರವು ಈ ದೇವಸ್ಥಾನದ ಸಂಪ್ರದಾಯ ಧಿಕ್ಕರಿಸಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದೆ’ ಎಂದು ಶ್ರೀರಾಮಸೇನೆ ಜಿಲ್ಲಾ ಘಟಕದ ಸಂಚಾಲಕ ರಮೇಶ್‌ರಾಜ್‌ ದೂರಿದರು.

‘ಹಿಂದೂ ಧರ್ಮ ಟೀಕಿಸುವುದು ಮತ್ತು ಸಂಪ್ರದಾಯ ಧಿಕ್ಕರಿಸುವುದು ಕೆಲವರಿಗೆ ಫ್ಯಾಷನ್ ಆಗಿದೆ. ರಾಜಕೀಯ ಪಕ್ಷಗಳು ಮತ ಗಳಿಕೆಗಾಗಿ ಧರ್ಮವನ್ನೇ ಕೀಳಾಗಿ ಕಾಣುತ್ತಿವೆ. ಹಿಂದೂ ಧರ್ಮದ ಸಂಪ್ರದಾಯ ಹಾಳು ಮಾಡಲು ಸರ್ಕಾರವೇ ಕುಮ್ಮಕ್ಕು ನೀಡಿದ್ದು ದೇಶದ ದೊಡ್ಡ ದುರಂತ’ ಎಂದು ಟೀಕಿಸಿದರು.

ಹಿಂದೂ ವಿರೋಧಿ ನೀತಿ: ‘ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 10 ವರ್ಷದಿಂದ 50 ವರ್ಷದೊಳಗಿನ ಮಹಿಳೆಯರಿಗೆ ಹಿಂದಿನಿಂದಲೂ ಪ್ರವೇಶ ನಿಷೇಧಿಸಲಾಗಿದೆ. ಆದರೂ ಇಬ್ಬರು ಮಹಿಳೆಯರು ಅಯ್ಯಪ್ಪಸ್ವಾಮಿ ಸನ್ನಿಧಿ ಪ್ರವೇಶಿಸಲು ಕೇರಳ ಸರ್ಕಾರದ ಹಿಂದೂ ವಿರೋಧಿ ನೀತಿಯೇ ಕಾರಣ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ಸರ್ಕಾರ 800 ವರ್ಷಗಳ ಧಾರ್ಮಿಕ ಸಂಪ್ರದಾಯ ಮೀರಿ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ ಅಯ್ಯಪ್ಪಸ್ವಾಮಿ ಭಕ್ತರು ಮತ್ತು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದೆ. ಮಹಿಳೆಯರು ಸುಪ್ರೀಂ ಕೋರ್ಟ್‌ ತೀರ್ಪಿನ ನೆಪ ಮಾಡಿಕೊಂಡು ಧಾರ್ಮಿಕ ಸಂಪ್ರದಾಯ ಧಿಕ್ಕರಿಸಿರುವುದು ಖಂಡನೀಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಜರಂಗದಳ ಜಿಲ್ಲಾ ಘಟಕದ ಸಂಚಾಲಕ ಬಾಬು, ಸದಸ್ಯ ಬಾಲಾಜಿ, ಶ್ರೀರಾಮಸೇನೆ ಸದಸ್ಯ ಪ್ರವೀಣ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶಿವಣ್ಣ, ಅಖಿಲ ಭಾರತ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ಸದಸ್ಯರಾದ ಕೃಷ್ಣಪ್ಪ, ರಾಜು, ವಾಸುದೇವಾನಂದಸ್ವಾಮಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !