‘ಮಕ್ಕಳನ್ನು ಆಕರ್ಷಿಸಿ, ಹಾಜರಾತಿ ಹೆಚ್ಚಿಸಿ’

7

‘ಮಕ್ಕಳನ್ನು ಆಕರ್ಷಿಸಿ, ಹಾಜರಾತಿ ಹೆಚ್ಚಿಸಿ’

Published:
Updated:
Prajavani

ಬೆಂಗಳೂರು: ‘ಪ್ರಾಥಮಿಕ ಶಾಲಾ ಶಿಕ್ಷಣ ಸಂಯೋಜಕರ ಹುದ್ದೆಗೆ ಪರೀಕ್ಷೆ ನಡೆಸದೆ ಸೇವಾ ಹಿರಿತನವನ್ನೇ ಮಾನದಂಡವಾಗಿ ಪರಿಗಣಿಸಿ ನೇಮಕ ಮಾಡಬೇಕು. 120ಕ್ಕಿಂತ ಹೆಚ್ಚಿನ ಮಕ್ಕಳಿರುವ ಶಾಲೆಗಳಿಗೆ ಪದವೀಧರೇತರ ಮುಖ್ಯೋಪಾಧ್ಯಾಯರನ್ನು ಬಡ್ತಿ ಮೂಲಕ ತುಂಬಬೇಕು....’

ಬುಧವಾರ ನಗರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘಟನೆ ಹಮ್ಮಿಕೊಂಡಿದ್ದ ‘ರಾಜ್ಯಮಟ್ಟದ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರ ಪದಾಧಿಕಾರಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಾಗಾರ’ದಲ್ಲಿ ಮಂಡಿಸಲಾದ ಹಕ್ಕೊತ್ತಾಯಗಳು ಇವು.

‘ಒಂದೇ ಹುದ್ದೆಯಲ್ಲಿ 20 ವರ್ಷ, 25 ವರ್ಷ ಹಾಗೂ 30 ವರ್ಷ ಸೇವೆ ಸಲ್ಲಿಸಿರುವ ಸಹ ಶಿಕ್ಷಕರಿಗೆ ನೀಡುತ್ತಿರುವ ವಿಶೇಷ ಭತ್ಯೆಯನ್ನು ಬಡ್ತಿ ಪಡೆದ ಮುಖ್ಯ ಶಿಕ್ಷಕರಿಗೂ ನೀಡಬೇಕು. ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ನೀಡುತ್ತಿರುವಂತೆ 30 ದಿನ ಗಳಿಕೆ ರಜೆಯನ್ನು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೂ ನೀಡಬೇಕು’ ಎಂದು ಸಂಘಟನೆ ಒತ್ತಾಯಿಸಿತು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌, ‘ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. ಆದರೆ, ಮುಂದಿನ ಒಂದು ವರ್ಷದಲ್ಲಿ ಶಾಲೆಗಳಲ್ಲಿ ಹಾಜರಾತಿ ಪ್ರಮಾಣವನ್ನು ಶೇ 20ರಷ್ಟು ಹೆಚ್ಚಿಸಬೇಕು’ ಎಂದು ಷರತ್ತು ಹಾಕಿದರು.

‘ಸರ್ಕಾರಿ ಶಾಲೆಗಳ ಬಗೆಗೆ ಸಮಾಜಕ್ಕೆ ಅಪನಂಬಿಕೆಯಿದೆ. ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುಖ್ಯೋಪಾಧ್ಯಾಯರು ಕಾರ್ಯನಿರ್ವಹಿಸಬೇಕು. ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ಗಮನ ಸೆಳೆಯಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರಿ ಶಾಲೆಗಳಿಗೆ ಹೆಚ್ಚಾಗಿ ಬಡವರ ಮಕ್ಕಳು ಬರುತ್ತಾರೆ. ಅವರಿಗೆ ಮನೆಯಲ್ಲಿ ಪಾಠ ಹೇಳುವವರು ಇರುವುದಿಲ್ಲ. ಆದ್ದರಿಂದ ಆಸ್ಥೆವಹಿಸಿ ಮಕ್ಕಳ ಕುರಿತು ಗಮನಹರಿಸಬೇಕು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !