ಎಳ್ಳು ಅಮಾವಾಸ್ಯೆಗೆ ಭರದ ಸಿದ್ಧತೆ

7

ಎಳ್ಳು ಅಮಾವಾಸ್ಯೆಗೆ ಭರದ ಸಿದ್ಧತೆ

Published:
Updated:
Prajavani

ಬಾದಾಮಿ: ಉತ್ತರ ಕರ್ನಾಟಕದಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ‘ ಶೀಗಿ ಹುಣ್ಣಿಮೆ‘ ದಿನ ನಂತರ ಹಿಂಗಾರು ಹಂಗಾಮಿನಲ್ಲಿ ‘ ಎಳ್ಳು ಅಮಾವಾಸ್ಯೆ’ ದಿನ ವರ್ಷದಲ್ಲಿ ಎರಡು ಬಾರಿ ಭೂತಾಯಿಯನ್ನು ಸಂಭ್ರಮದಿಂದ ಪೂಜಿಸುವರು.

ಈ ಬಾರಿ ಮಳೆಯ ಕೊರತೆಯಿಂದ ಕೆಲವು ರೈತರು ಬಿತ್ತನೆ ಮಾಡಿಲ್ಲ. ಬಿತ್ತಿದ ಬೆಳೆಗಳು ಬಾಡಿವೆ. ನೀರಾವರಿ ಬೆಳೆಗಳು ಚೆನ್ನಾಗಿವೆ. ಆದರೂ ಭೂತಾಯಿಗೆ ಪೂಜೆಯನ್ನು ಮಾಡಬೇಕಲ್ಲ. ಬರದ ನಡುವೆಯೂ ಬೆಳೆ ಇಲ್ಲದ ಹೊಲದಲ್ಲೂ ಪೂಜೆ ಮಾಡಲು ರೈತ ಕುಟುಂಬಗಳು ಸಜ್ಜಾಗಿವೆ.

ಎಳ್ಳು ಅಮಾವಾಸ್ಯೆಗೆ ಒಂದು ವಾರ ಮುಂಚೆಯೇ ಮನೆಯಲ್ಲಿ ಮಹಿಳೆಯರಿಗೆ ಬಿಡುವಿಲ್ಲದ ಕೆಲಸ. ಶೇಂಗಾ ಹೋಳಿಗೆ, ಎಣ್ಣಿ ಹೋಳಿಗೆ, ಕರಚಿಕಾಯಿ, ಸುರುಳಿ ಹೋಳಿಗೆ , ಎಳ್ಳು ಹಚ್ಚಿದ ಸಜ್ಜೆ ಮತ್ತು ಬಿಳಿಜೋಳದ ಖಡಕ್ ರೊಟ್ಟಿ, ಶೇಂಗಾ, ಕಡಲೆ, ಪುಠಾಣಿ, ಅಗಸೆ, ಕೊಬ್ಬರಿ, ಗುರೆಳ್ಳು ಚಟ್ನಿಯನ್ನು ಒರಳಲ್ಲಿ ಕುಟ್ಟಿ ಮಾಡುವರು.

ಅಮಾವಾಸ್ಯೆ ದಿನ ರಾತ್ರಿ 2 ಗಂಟೆಗೆ ಎದ್ದು ಮುಳುಗಾಯಿ ಬದನೆ, ಮಡಿಕೆಕಾಳು, ಪುಂಡಿಪಲ್ಲೆ, ಚವಳಿಕಾಯಿ ಪಲ್ಲೆ, ಮೆಣಸಿನಕಾಯಿ ಪಲ್ಲೆ, ಕರಿದ ಸಿಹಿ ಕಡಬು, ಚಿಕ್ಕ ಚಿಕ್ಕ ಜೋಳದ ಕಡಬು, ಚಪಾತಿ, ಅನ್ನ, ಕಟ್ಟಿನ ಸಾರು ಮಾಡುವರು. ತುಪ್ಪ, ಕೆನೆಮೊಸರು, ಸೆಂಡಿಗೆ, ಭಜಿ, ಹಿಟ್ಟಿನ ವಡೆ, ಮೊಸರಿನ ಕರಿದಮೆಣಸಿನಕಾಯಿ, ಸೌತೆಕಾಯಿ,ಮೂಲಂಗಿ, ಉಳ್ಳಾಗಡ್ಡಿ, ಗಜ್ಜರಿ, ಹಕ್ಕರಕಿ, ಮೆಂತೆ ಪಲ್ಲೆ ಪಚಡಿ ಎಲ್ಲವನ್ನು ಎಣ್ಣಿಬುಟ್ಟಿಯಲ್ಲಿ ಇಟ್ಟುಕೊಂಡು ಬುಟ್ಟಿಗೆ ಬಿಳಿ ಬಟ್ಟೆಯನ್ನು ಕಟ್ಟಿಕೊಂಡು ಚಕ್ಕಡಿಯಲ್ಲಿ ಇಟ್ಟುಕೊಂಡು ಚಕ್ಕಡಿ ಇಲ್ಲದವರು ಹೊತ್ತುಕೊಂಡು ಹೊಲಕ್ಕೆ ಹೋಗುತ್ತಾರೆ.

ಮಹಿಳೆಯರು ಇಳಕಲ್ಲು ಟೋಪಿನ ಸೆರಗಿನ ಹೊಸ ರೇಷ್ಮೆಯ ಸೀರೆಯನ್ನುಟ್ಟುಕೊಂಡು, ಚಿನ್ನದ ಆಭರಣ ಹಾಕಿಕೊಂಡು ಒನಪು ವಯ್ಯಾರದಿಂದ ಹೊಲಕ್ಕೆ ಹೋಗುತ್ತಾರೆ.

ಎತ್ತುಗಳನ್ನು ಸಿಂಗರಿಸಿ ಜೂಲ ಹಾಕಿಕೊಂಡು ನಾ ಮುಂದೆ, ನೀ ಮುಂದೆ ಚಕ್ಕಡಿಗಳನ್ನು ಭರಾಟೆಯಿಂದ ಬಿಡುವರು. ಎತ್ತುಗಳ ಓಡುವ ಪ್ರದರ್ಶನದಂತೆ ಇರುತ್ತದೆ.

ಊಟದ ಸವಿ: ಎಣ್ಣೆ ಬುಟ್ಟಿಯಲ್ಲಿ ತಂದ ಅಡುಗೆಯನ್ನು ಬಿಚ್ಚಿ ಕುಟುಂಬದವರು , ಬೀಗರು, ನೆರೆಹೊರೆಯವರು ಮತ್ತು ಸ್ನೇಹಿತರು ಸಾಮೂಹಿಕವಾಗಿ ಗಂಟೆಗಟ್ಟಲೇ ಊಟ ಸವಿಯುತ್ತಾರೆ. ಹೊಲದ ಫಸಲಿನ ಇಳುವರಿ ಕುರಿತು ‘ ಕಾಕಾ ಈ ಸಲ ಗೋದಿ ಇಪ್ಪತ್ತು ಚೀಲ ಆದೀತನ, ಜ್ವಾಳಾ ಒಂದ ಮೂವತ್ತ ಚೀಲ ಆದೀತನ ‘ ಎಂದು ಲೆಕ್ಕಾಚಾರ ಹಾಕುತ್ತ ಊಟ ಸವಿಯುವರು. ಮತ್ತೆ ಹೊಲದಲ್ಲಿನ ಕಡಲೆ ಗಿಡ ಕಿತ್ತುಕೊಂಡು ಸವಿಯುತ್ತ ನೇಸರ ಅಸ್ತಂಗತನಾಗುತ್ತಿದ್ದಂತೆ ಗೂಡು ಸೇರುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !