ಅಂಗನವಾಡಿ ಕಟ್ಟಡ ಕಾಮಗಾರಿ ಅಪೂರ್ಣ

7
ಸಭೆಯಲ್ಲಿ ಅಧಿಕಾರಿಗಳಿಗೆ ಜಿ.ಪಂ ಸಿಇಒ ಜಗದೀಶ್‌ ತರಾಟೆ

ಅಂಗನವಾಡಿ ಕಟ್ಟಡ ಕಾಮಗಾರಿ ಅಪೂರ್ಣ

Published:
Updated:
Prajavani

ಕೋಲಾರ: ‘2013ರಿಂದ ಈವರೆಗೂ ಸಂಪೂರ್ಣವಾಗಿ ಅಂಗನವಾಡಿ ಕೇಂದ್ರಗಳು ನಿರ್ಮಾಣವಾಗಿಲ್ಲ. ಇಂತಹ ಸಣ್ಣ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ನಾವೆಲ್ಲಾ ಯಾಕೆ ಬೇಕು?’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಜಿ.ಜಗದೀಶ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿ ಗುರುವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ಸಭೆಯಲ್ಲಿ ಮಾತನಾಡಿ, ‘ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವುದನ್ನು ಶೀಘ್ರವೇ ಇಲಾಖೆಗೆ ಹಸ್ತಾಂತರ ಮಾಡಿ’ ಎಂದು ಎಂಜಿನಿಯರ್‌ಗಳಿಗೆ ಸೂಚಿಸಿದರು.

‘2014–15ರಲ್ಲಿ ಅಂಗನವಾಡಿ ಮಂಜೂರಾಗಿದ್ದರೂ ಇನ್ನೂ ಕಟ್ಟಡ ನಿರ್ಮಿಸಿಲ್ಲ. ಅದನ್ನೇ ಮರು ಗುತ್ತಿಗೆಗೆ ನೀಡಿದ್ದರೂ ನಿರ್ಮಾಣಕ್ಕೆ ಮುಂದಾಗಿಲ್ಲ. ನೀವು ವಿಧಾನಸೌಧದಂತಹ ದೊಡ್ಡ ಕಟ್ಟಡ ನಿರ್ಮಿಸುತ್ತಿಲ್ಲ. ಮಕ್ಕಳಿಗಾಗಿ ಸಣ್ಣ ಅಂಗನವಾಡಿ ಕಟ್ಟಡ ಕಟ್ಟುತ್ತಿದ್ದೀರಿ. ಈ ಕೆಲಸಕ್ಕೆ ಮೂರು ವರ್ಷ ಬೇಕೇ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯಾವುದೇ ಕಾಮಗಾರಿಗೆ ಸಣ್ಣಪುಟ್ಟ ಅಡೆತಡೆ ಸಹಜ. ಅಡೆತಡೆ ನಿವಾರಣೆಗೆ ನಾವಿದ್ದೇವೆ. 2014-15ರಿಂದಲೂ ಶ್ರೀನಿವಾಸಪುರ ತಾಲ್ಲೂಕಿನ ಕಂಬಾಲಪಲ್ಲಿಯ ಅಂಗನವಾಡಿ ಸ್ಥಳದ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಈವರೆಗೆ ಎಷ್ಟು ಸಿಇಒಗಳು ಬದಲಾಗಿದ್ದಾರೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾರ್ಚ್‌ ಗಡುವು: ‘ಮಾರ್ಚ್‌ ಅಂತ್ಯದೊಳಗೆ ಶೌಚಾಲಯ ನಿರ್ಮಿಸಬೇಕು. ಇಷ್ಟಕ್ಕೆ ಜವಾಬ್ದಾರಿ ಮುಗಿಯಿತೆಂದು ಬೇಕಾಬಿಟ್ಟಿ ಕೆಲಸ ಮಾಡಿ ಮುಗಿಸುವುದಲ್ಲ. ಶೌಚಾಲಯ ಮಕ್ಕಳ ಬಳಕೆಗೆ ಅನುಕೂಲಕರವಾಗಿರಬೇಕೇ ಹೊರತು ಹಿರಿಯರು ಬಳಸುವಂತೆ ನಿರ್ಮಿಸುವುದಲ್ಲ. ವಸ್ತುಗಳು ಸ್ಥಳೀಯವಾಗಿ ಸಿಗದಿದ್ದರೆ ಬೆಂಗಳೂರಿನಿಂದ ತರಿಸಿ ಹಾಕಬೇಕು’ ಎಂದು ಆದೇಶಿಸಿದರು.

ಅಂಗನವಾಡಿ ದುರಸ್ತಿ: ‘ಜಿಲ್ಲೆಯಲ್ಲಿ ಸಾಕಷ್ಟು ಅಂಗನವಾಡಿ ಕಟ್ಟಡಗಳ ದುರಸ್ತಿ ಆಗಬೇಕಿದ್ದು, ನರೇಗಾ ಯೋಜನೆಯಲ್ಲಿ ಸಾಧ್ಯವಾದರೆ ಅವಕಾಶ ಕಲ್ಪಿಸಿ’ ಎಂದು ಅಧಿಕಾರಿಗಳು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ‘ನರೇಗಾ ಅಡಿ ದುರಸ್ತಿ ಕಾಮಗಾರಿ ನಡೆಸುವುದು ಅಸಾಧ್ಯ. ಹೊಸ ಕಟ್ಟಡಗಳ ನಿರ್ಮಾಣವಷ್ಟೇ ಸಾಧ್ಯ. ಈಗಾಗಲೇ ಅನೇಕ ಕಡೆ ಕಟ್ಟಡ ನಿರ್ಮಿಸಲಾಗುತ್ತಿದೆ. ಅಗತ್ಯವಿದ್ದರೆ ಕಾಂಪೌಂಡ್‌ ನಿರ್ಮಿಸಬಹುದು. ಕಾಮಗಾರಿ ಕುರಿತು ವಿನಾಕಾರಣ ಬಿಲ್‌ ನೀಡಬಾರದು’ ಎಂದು ಎಚ್ಚರಿಕೆ ನೀಡಿದರು.

251 ಅಂಗನವಾಡಿ ಮಂಜೂರು: ‘ವಿವಿಧ ಯೋಜನೆಗಳಡಿ 251 ಅಂಗನವಾಡಿ ಕಟ್ಟಡ ಮಂಜೂರಾಗಿದ್ದು, 151 ಕಟ್ಟಡಗಳನ್ನು ಪೂರ್ಣಗೊಳಿಸಲಾಗಿದೆ. 80 ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ. 20 ಕಟ್ಟಡಗಳ ಕಾಮಗಾರಿ ಕಾರಣಾಂತರದಿಂದ ಆರಂಭವಾಗಿಲ್ಲ. 355 ಶೌಚಾಲಯಗಳ ಪೈಕಿ 298 ಪೂರ್ಣಗೊಂಡಿವೆ. 3 ಶೌಚಾಲಯಗಳ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು 54ರ ಕಾಮಗಾರಿ ಆರಂಭಿಸಬೇಕಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಸೌಮ್ಯ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !