ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಿ: ಸಚಿವ ಎಂ.ಬಿ. ಪಾಟೀಲ

7

ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಿ: ಸಚಿವ ಎಂ.ಬಿ. ಪಾಟೀಲ

Published:
Updated:

ಬೆಂಗಳೂರು: ಅಪರಾಧಿಗಳನ್ನು ಅಪರಾಧಿಗಳಂತೆ ಪರಿಗಣಿಸಿ, ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಅವರು ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದರು.

ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ ಅವರು, ಅಪರಾಧ ಪ್ರಕರಣ, ಮಹಿಳೆಯರ ಮೇಲಿನ ದೌರ್ಜನ್ಯ, ಆರೋಪಿಗಳ ಬಂಧನ, ಮಾದಕ ವಸ್ತುಗಳ ನಿಯಂತ್ರಣ, ಸಂಚಾರ ದಟ್ಟಣೆ ಸಮಸ್ಯೆಗಳ ಬಗ್ಗೆ ವಿವರ ಪಡೆದರು. ‍ಅ‍‍ಪರಾಧ, ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವಂತೆ ಸೂಚಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಲಾಖೆಗೆ ಸಂಬಂಧಿಸಿದ ಕೆಲವು ಯೋಜನೆಗಳ ಅನುಮೋದನೆ ಆರ್ಥಿಕ ಇಲಾಖೆಯಲ್ಲಿ ಬಾಕಿ ಇದೆ. ಅವುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು. 

ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು. ಅವರ ಜೀವನ ಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು. ವೇತನ ಪರಿಷ್ಕರಣೆ ಹಾಗೂ ಸೌಲಭ್ಯ ಹೆಚ್ಚಳ ಕುರಿತು ರಾಘವೇಂದ್ರ ಔರಾದಕರ ವರದಿಯನ್ನು ತರಿಸಿ ಅಧ್ಯಯನ ಮಾಡಿದ ಬಳಿಕ ಅದರ ಜಾರಿಗೆ  ಕ್ರಮವಹಿಸಲಾಗುವುದು ಎಂದು ತಿಳಿಸಿದರು.

‘ಗೌರಿ ಲಂಕೇಶ್ ಹಾಗೂ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದ ತನಿಖೆಗಳು ಪ್ರಗತಿಯಲ್ಲಿವೆ. ಎರಡು ಪ್ರಕರಣಗಳು ಶೀಘ್ರದಲ್ಲಿ ತಾರ್ಕಿಕ ಅಂತ್ಯ ಕಾಣುವ ವಿಶ್ವಾಸ ಇದೆ. ತನಿಖಾಧಿಕಾರಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದರು.

‘ರಾಜ್ಯದಲ್ಲಿ 113 ಜನರನ್ನು ಅಕ್ರಮ ವಲಸಿಗರೆಂದು ಗುರುತಿಸಲಾಗಿದೆ. ಅವರ ಬಗ್ಗೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಪರಾಧಿಗಳಿಗೆ ಜಾತಿ–ಧರ್ಮದ ಬಣ್ಣ ಕಟ್ಟದೇ, ಅವರನ್ನು ಅಪರಾಧಿಗಳೆಂದೇ ಪರಿಗಣಿಸಲು ಸೂಚಿಸಲಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !