ಮಹಿಳೆಯರ ಸಬಲೀಕರಣಕ್ಕೆ ಸಂಜೀವಿನಿ ಯೋಜನೆ

7
ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಪದಾಧಿಕಾರಿಗಳ ಕಾರ್ಯಾಗಾರ ಹಾಗೂ ಸಮುದಾಯ ಬಂಡವಾಳ ನಿಧಿ ವಿತರಣಾ ಕಾರ್ಯಕ್ರಮ

ಮಹಿಳೆಯರ ಸಬಲೀಕರಣಕ್ಕೆ ಸಂಜೀವಿನಿ ಯೋಜನೆ

Published:
Updated:
Prajavani

ಚಿಕ್ಕಬಳ್ಳಾಪುರ: ‘ಮಹಿಳೆಯರ ಆರ್ಥಿಕ ಬಲವರ್ಧನೆ ಮಾಡುವ ಉದ್ದೇಶದಿಂದ ಸರ್ಕಾರ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ. ಮಹಿಳೆಯರು ತಮ್ಮ ಆರ್ಥಿಕ ಮಟ್ಟ ಸುಧಾರಣೆಗಾಗಿ ಸ್ವ ಸಹಾಯ ಸಂಘಗಳ ಮೂಲಕ ಸಂಘಟಿತರಾಗಿ, ಈ ಯೋಜನೆಯ ಸವಲತ್ತನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ. ಮಂಜುನಾಥ್ ಹೇಳಿದರು.

ಜಿಲ್ಲಾ ಪಂಚಾಯಿತಿ, ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಪದಾಧಿಕಾರಿಗಳ ಕಾರ್ಯಾಗಾರ ಹಾಗೂ ಸಮುದಾಯ ಬಂಡವಾಳ ನಿಧಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅಪಾರ. ಮಹಿಳೆಯ ಆರ್ಥಿಕ ಮಟ್ಟ ಸುಧಾರಣೆಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮಹಿಳೆಯರು ಸ್ವ ಸಹಾಯ ಸಂಘಗಳಲ್ಲಿನ ಸಹಾಯಧನಕ್ಕೆ ಸೀಮಿತವಾಗದೆ ಆರ್ಥಿಕವಾಗಿ ಸ್ವಾವಲಂಬಿಗಳು ಆಗುವುದರ ಜತೆಗೆ ಸಮಾಜ ಮುಖಿ ಚಟುವಟಿಕೆಗಳನ್ನು ಕೈಗೊಂಡು, ಸಮಾಜವನ್ನು ಕಾಡುತ್ತಿರುವ ದುಶ್ಚಟ, ಪಿಡುಗುಗಳನ್ನು ಹೋಗಲಾಡಿಸಲು ಮುಂದಾಗಬೇಕು’ ಎಂದು ತಿಳಿಸಿದರು.

‘ಲಾಭಯುತ ಆದಾಯವನ್ನು ಒದಗಿಸುವ ಮೂಲಕ ಬಡತನದ ತೀವ್ರತೆಯನ್ನು ಕಡಿಮೆಗೊಳಿಸುವುದು ಮತ್ತು ಸಮುದಾಯದ ಸಂಸ್ಥೆಗಳ ಮೂಲಕ ಸ್ವ ಉದ್ಯೋಗ ಅವಕಾಶಗಳನ್ನು ಕಲ್ಪಿಸಿ, ಗ್ರಾಮೀಣ ಜನರ ಜೀವನಮಟ್ಟದಲ್ಲಿ ಅಭಿವೃದ್ಧಿಯನ್ನು ಕಾಣುವುದು ಈ ಯೋಜನೆಯ ಧ್ಯೇಯವಾಗಿದೆ. ಮಹಿಳೆಯರು ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ ಮಟ್ಟ ಸುಧಾರಣೆಯ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಕೈ ಜೋಡಿಸಬೇಕು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ‘ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 2010–11ನೇ ಸಾಲಿನಲ್ಲಿ ಸ್ವರ್ಣಜಯಂತಿ ಸ್ವರೋಜ್‌ಗಾರ್ ಯೋಜನೆಯನ್ನು ಪುನರ್ ರಚಿಸಿ ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನವನ್ನಾಗಿ ಜಾರಿಗೆ ತಂದಿದೆ. ರಾಜ್ಯದಲ್ಲಿ ಈ ಯೋಜನೆಗೆ ಸಂಜೀವಿನಿ ಎಂದು ನಾಮಕರಣ ಮಾಡಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಸಂಜೀವಿನಿ ಯೋಜನೆಯನ್ನು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆಎಸ್ಆರ್ಎಲ್‌ಪಿಎಸ್) ಮೂಲಕ ಜಾರಿಗೊಳಿಸಲಾಗುತ್ತಿದೆ. ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಭರಿಸುತ್ತವೆ. ಪ್ರತಿ ಸ್ವ ಸಹಾಯ ಗುಂಪುಗಳಿಗೆ ಮೂವರು ಮಹಿಳೆಯರು ಆಯ್ಕೆ ಮಾಡಿ ವಾರ್ಡ್ ಮಟ್ಟದ ಒಕ್ಕೂಟವನ್ನು ರಚನೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ವಾರ್ಡ್ ಮಟ್ಟದ ಒಕ್ಕೂಟದಲ್ಲಿ ಮೂವರು ಮಹಿಳೆಯರನ್ನು ಆಯ್ಕೆ ಮಾಡಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟವನ್ನು ಸ್ಥಾಪಿಸಿ ಪದಾಧಿಕಾರಿಗಳನ್ನು ನೇಮಿಸಲಾಗುತ್ತದೆ. ಆ ಒಕ್ಕೂಟದ ಮೂಲಕ ಕಿರು ಬಂಡವಾಳ ಯೋಜನೆಯ ತರಬೇತಿ ಪಡೆದು, ಯೋಜನೆ ತಯಾರಿಸಿ ಕೋರಿಗೆ ಸಲ್ಲಿಸಿದ ಅರ್ಹ ಸ್ವ ಸಹಾಯ ಗುಂಪುಗಳಿಗೆ ಶೇ 12 ರಷ್ಟು ಸೇವಾ ಶುಲ್ಕದೊಂದಿಗೆ ಮರುಪಾವತಿಸಬೇಕಾದ ಸಾಲದ ರೂಪದಲ್ಲಿ ಸಮುದಾಯ ಬಂಡವಾಳ ನಿಧಿಯನ್ನು ನೀಡಲಾಗುತ್ತದೆ’ ಎಂದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲರ ಸ್ವ ಸಹಾಯ ಗುಂಪುಗಳಿಗೆ ಪ್ರತಿ ಸ್ವ-ಸಹಾಯ ಗುಂಪಿಗೆ ₹1.25 ಲಕ್ಷ ಮತ್ತು ಇತರೆ ಸ್ವ-ಸಹಾಯ ಗುಂಪುಗಳಿಗೆ ₹75 ಸಾವಿರವನ್ನು ಸಾಲವಾಗಿ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ಎಂ. ಶಶಿಧರ್, ಸಂಪನ್ಮೂಲ ವ್ಯಕ್ತಿ ಆಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !