ಜನ್ಮ ಶತಮಾನೋತ್ಸವ ಅರ್ಥಪೂರ್ಣವಾಗಿ ಆಚರಿಸೋಣ

7
ಮಾಜಿ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವಳಿ ಜಿಲ್ಲೆಗಳ ನಾಯಕರ ನಿರ್ಧಾರ

ಜನ್ಮ ಶತಮಾನೋತ್ಸವ ಅರ್ಥಪೂರ್ಣವಾಗಿ ಆಚರಿಸೋಣ

Published:
Updated:
Prajavani

ಚಿಕ್ಕಬಳ್ಳಾಪುರ: ಅವಿಭಜಿತ ಕೋಲಾರ ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದಿ, ಮಾಜಿ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಜನ್ಮ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಗರದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್, ‘ತಮ್ಮ ನಿಸ್ವಾರ್ಥ ಸೇವೆಯಿಂದ ಈ ಭಾಗದ ಜನರ ಬದುಕಿನಲ್ಲಿ ಗಣನೀಯ ಬದಲಾವಣೆ ತಂದ ಎಂ.ವಿ.ಕೃಷ್ಣಪ್ಪ ಅವರಂತಹ ಮಹನೀಯರ ಜನ್ಮಶತಮಾನೋತ್ಸವನ್ನು ಅವಳಿ ಜಿಲ್ಲೆಗಳ ಜನರು ಪಕ್ಷಾತೀತವಾಗಿ, ಜಾತಿಬೇಧವಿಲ್ಲದೆ ಅರ್ಥಪೂರ್ಣವಾಗಿ ಆಚರಿಸಿ ಅವರ ತ್ಯಾಗವನ್ನು ನೆನೆಯುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

‘ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾಗಿ ಭೂಗತ ಚಳವಳಿ ನಡೆಸಿದ ಕೃಷ್ಣಪ್ಪ ಅವರು, 1952ರಲ್ಲಿ ಅತಿ ಚಿಕ್ಕ ವಯಸ್ಸಿನ ಸಚಿವರಾಗಿ ನೆಹರೂ ಸಂಪುಟ ಸೇರಿದ್ದು ಸಣ್ಣ ಮಾತಲ್ಲ. ಕೃಷಿ ಇಲಾಖೆ ರಾಜ್ಯ ಖಾತೆ ಸಚಿವರಾಗಿದ್ದ ಅವರು ಕೃಷಿ ಕ್ಷೇತ್ರದಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದರು. ಕಡಿಮೆ ನೀರಿನಲ್ಲಿ ರೈತರು ನೆಮ್ಮದಿಯಿಂದ ಬದುಕುವಂತಾಗಲಿ ಎಂಬ ಉದ್ದೇಶಕ್ಕೆ ಹೈನುಗಾರಿಕೆಗೆ ಒತ್ತು ನೀಡಿದರು’ ಎಂದು ತಿಳಿಸಿದರು.

‘ಸಮಾಜದ ಒಳಿತಿಗಾಗಿ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿದ ಕೃಷ್ಣ ಅವರು ಮಕ್ಕಳಿಗಾಗಿ ಆಸ್ತಿ ಮಾಡಲಿಲ್ಲ. ಅವರು ಸ್ವಾರ್ಥಕ್ಕಾಗಿ ರಾಜಕೀಯಕ್ಕೆ ಬರಲಿಲ್ಲ. ಅವರಲ್ಲಿ ಆ ಭಾವನೆ ಇದಿದ್ದರೆ ಅವರ ಮಕ್ಕಳು ಈಗ ಯಾವುದಾದರೂ ಉನ್ನತ ಹುದ್ದೆಗಳಲ್ಲಿ ಇರುತ್ತಿದ್ದರು. ಆದರೆ ಇವತ್ತು ಅವರ ಮಕ್ಕಳು ಇವತ್ತು ಕೃಷಿ ಮಾಡಿಕೊಂಡು ಬದುಕುತ್ತಿದ್ದಾರೆ’ ಎಂದರು.

‘ಕೃಷ್ಣಪ್ಪ ಅವರ ಸೇವೆಯ ಋಣ ತೀರಿಸಬೇಕು. ಈ ನಿಟ್ಟಿನಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಣೆಗೆ ಮುಂದಾಗಿದ್ದೇ. ಈ ಕಾರ್ಯಕ್ರಮಕ್ಕೆ ಹಿರಿಯ ರಾಜಕೀಯ ಮುತ್ಸದಿಗಳಾದ ಎಚ್‌.ಡಿ.ದೇವೇಗೌಡ, ಎಸ್‌.ಎಂ.ಕೃಷ್ಣ, ಸಿದ್ದರಾಮಯ್ಯ ಅವರು ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸೋಣ. ಶೀಘ್ರದಲ್ಲಿಯೇ ಕೋಲಾರದಲ್ಲಿ ಮತ್ತೊಂದು ಸಭೆ ನಡೆಸಿ ಅದರಲ್ಲಿ ಕಾರ್ಯಕ್ರಮದ ದಿನಾಂಕ ನಿಗದಿ ಮಾಡೋಣ’ ಎಂದು ಹೇಳಿದರು.

‘ಕೃಷ್ಣಪ್ಪರ ಹೆಸರಿನಲ್ಲಿ ಡಿಪ್ಲೋಮಾ ಕಾಲೇಜು ಸ್ಥಾಪಿಸಬೇಕು. ಅದರಲ್ಲಿ ಎಸ್ಸೆಸ್ಸೆಲ್ಸಿ ವರೆಗೆ ಓದಿರುವವರು, ನಿರುದ್ಯೋಗಿಗಳು ಹೈನೋದ್ಯಮಕ್ಕೆ ಪೂರಕವಾದ ಕೋರ್ಸ್ ಮುಗಿಸಿ ಬದುಕು ಕಟ್ಟಿಕೊಳ್ಳುವಂತಾಗಬೇಕು. ಈ ವಿಚಾರವಾಗಿ ಕೃಷಿ ಸಚಿವರು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ‘ಬೇರೆ ಯಾವ ಜಿಲ್ಲೆಗಳಲ್ಲೂ ಈ ಭಾಗದಷ್ಟು ಹೈನುಗಾರಿಕೆ ಸಶಕ್ತವಾಗಿಲ್ಲ. ನಮ್ಮ ಹಾಲಿನ ಒಕ್ಕೂಟ ರಾಜ್ಯದಲ್ಲಿ ಎರಡನೇ ಸ್ಥಾನ ಗಳಿಸಿದೆ. ನಮ್ಮಲ್ಲಿ ಹೈನು ಉದ್ದಿಮೆ ಈ ಮಟ್ಟಕ್ಕೆ ಬೆಳೆಯಬೇಕಾದರೆ, ಜನರಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಬೇಕಾದರೆ ಕೃಷ್ಣಪ್ಪ ಅವರು ದೂರದೃಷ್ಟಿಯಿಂದ ಮಾಡಿದ ಯೋಜನೆಗಳೇ ಕಾರಣ’ ಎಂದು ಸ್ಮರಿಸಿಕೊಂಡರು.

‘ಎಲ್ಲರೂ ಸೇರಿ ಕೃಷ್ಣಪ್ಪ ಅವರ ಜನ್ಮಶತಮಾನೋತ್ಸವನ್ನು ರಾಜ್ಯಮಟ್ಟದ ಕಾರ್ಯಕ್ರಮವನ್ನಾಗಿ ರೂಪಿಸಬೇಕು. ಕೃಷ್ಣಪ್ಪನವರ ಒಡನಾಡಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಅವರ ಸೇವೆ ಸ್ಮರಿಸುವ ಕೆಲಸವಾಗಬೇಕು. ಅವರ ಹೆಸರಿನಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಬೇಕು. ಅವರ ಬಗ್ಗೆ ಯಾರಾದರೂ ಪುಸ್ತಕಗಳನ್ನು ಬರೆದಿದ್ದರೆ ಅವುಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಬೇಕು’ ಎಂದು ಸಲಹೆ ನೀಡಿದರು.

ಎಂ.ವಿ.ಕೃಷ್ಣಪ್ಪ ಅವರ ಪುತ್ರ ಅಶೋಕ್‌ ಕೃಷ್ಣಪ್ಪ ಅವರು ಮಾತನಾಡಿ ತಮ್ಮ ತಂದೆಯ ವ್ಯಕ್ತಿತ್ವದ ಬಗ್ಗೆ ಸ್ಮರಿಸಿಕೊಂಡರು. ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ಮಾಜಿ ಶಾಸಕರಾದ ಎಂ.ಸಿ.ಸುಧಾಕರ್, ಅನಸೂಯಮ್ಮ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡರಾದ ಕೆ.ಪಿ.ಶ್ರೀನಿವಾಸಮೂರ್ತಿ, ಯಲುವಹಳ್ಳಿ ರಮೇಶ್‌ ಸೇರಿದಂತೆ ಅನೇಕ ಗಣ್ಯರು ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !