ರಿಕ್ಷಾ ಚಾಲಕರ ಸಹಕಾರ ಸಂಘದ ಪಿಐಎಲ್‌: ಆಕ್ಷೇಪಣೆಗೆ ಸಮಯ ಕೋರಿಕೆ

7

ರಿಕ್ಷಾ ಚಾಲಕರ ಸಹಕಾರ ಸಂಘದ ಪಿಐಎಲ್‌: ಆಕ್ಷೇಪಣೆಗೆ ಸಮಯ ಕೋರಿಕೆ

Published:
Updated:

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಟೊ ರಿಕ್ಷಾ ಚಾಲಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಕರ್ನಾಟಕ ಗೃಹ ಮಂಡಳಿಯ (ಕೆಎಚ್‌ಬಿ) ಮೂಲಕ ನಿವೇಶನ–ಮನೆ ಹಂಚಿಕೆ ಮಾಡುವ ದಿಸೆಯಲ್ಲಿ ಸೂಕ್ತ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತಂತೆ ರಾಜಾಜಿ ನಗರದ ಹಿರಿಯ ನಾಗರಿಕ ಸೋಮಶೇಖರ್ ಹಾಗೂ ಬೆಂಗಳೂರು ಆಟೊ ಚಾಲಕರ ಸೌಹಾರ್ದ ಕೋ–ಆಪರೇಟಿವ್ ಲಿಮಿಟೆಡ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪುತ್ತಿಗೆ ಆರ್.ರಮೇಶ್‌, ‘ಆಟೋ ರಿಕ್ಷಾ ಚಾಲಕರು ಸಾರ್ವಜನಿಕ ಸೇವೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಹಗಲು ರಾತ್ರಿ ಕಷ್ಟಪಟ್ಟು ದುಡಿದರೂ ಕನಿಷ್ಠ ಆದಾಯ ಇದ್ದು, ಇವರ ಕುಟುಂಬಗಳು ಸಂಕಷ್ಟದಲ್ಲಿವೆ. ಆದ್ದರಿಂದ ಇವರಿಗೆ ಆರೋಗ್ಯ, ಹಾಗೂ ಬಿಡಿಎ ನಿವೇಶನ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲ ಶಿವಪ್ರಭು ಹಿರೇಮಠ ಅವರು, ‘ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಬೇಕು’ ಎಂದು ಕೋರಿದರು.

ಈ ಮನವಿಯನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಮನವಿ ಏನು?: ‘ಬಿಡಿಎ ಹಾಗೂ ಕೆಎಚ್‌ಬಿಗೆ ಸೇರಿದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಗೃಹ ನಿರ್ಮಾಣಕ್ಕೆ ಅನುದಾನ ಕಲ್ಪಿಸುವ ವಿಷಯಗಳಲ್ಲಿ ರಿಕ್ಷಾ ಚಾಲಕರಿಗೆ ಪ್ರತ್ಯೇಕ ಯೋಜನೆ ಜಾರಿಗೊಳಿಸಬೇಕು. ಇವರು ಅರ್ಜಿ ಸಲ್ಲಿಸುವ ವೇಳೆ ಆರಂಭಿಕ ಠೇವಣಿ ಮೊತ್ತ ಕಡಿಮೆ ಇರುವಂತೆ ಸೂಚಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

‘ಪ್ರಧಾನ ಮಂತ್ರಿ ಆವಾಸ್ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ ಹಾಗೂ ರಾಜೀವ್ ಗಾಂಧಿ ವಸತಿ ಯೋಜನೆಗಳಡಿ ರಿಕ್ಷಾ ಚಾಲಕರಿಗೂ ಫಲಾನುಭವಿಗಳಾಗಲು ಅವಕಾಶ ಕಲ್ಪಿಸಬೇಕು’ ಎಂದೂ ಅರ್ಜಿಯಲ್ಲಿ ವಿವರಿಸಲಾಗಿದೆ.

‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ರಿಕ್ಷಾ ಚಾಲಕರಿಗೆ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಮೀಸಲು ನಿಧಿಯಿಂದ ಅನುದಾನ ದೊರಕಿಸಿಕೊಡಲು ನಿರ್ದೇಶಿಸಬೇಕು’ ಎಂದೂ ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !