ಕೈಗಾರೀಕರಣದ ಅಲೆಯಲ್ಲಿ ಕೊಚ್ಚಿ ಹೋದ ಕೃಷಿ

7
ವಿಚಾರ ಸಂಕಿರಣದಲ್ಲಿ ಸಾಹಿತಿ ಚಂದ್ರಶೇಖರ ನಂಗಲಿ ಅಭಿಪ್ರಾಯ

ಕೈಗಾರೀಕರಣದ ಅಲೆಯಲ್ಲಿ ಕೊಚ್ಚಿ ಹೋದ ಕೃಷಿ

Published:
Updated:
Prajavani

ಕೋಲಾರ: ‘ಅಲೆಮಾರಿಯಾಗಿದ್ದ ಆದಿಮಾನವನನ್ನು ಒಂದೆಡೆ ನೆಲೆ ನಿಲ್ಲುವಂತೆ ಮಾಡಿದ್ದು ಕೃಷೀಕರಣ. ಕೃಷಿಯನ್ನು ಮೊದಲು ಕಂಡುಹಿಡಿದದ್ದೇ ಹೆಣ್ಣು’ ಎಂದು ಸಾಹಿತಿ ಚಂದ್ರಶೇಖರ ನಂಗಲಿ ಹೇಳಿದರು.

ಇಲ್ಲಿ ಗುರುವಾರ ನಡೆದ ಮಹಿಳಾ ಸಂಸ್ಕೃತಿ ಉತ್ಸವದಲ್ಲಿ ‘ಕೃಷಿ, ನೀರು ಮತ್ತು ಮಹಿಳೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘ಗುಹೆಯಲ್ಲಿದ್ದ ಮಾನವ ಇಂದು ಸೌರವ್ಯೂಹದಿಂದ ಆಚೆಗೆ ಹೊಸ್ತಿಲು ದಾಟಿದ್ದಾನೆ’ ಎಂದರು.

‘ಆದಿಮಾನವ ಕೃಷಿ ಬಲ್ಲವನಾಗಿರಲಿಲ್ಲ. ಬೇಟೆಯು ಆಹಾರ ಪದ್ಧತಿ ಆಗಿತ್ತು. ಬೀಜ ಮೊಳಕೆಯೊಡೆಯುವ, ಮರು ಸಂತಾನ ಪ್ರಕ್ರಿಯೆಯಲ್ಲಿ ಹೆಣ್ಣು ಮೊದಲು ಕೃಷಿ ಕಂಡುಹಿಡಿದಳು. ಇದು ಆಹಾರ ಪದ್ಧತಿ, ಜೀವನ ಕ್ರಮ ಬದಲಿಸಿತು. ಸಾವಿರಾರು ವರ್ಷಗಳ ಸುಸ್ಥಿರ ಕೃಷಿಯು ಕೈಗಾರೀಕರಣದ ಅಲೆಯಲ್ಲಿ ಕೊಚ್ಚಿ ಹೋಗಿದೆ. ಈ ಕಾಲಘಟ್ಟದಲ್ಲೇ ಭೌಗೋಳಿಕ ಸಂಶೋಧನೆ ನಡೆದವು’ ಎಂದು ತಿಳಿಸಿದರು.

‘ಕೃಷಿ, ನೀರು ಮತ್ತು ಮಹಿಳೆ ಅಂತರ ಸಂಬಂಧಿಯಾದುದು. ನಾಗರೀಕತೆಯ ಕಾಲದಿಂದ 1960ರವರೆಗೆ ಕೃಷಿ ಸುಸ್ಥಿರವಾಗಿತ್ತು. ಆದರೆ, ಇಂದು ಜಗತ್ತಿನ ಎಲ್ಲಾ ಕಾಲುವೆಗಳು ಚರಂಡಿಗಳಾಗಿವೆ. ಈ ಬಗ್ಗೆ ಲೋಹಿಯಾ ಅವರು 1950ರಲ್ಲೇ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರು. ಇಂದು ಶುದ್ಧ ನದಿ ಮತ್ತು ಚರಂಡಿ ನೀರು ಒಂದೇ ಆಗಿದೆ. ನೀರು ಪಾತಾಳಕ್ಕೆ ಕುಸಿದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪೆರು ರಾಷ್ಟ್ರದಲ್ಲಿ ಯಾವ ನದಿಯೂ ಇಲ್ಲ. 3 ಕಡೆ ಮರುಭೂಮಿ ಮತ್ತು ಒಂದು ಕಡೆ ಕಡಲು ಹೊಂದಿರುವ ಆ ರಾಷ್ಟ್ರದಲ್ಲಿ ಜನ ಇಬ್ಬನಿ ಕೊಯ್ಲು ಮಾಡಿ ದಿನಕ್ಕೆ 12ರಿಂದ 18 ಲೀಟರ್ ನೀರು ಸಂಗ್ರಹಿಸುತ್ತಾರೆ. ತರಕಾರಿ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಪೆರು ರಾಷ್ಟ್ರಕ್ಕಿಂತ ಹೆಚ್ಚು ಮಳೆ ಸುರಿಯುತ್ತದೆ. ಆದರೆ, ಮಳೆ ಕೊಯ್ಲು ಪದ್ಧತಿ ಅನುಷ್ಠಾನವಾಗಿಲ್ಲ’ ಎಂದು ವಿಷಾದಿಸಿದರು.

‘ಜಿಲ್ಲೆಯ ರೈತರು ಖುಷ್ಕಿ ಮತ್ತು ತರಿ ಬೇಸಾಯ ಪದ್ಧತಿ ಕೈಬಿಡಬೇಕು. ನೀರಿನ ಅಭಾವವು ನೀರಿನ ಬಳಕೆಯಲ್ಲಿ ಹೊಸ ವಿಧಾನ ಕಲಿಸಿಕೊಟ್ಟಿದೆ. ಇದನ್ನು ಬದುಕಿಗೆ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಪ್ರತ್ಯೇಕಿಸುವುದು ಬೇಡ: ‘ನವ ಸಮಾಜದಲ್ಲಿ ಮಹಿಳಾ ತಲ್ಲಣಗಳು’ ಕುರಿತು ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ‘ಗಂಡು ಮಕ್ಕಳಿಗೆ ನೀಡುವ ಜೀವನ ಕೌಶಲದಿಂದ ಹೆಣ್ಣು ಮಕ್ಕಳನ್ನು ಪ್ರತ್ಯೇಕಿಸುವುದು ಬೇಡ. ಆ ಕೌಶಲವನ್ನು ಹೆಣ್ಣು ಮಕ್ಕಳಿಗೂ ಕಲಿಸಿ. ಹೆಣ್ಣು ಮಕ್ಕಳನ್ನು ಹೇಗೆ ಸೂಕ್ಷ್ಮತೆಯಿಂದ ಬೆಳೆಸುತ್ತೇವೋ ಅದೇ ಸೂಕ್ಷ್ಮತೆಯಿಂದ ಗಂಡು ಮಕ್ಕಳನ್ನೂ ಬೆಳೆಸಿ’ ಎಂದು ಸಲಹೆ ನೀಡಿದರು.

‘ಮಹಿಳೆಗೆ ಹಿಂದಿನ ಕಾಲದ ತಾರತಮ್ಯಗಳು ಈಗ ಇಲ್ಲದಿದ್ದರೂ ಹೊಸ ರೀತಿಯ ತಾರತಮ್ಯ ಹುಟ್ಟಿಕೊಳ್ಳುತ್ತಿದೆ. ಕಾಲ ಬದಲಾದರೂ ಮನಸ್ಥಿತಿ ಹಳೆಯದೇ ಇದೆ. ಹೆಣ್ಣನ್ನು ನಿರೀಕ್ಷೆಯ ಚೌಕಟ್ಟಿಗೆ ಸೀಮಿತಗೊಳಿಸಿದರೆ ತಲ್ಲಣದಿಂದ ವಿಶ್ವಾಸ ಕಳೆದುಕೊಳ್ಳುತ್ತಾಳೆ. ಹೆಣ್ಣು ಮಕ್ಕಳಿಗೆ ಅಭಿಪ್ರಾಯ ತಿಳಿಸಲು ಅವಕಾಶ ನೀಡಬೇಕು’ ಎಂದರು.

ಮಾಲೂರು ತಾಲ್ಲೂಕಿನ ದಿನ್ನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾರೆಡ್ಡಿ ‘ಲಿಂಗ ಸಮಾನತೆ’ ಕುರಿತು ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !