ಶಿರೂರ: ಇಂದಿನಿಂದ ಅಟ್ಯಾ–ಪಟ್ಯಾ ಸದ್ದು

7
ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಪಂದ್ಯಾವಳಿ ಆಯೋಜನೆ

ಶಿರೂರ: ಇಂದಿನಿಂದ ಅಟ್ಯಾ–ಪಟ್ಯಾ ಸದ್ದು

Published:
Updated:
Prajavani

ಬೆನಕಟ್ಟಿ (ಬಾಗಲಕೋಟೆ): ಸಮೀಪದ ಶಿರೂರಿನಲ್ಲಿ ಜ.4 ರಿಂದ 6 ರವರೆಗೆ ರಾಷ್ಟ್ರಮಟ್ಟದ 33ನೇ ಪುರುಷ ಹಾಗೂ ಮಹಿಳೆಯರ ಅಟ್ಯಾ-ಪಟ್ಯಾ ಪಂದ್ಯಾವಳಿ ಜರುಗಲಿದೆ.

ಕರ್ನಾಟಕ ರಾಜ್ಯ ಅಟ್ಯಾ-ಪಟ್ಯಾ ಅಸೋಸಿಯೇಶನ್ ಹಾಗೂ ಶಿರೂರು ಗ್ರಾಮ ಪಂಚಾಯ್ತಿ ಆಶ್ರಯದಲ್ಲಿ ಶುಕ್ರವಾರದಿಂದ ಪಂದ್ಯಾವಳಿ ಆರಂಭವಾಗಲಿದೆ. ದೇಶದ 22 ರಾಜ್ಯಗಳ ಅಟ್ಯಾ-ಪಟ್ಯಾ ತಂಡಗಳು ಭಾಗವಹಿಸಲಿವೆ. ಗುರುವಾರ ಸಂಜೆ ವೇಳೆಗೆ 10ಕ್ಕೂ ಹೆಚ್ಚು ರಾಜ್ಯಗಳ ಪುರುಷ ಹಾಗೂ ಮಹಿಳಾ ತಂಡಗಳು ಗ್ರಾಮಕ್ಕೆ ಬಂದಿವೆ.

ಗ್ರಾಮೀಣ ಕ್ರೀಡೆಯಾಗಿರುವ ಅಟ್ಯಾ-ಪಟ್ಯಾ(ಸರಗೆರೆ) ರಾಷ್ಟ್ರಮಟ್ಟದ ಪಂದ್ಯಾವಳಿ ಇದೇ ಪ್ರಥಮ ಬಾರಿಗೆ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದೆ ಎಂದು ಹೇಳಲಾಗಿದ್ದು, ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿಕೊಡಲು ಶಿರೂರು ಗ್ರಾಮಸ್ಥರು ಅತ್ಯಂತ ಉತ್ಸಾಹದಿಂದ ಸಿದ್ಧತೆ ಕೈಗೊಂಡಿದ್ದಾರೆ.

ಗ್ರಾಮದ ಸಿದ್ದೇಶ್ವರ ಪ್ರೌಢಶಾಲೆಯ ಮೈದಾನದಲ್ಲಿ ಕಳೆದ 10 ದಿನಗಳಿಂದ ಕ್ರೀಡೆಯ ವೇದಿಕೆ ನಿರ್ಮಾಣ ಹಾಗೂ ಗ್ರಾಮಕ್ಕೆ ಬರುವ ಕ್ರೀಡಾಪಟುಗಳು ಹಾಗೂ ಕ್ರೀಡಾಧಿಕಾರಿಗಳಿಗೆ ವಸತಿ ಹಾಗೂ ಊಟೋಪಚಾರಕ್ಕಾಗಿ ಸಿದ್ಧತೆ ಮಾಡಲಾಗುತ್ತಿದೆ. ಗ್ರಾಮಸ್ಥರು ಕೈಜೋಡಿಸಿದ್ದಾರೆ ಎಂದು ಅಟ್ಯಾ-ಪಟ್ಯಾ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಡಾ.ವಿ.ಡಿ.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

400 ಕ್ರೀಡಾಪಟುಗಳು: ಪಂದ್ಯಾವಳಿಯಲ್ಲಿ 22 ರಾಜ್ಯಗಳ ಸುಮಾರು 400 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಹಿಸಲಿದ್ದಾರೆ.  ನಿರ್ಣಾಯಕರು ಸೇರಿದಂತೆ 50 ಮಂದಿ ಕ್ರೀಡಾಧಿಕಾರಿಗಳು ಅವರಿಗೆ ಸಾಥ್ ನೀಡಲಿದ್ದಾರೆ. ಕ್ರೀಡಾಪಟುಗಳನ್ನು ಅವರು ಉಳಿದುಕೊಂಡಿರುವ ವಸತಿ ಜಾಗೆಯಿಂದ ಮೈದಾನಕ್ಕೆ ಹಾಗೂ ಬಾಗಲಕೋಟೆ ರೈಲ್ವೆ ನಿಲ್ದಾಣದಿಂದ  ಗ್ರಾಮಕ್ಕೆ ಕರೆತರಲು ಎರಡು ವಾಹನಗಳ ವ್ಯವಸ್ಥೆ ಮಾಡಲಾಗಿದೆ.

₹ 7 ಲಕ್ಷ ವೆಚ್ಚ: ಪಂದ್ಯಾವಳಿಗೆ ₹7 ಲಕ್ಷ ವೆಚ್ಚದ ಅಂದಾಜು ಮಾಡಲಾಗಿದೆ. ಇದಕ್ಕೆ ಫೆಡರೇಷನ್ ₹ 2 ಲಕ್ಷ ನೀಡಿದೆ. ಉಳಿದ ಹಣವನ್ನು ಗ್ರಾಮಸ್ಥರು ಸಂಗ್ರಹಿಸಿದ್ದಾರೆ. ಕ್ರೀಡಾಪಟುಗಳು ಹಾಗೂ ಕ್ರೀಡಾಧಿಕಾರಿಗಳಿಗೆ ಉತ್ತರ ಕರ್ನಾಟಕ ಭಾಗದ ರುಚಿಕಟ್ಟಾದ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ರಂಗಪ್ಪ ಮಳ್ಳಿ ಹೇಳಿದರು.
ನೀರು, ವಿದ್ಯುತ್, ವಸತಿ, ಊಟೋಪಚಾರ ಸೇರಿದಂತೆ ಎಲ್ಲವನ್ನೂ ವ್ಯವಸ್ಥಿತವಾಗಿ ಒದಗಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಸಂಘಟಕರು ತಿಳಿಸಿದರು.

ಉದ್ಘಾಟನೆ: ಸ್ಥಳಿಯ ಶಿವಯೋಗಾಶ್ರಮದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿರುವ ಸಮಾರಂಭವನ್ನು ಬೆಳಿಗ್ಗೆ 9 ಗಂಟೆಗೆ ರಾಜ್ಯ ಅಟ್ಯಾ-ಪಟ್ಯಾ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಹೊರಟ್ಟಿ ಉದ್ಘಾಟಿಸುವರು.

ಅತಿಥಿಯಾಗಿ ಸಕ್ಕರೆ ಸಚಿವ ಆರ್.ಬಿ.ತಿಮ್ಮಾ‍ಪುರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಸಿಇಒ ಗಂಗೂಬಾಯಿ ಮಾನಕರ, ಮಾಜಿ ಶಾಸಕ ಎಚ್.ವೈ.ಮೇಟಿ ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !