ಖರೀದಿಗೆ ಮುಂದಾದರೂ ಜೋಳವೇ ಇಲ್ಲ!

7
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಜೋಳ ಬೆಂಬಲ ಬೆಲೆಯಡಿ ಖರೀದಿಗೆ ಸಿದ್ಧತೆ

ಖರೀದಿಗೆ ಮುಂದಾದರೂ ಜೋಳವೇ ಇಲ್ಲ!

Published:
Updated:

ಬಾಗಲಕೋಟೆ: ಮುಂಗಾರು ಹಂಗಾಮಿನಲ್ಲಿ ಕೇಂದ್ರದ ಬೆಂಬಲ ಬೆಲ ಬೆಲೆ ಯೋಜನೆಯಡಿ ಬಿಳಿಜೋಳ ಖರೀದಿಗೆ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ವಿಶೇಷವೆಂದರೆ ಖರೀದಿ ಮಾಡಲು ಮಾರುಕಟ್ಟೆಯಲ್ಲಿ ಇಲ್ಲವೇ ರೈತರ ಹೊಲದಲ್ಲಿ ಬಿಳಿಜೋಳವೇ ಇಲ್ಲ.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 529 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿಳಿಜೋಳ ಬೆಳೆಯಲಾಗಿದೆ. ಅದರಲ್ಲೂ ದನಗಳ ಮೇವಿಗಾಗಿ ನೀರಾವರಿ ಬಳಸಿ ಕೆಲವು ರೈತರು ಜೋಳ ಬೆಳೆದಿದ್ದಾರೆ.

’ಈಗಾಗಲೇ ಪೀಕು ಬಂದಿದ್ದು, ಕೆಲವರು ಮನೆ ಬಳಕೆಗೆ ಮಾತ್ರ ಬೆಳೆದಿದ್ದಾರೆ. ಇನ್ನೂ ಕೆಲವರು ಈಗಾಗಲೇ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಹಾಗಾಗಿ ಬೆಂಬಲ ಬೆಲೆಯಡಿ ಖರೀದಿ ಯೋಜನೆ ಜಿಲ್ಲೆಯಲ್ಲಿ ಅಷ್ಟಾಗಿ ಯಶಸ್ವಿಯಾಗುವುದಿಲ್ಲ’ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.  

ಇದಕ್ಕೆ ‍ಪೂರಕವಾಗಿ ಕಳೆದೊಂದು ವಾರದಿಂದ (ಡಿಸೆಂಬರ್ 28ರಿಂದ ಜನವರಿ 3) ಬಾಗಲಕೋಟೆ ಎಪಿಎಂಸಿಗೆ ಬಿಳಿಜೋಳದ ಆವಕವೇ ಆಗಿಲ್ಲ. ‘ಇನ್ನೊಂದು ತಿಂಗಳು ಕಳೆದರೆ ಹಿಂಗಾರು ಹಂಗಾಮಿನ ಜೋಳ ಕಟಾವಿಗೆ ಬರಲಿದೆ. ಆಗ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ತೆರೆದರೆ ರೈತರಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಹಿಂಗಾರಿನಲ್ಲಿ 1ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದೆ’ ಎನ್ನುತ್ತಾರೆ.

ಈ ಬಾರಿ ಬಿಳಿಜೋಳ ಬೆಂಬಲ ಬೆಲೆಯಡಿ ಖರೀದಿಗೆ ಪ್ರತಿ ಕ್ವಿಂಟಲ್‌ಗೆ ₹2450ರಂತೆ ಬೆಲೆ ನಿಗದಿಪಡಿಸಲಾಗಿದೆ. ಜನವರಿ 1 ರಿಂದ 15 ವರೆಗೆ ರೈತರ ಹೆಸರು ನೋಂದಣಿ ಮಾಡಿಕೊಳ್ಳಲಾಗುತ್ತಿದೆ.

ಬಾಗಲಕೋಟೆ, ಹುನಗುಂದ, ಬಾದಾಮಿ ಹಾಗೂ ಬೀಳಗಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯ ರೈತರು ಆಧಾರ್‌ಕಾರ್ಡ್, ಪಹಣಿ ಪತ್ರಿಕೆ, ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸ್‌ಬುಕ್‌ ಪ್ರತಿಯನ್ನು ಖರೀದಿ ಕೇಂದ್ರಗಳಲ್ಲಿ ಸಲ್ಲಿಸಿ ನೋಂದಣಿ ಮಾಡಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !