ಅನಾಥ ಮಕ್ಕಳನ್ನು ದತ್ತು ಪಡೆಯಿರಿ

7
ನಗರದಲ್ಲಿ ಸಿ.ವಿ. ಕಮಲಮ್ಮ ಮತ್ತು ಸಿ.ವಿ. ವೆಂಕಟರಾಯಪ್ಪ ಸ್ಮಾರಕ ವಿಶೇಷ ದತ್ತು ಸ್ವೀಕಾರ ಕೇಂದ್ರ ಉದ್ಘಾಟನೆ

ಅನಾಥ ಮಕ್ಕಳನ್ನು ದತ್ತು ಪಡೆಯಿರಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಮಕ್ಕಳಿಲ್ಲದ ದಂಪತಿಗಳು ಅನಾಥ, ನಿರ್ಗತಿಕ ಮಕ್ಕಳನ್ನು ದತ್ತು ಪಡೆದು ಬಾಳು ಕೊಟ್ಟರೆ ಅನಾಥ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ. ಅದರಿಂದ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪರಸ್ಪರ ಕೈಜೋಡಿಸಿದಂತಾಗುತ್ತದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್. ಕೋರಡ್ಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಕೆ.ವಿ. ಟ್ರಸ್ಟ್ ಸಹಯೋಗದಲ್ಲಿ ನಗರದ ಕಂದವಾರ ಪೇಟೆಯ ವೆಂಕಟನರಸಮ್ಮ ಗುರುಕುಲಾಶ್ರಮದಲ್ಲಿ ಗುರುವಾರ ಆಯೋಜಿಸಿದ್ದ ಸಿ.ವಿ. ಕಮಲಮ್ಮ ಮತ್ತು ಸಿ.ವಿ. ವೆಂಕಟರಾಯಪ್ಪ ಸ್ಮಾರಕ ವಿಶೇಷ ದತ್ತು ಸ್ವೀಕಾರ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದ ಕಲುಷಿತ ವಾತಾವರಣದಲ್ಲಿ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವುದು ಕಳವಳದ ಸಂಗತಿ. ಸಮಾಜದಲ್ಲಿ ಮಾನವೀಯ ಮೌಲ್ಯಗಳ ಕುಸಿತದಿಂದ ಎಷ್ಟೇ ಕಾನೂನುಗಳು, ಪೊಲೀಸ್ ರಕ್ಷಣೆ ಇದ್ದಾಗಲೂ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ. ಇವತ್ತು ನಿರ್ಗತಿಕ, ತಂದೆ–ತಾಯಿಯಿಂದ ಬೇರ್ಪಟ್ಟ, ತೊಂದರೆಗೀಡಾದ, ಅನಾಥ ಮಕ್ಕಳಳಿಗೆ ಏನು ಅನುಕೂಲತೆ ಮಾಡಲು ಸಾಧ್ಯ ಎಂಬುದು ಚಿಂತಿಸಬೇಕಾದ ವಿಚಾರ’ ಎಂದು ತಿಳಿಸಿದರು.

‘ಹೆತ್ತವರೇ ಮಕ್ಕಳನ್ನು ತೊರೆಯುವುದು ಘೋರ ಸಂಗತಿ. ರೈಲ್ವೆ ಮತ್ತು ಬಸ್‌ ನಿಲ್ದಾಣಗಳು, ಚಿತ್ರ ಮಂದಿರಗಳ ಬಳಿ ಮಕ್ಕಳನ್ನು ಬಿಟ್ಟು ಹೋಗುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ನಿರ್ಗತಿಕ ಮಕ್ಕಳು ಕಂಡುಬಂದಾಗ ಅವರನ್ನು ಮಕ್ಕಳ ರಕ್ಷಣಾ ಘಟಕದವರು ರಕ್ಷಿಸಿ ತ್ವರಿತವಾಗಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ದತ್ತು ಕೇಂದ್ರಗಳಿಗೆ ಒಪ್ಪಿಸಬೇಕು. ಅಂತಹ ಮಕ್ಕಳಿಗೆ ಹೊಸ ಬದುಕು ಕಲ್ಪಿಸಬೇಕು’ ಎಂದರು.

‘ಹಿಂದೂ ಕಾನೂನಿನಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದತ್ತು ನೀಡುವ ಅವಕಾಶವಿದೆ. ಅದರಂತೆ ಮಕ್ಕಳಿಲ್ಲದ ದಂಪತಿಗಳು ದತ್ತು ಸ್ವೀಕರಿಸಲು ಇರುವ ನಿಬಂಧನೆಗಳನ್ನು ಪೂರೈಸಿದರೆ ಅಂತಹವರಿಗೆ ಮಕ್ಕಳನ್ನು ದತ್ತು ನೀಡಲಾಗುತ್ತದೆ. ತೊಂದರೆಗೀಡಾದ, ಅನಾಥರಿಗೆ ನೆರವಾಗುವಲ್ಲಿ ಕೆ.ವಿ.ಟ್ರಸ್ಟ್ ಮಾಡುತ್ತಿರುವ ಈ ಕಾರ್ಯ ಸಣ್ಣದಲ್ಲ. ಇದೊಂದು ಶ್ಲಾಘನೀಯ ಕೆಲಸ. ಇಂತಹವರು ನಮಗೆ ಬೇಕು’ ಎಂದು ಹೇಳಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್ ಮಾತನಾಡಿ, ‘ಈ ದಿನ ಚಿಕ್ಕಬಳ್ಳಾಪುರದಲ್ಲಿ ಪುಣ್ಯದ ಕೆಲಸ ಆರಂಭವಾಗುತ್ತಿದೆ. ಅನಾಥ ಮಕ್ಕಳನ್ನು ದಾರಿ ಬದಿ, ಬೇಲಿಯಲ್ಲಿ ಬಿಸಾಕುವುದು, ಮಣ್ಣಿನಲ್ಲಿ ಹೂತು ಹೋದ ಉದಾಹರಣೆಗಳಿವೆ. ಅನೇಕ ಪ್ರಕರಣಗಳಲ್ಲಿ ಶಿಶುಗಳನ್ನು ಕ್ರಿಮಿಕೀಟಗಳು ಕಚ್ಚಿದ್ದು ಉಂಟು. ಅಂತಹ ಶಿಶುಗಳಿವೆ ನಾವು ಚಿಕಿತ್ಸೆ ನೀಡಿ ಪೊಲೀಸರು ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಮೂಲಕ ಬೆಂಗಳೂರಿನಲ್ಲಿರುವ ಬಾಲ ಮಂದಿರಕ್ಕೆ ಕಳುಹಿಸುತ್ತಿದ್ದೆವು’ ಎಂದು ತಿಳಿಸಿದರು.

‘ಇನ್ನು ಮೇಲೆ ಜಿಲ್ಲೆಯಲ್ಲಿ ಪತ್ತೆಯಾಗುವ ಅನಾಥ ಮಕ್ಕಳನ್ನು ಬೆಂಗಳೂರಿಗೆ ಕಳುಹಿಸುವ ಅಗತ್ಯವಿಲ್ಲ. ಇದೇ ಕೇಂದ್ರಕ್ಕೆ ಅಂತಹ ಮಕ್ಕಳನ್ನು ಸೇರಿಸಬಹುದು. ಇಲ್ಲಿಂದಲೇ ಜನರು ಆ ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದು. ಪ್ರಪಂಚದಲ್ಲಿ ಯಾರೂ ಅನಾಥರಲ್ಲ. ಎಲ್ಲರಿಗೂ ತಂದೆಯಾಗಿ ಭಗವಂತ ಇದ್ದಾನೆ. ಹೀಗಾಗಿ ಯಾರಿಗೂ ಅನಾಥ ಪ್ರಜ್ಞೆ ಬರಬಾರದು’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಚ್. ದೇವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಂಗಾಮಿ ಉಪನಿರ್ದೇಶಕಿ ಜಿ.ಕೆ.ಲಕ್ಷ್ಮೀದೇವಮ್ಮ, ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಪ್ರಕಾಶ್, ಮಕ್ಕಳ ವಿಶೇಷ ಪೊಲೀಸ್ ಘಟಕದ ಇನ್‌ಸ್ಪೆಕ್ಟರ್‌ ಬಾಲಾಜಿ ಸಿಂಗ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜೇಂದ್ರ ಪ್ರಸಾದ್, ಕೆ.ವಿ.ಟ್ರಸ್ಟ್ ಸದಸ್ಯರಾದ ಮುನಿಯಪ್ಪ, ನಿರ್ಮಲಾ ಪ್ರಭು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ನಾಗಮಣಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !