ಯುವಿಸಿಇಗಾಗಿ ವಿ.ವಿ.ಗಳ ನಡುವೆ ಅಂತಃಕಲಹ

7

ಯುವಿಸಿಇಗಾಗಿ ವಿ.ವಿ.ಗಳ ನಡುವೆ ಅಂತಃಕಲಹ

Published:
Updated:
Prajavani

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಮೂರು ಭಾಗಗಳಾಗಿ ವಿಭಜನೆಗೊಂಡ ಬಳಿಕ ಸೆಂಟ್ರಲ್ ಕಾಲೇಜು ಆವರಣದಲ್ಲಿನ ಕಟ್ಟಡಗಳ ಮಾಲೀಕತ್ವದ ಕುರಿತು ಬೆಂಗಳೂರು ಮತ್ತು ಬೆಂಗಳೂರು ಕೇಂದ್ರ ವಿ.ವಿ.ಗಳ ನಡುವೆ ಶುರುವಾದ ‘ಅಂತಃಕಲಹ’ ಈಗಲೂ ಮುಂದುವರಿದಿದೆ. 

ಬೆಂಗಳೂರು ಕೆಂದ್ರ ವಿಶ್ವವಿದ್ಯಾಲಯ ಆವರಣದಲ್ಲಿನ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನ (ಯುವಿಸಿಇ) ಆಡಳಿತವನ್ನು ಬೆಂಗಳೂರು ವಿಶ್ವವಿದ್ಯಾಲಯವೇ ನಡೆಸುತ್ತಿದೆ. ಇದರ ಮೇಲೆ ಹಿಡಿತ ಸಾಧಿಸಲು ಕೇಂದ್ರ ವಿ.ವಿ. ಮತ್ತು ಬೆಂಗಳೂರು ವಿ.ವಿ.ಯ ಹಿರಿಯ ಹುದ್ದೆಗಳಲ್ಲಿ ಇರುವವರು ಪ್ರಯತ್ನಿಸುತ್ತಿದ್ದಾರೆ. 

‘ವಿ.ವಿ. ವಿಭಜನೆಯ ನಿಯಮಗಳ ಪ್ರಕಾರ ಸೆಂಟ್ರಲ್‌ ಕಾಲೇಜು ಆವರಣದಲ್ಲಿನ ಎಲ್ಲ ಆಸ್ತಿಗಳು ಕೇಂದ್ರ ವಿಶ್ವವಿದ್ಯಾಲಯಕ್ಕೆ ಸೇರಬೇಕು. ಆದರೆ, ಬೆಂಗಳೂರು ವಿಶ್ವವಿದ್ಯಾಲಯ ಈವರೆಗೂ ಆ ಎಲ್ಲ ಆಸ್ತಿಗಳನ್ನು ಹಸ್ತಾಂತರಿಸಿಲ್ಲ. ಅವುಗಳಲ್ಲಿ ಯುವಿಸಿಇ  ಕೂಡ ಒಂದು. ಅದನ್ನು ಉಳಿಸಬೇಕೆಂದು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

‘ಶತಮಾನದಷ್ಟು ಹಳೆಯದಾಗಿರುವ ಯುವಿಸಿಇ ಕಟ್ಟಡದ ನವೀಕರಣ ಕಾಮಗಾರಿ ಮುಗಿಸಿದ ಬಳಿಕ, ಹೊಸ ಕೋರ್ಸ್‌ಗಳನ್ನು ಪರಿಚಯಿಸುವ ಯೋಚನೆ ಇದೆ’ ಎಂದು ಅವರು ಹೇಳಿದರು.  

‘ಯುವಿಸಿಇ ಸ್ವಾಯತ್ತ ಶಿಕ್ಷಣ ಸಂಸ್ಥೆಯ ಸ್ಥಾನಮಾನ ಪಡೆಯಲು ಇದು ಸಕಾಲ. ತಾಂತ್ರಿಕ ಶಿಕ್ಷಣವನ್ನು ನೀಡುವ ಆ ಸಂಸ್ಥೆಯ ಮೇಲೆ ಹಿಡಿತ ಸಾಧಿಸಲು ನಾವ್ಯಾರೂ (ಬೆಂಗಳೂರು ಮತ್ತು ಬೆಂಗಳೂರು ಕೇಂದ್ರ ವಿ.ವಿ.) ಪ್ರಯತ್ನಿಸುತ್ತಿಲ್ಲ. ಆ ಕಾಲೇಜು ನಮ್ಮ ವಿ.ವಿ. ವ್ಯಾಪ್ತಿಯಲ್ಲಿ ಇದೆ. ಆದರೂ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಆ ಕಾಲೇಜಿಗೆ ಸ್ವಾಯತ್ತತೆ ಸಿಗಲು ಪ್ರಸ್ತಾವನೆಯನ್ನು ಸಲ್ಲಿಸುತ್ತಿದ್ದೇವೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್‌.ವೇಣುಗೋಪಾಲ್ ತಿಳಿಸಿದರು. ಇವರು ಈ ಹಿಂದೆ ಯುವಿಸಿಇ ಪ್ರಾಂಶುಪಾಲರಾಗಿದ್ದರು.

‘ಕೆ.ಆರ್‌. ವೃತ್ತದ ಬಳಿಯಿರುವ ಯುವಿಸಿಇ ಸೆಂಟ್ರಲ್‌ ಕಾಲೇಜಿಗೆ ಹತ್ತಿರದಲ್ಲಿದೆ. ಇದನ್ನು ಪರಿಗಣಿಸಿ ಕ್ಷೇತ್ರವಾರು ವಿಭಜನೆ ಪ್ರಕಾರ ಯುವಿಸಿಇ ಬೆಂಗಳೂರು ಕೇಂದ್ರ ವಿ.ವಿ. ಆಡಳಿತಕ್ಕೆ ಒಳಪಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಕಾಲೇಜಿನ ನೌಕರರಿಗೆ ವಿ.ವಿ. ಆಯ್ಕೆಗೆ ಅವಕಾಶ ಒದಗಿಸಲಾಗಿತ್ತು’ ಎಂದು ವಿ.ವಿ. ವಿಭಜನೆಯ ತಜ್ಞರ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.

ಮೆಕ್ಯಾನಿಕಲ್‌, ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯೂನಿಕೇಷನ್‌, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ – ನಾಲ್ಕು ಎಂಜಿನಿಯರಿಂಗ್‌ ವಿಭಾಗಗಳು ಸೆಂಟ್ರಲ್‌ ಕಾಲೇಜಿನ ಯುವಿಸಿಇ ಕ್ಯಾಂಪಸ್‌ನಲ್ಲಿವೆ. ವಾಸ್ತುಶಿಲ್ಪ ಮತ್ತು ಸಿವಿಲ್‌ ಎಂಜಿನಿಯರಿಂಗ್‌ ವಿಭಾಗಗಳು ಬೆಂಗಳೂರು ವಿ.ವಿ.ಯ ಜ್ಞಾನಭಾರತಿ ಆವರಣದಲ್ಲಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !