ಸುಳ್ಳು ಹಾಜರಾತಿ ತೋರಿಸಿದರೆ ಅಮಾನತು

7
ಅಧಿಕಾರಿಗಳಿಗೆ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್‌ ಖಡಕ್‌ ಎಚ್ಚರಿಕೆ

ಸುಳ್ಳು ಹಾಜರಾತಿ ತೋರಿಸಿದರೆ ಅಮಾನತು

Published:
Updated:
Prajavani

ಕೋಲಾರ: ‘ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ಬಾರದಿದ್ದರೂ ದಾಖಲಾತಿ ಪುಸ್ತಕದಲ್ಲಿ ಹಾಜರಾತಿ ತೋರಿಸಿದರೆ ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡುತ್ತೇನೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಗುರುವಾರ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ನಾನು ಅಂಗನವಾಡಿಗಳಿಗೆ ಭೇಟಿ ನೀಡಿದಾಗ ಮಕ್ಕಳೇ ಇರುವುದಿಲ್ಲ. ಆದರೆ, ತಿಂಗಳಿಡೀ ಮಕ್ಕಳು ಕೇಂದ್ರಕ್ಕೆ ಬಂದಿದ್ದಾರೆ ಎಂದು ಹಾಜರಾತಿ ಪುಸ್ತಕದಲ್ಲಿ ನಮೂದಾಗಿರುತ್ತದೆ. ಇದು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.

‘ಬಹಳಷ್ಟು ಕೇಂದ್ರಗಳಲ್ಲಿ ಹಳೆಯ ಆಹಾರ ಸಾಮಗ್ರಿಗಳು ಉಳಿದಿದ್ದು, ಅವುಗಳನ್ನೇ ಮಕ್ಕಳಿಗೆ ನೀಡಲಾಗುತ್ತಿದೆ. ಹೊಸ ಆಹಾರ ಪದಾರ್ಥಗಳು ಏನಾಗಿವೆ ಎಂದು ಕಾರ್ಯಕರ್ತರನ್ನು ಕೇಳಿದರೆ ಖಾಲಿ ಆಗಿರುವುದಾಗಿ ಹೇಳುತ್ತಾರೆ. ಅವರೇ ಬ್ಯಾಗಿಗೆ ತುಂಬಿಸಿಕೊಂಡು ಸಾಗಿಸಿರಬಹುದು’ ಎಂದು ಅನುಮಾನ ವ್ಯಕ್ತಪಡಿಸಿದರು.

‘ಅಂಗನವಾಡಿ ಕಾರ್ಯಕರ್ತರು ಬಡ ಮಕ್ಕಳ ಪರವಾಗಿ ಪ್ರತಿಭಟನೆ ಮಾಡಲಿ. ಅದು ಬಿಟ್ಟು ವೈಯಕ್ತಿಕ ವಿಚಾರಗಳಿಗೆ ಅಥವಾ ಖಾಸಗಿ ವ್ಯಕ್ತಿಗಳ ಪರವಾಗಿ ಹೋರಾಟ ಮಾಡುತ್ತಾರೆ. ಇದನ್ನೆಲ್ಲಾ ಹೇಗೆ ಸಹಿಸುವುದು. ಅಂತಹ ಕಾರ್ಯಕರ್ತರನ್ನು ಕೆಲಸದಿಂದ ವಜಾಗೊಳಿಸಿ. ಇಲ್ಲವೇ, ಅವರ ತಪ್ಪಿಗೆ ಸಿಡಿಪಿಒಗಳು ಶಿಕ್ಷೆ ಎದುರಿಸಲು ಸಿದ್ಧರಾಗಿ’ ಎಂದು ಕೆಂಡಾಮಂಡಲರಾದರು.

ಸಮರ್ಪಕ ಮಾಹಿತಿ ನೀಡಿ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ವ್ಯತ್ಯಾಸ ಇರುವುದನ್ನು ಗಮನಿಸಿದ ಸಿಇಒ, ‘ಜನವರಿ 3ನೇ ವಾರದೊಳಗೆ ಸಮರ್ಪಕ ಮಾಹಿತಿ ನೀಡಿ’ ಎಂದು ಸೂಚಿಸಿದರು.

‘ಸಭೆಯಲ್ಲಿ ನೀವು ನೀಡಿದ ತಪ್ಪು ಮಾಹಿತಿ ಆಧರಿಸಿ ನಾನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ತಪ್ಪು ಮಾಹಿತಿ ನೀಡಲು ಆಗುವುದಿಲ್ಲ. ಮಕ್ಕಳ ಆರೋಗ್ಯ ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ನೀಡಬೇಕು. ಸರ್ಕಾರಿ ಆಸ್ಪತ್ರೆಯಲ್ಲೇ ಇದ್ದು ಎಷ್ಟು ಮಂದಿ ಅಪೌಷ್ಟಿಕ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ?’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌, ‘ಜಿಲ್ಲೆಯಲ್ಲಿ 125 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಮಕ್ಕಳಿಗೆ ಆಸ್ಪತ್ರೆಯಲ್ಲಿ 28 ಹಾಸಿಗೆ ಸೌಲಭ್ಯವಿದೆ. ಆದರೆ, ಮಕ್ಕಳ ತಜ್ಞರ ಕೊರತೆಯಿಂದ ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳು ದಾಖಲಾಗುತ್ತಿಲ್ಲ’ ಎಂದು ಮಾಹಿತಿ ನೀಡಿದರು.

ಕಾಳಜಿ ಇರಲಿ: ‘ಒಬ್ಬರೂ ದಾಖಲಾಗಿಲ್ಲವೆಂದರೆ ಏನು ಅರ್ಥ. ಅಂಗನವಾಡಿ ಕೇಂದ್ರಗಳಿಗೆ ದಾಖಲಾಗಿರುವ ಎಷ್ಟು ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿದ್ದೀರಾ? 2 ಇಲಾಖೆಗಳ ನಡುವೆ ಸಮನ್ವಯವಿಲ್ಲ. ನಿಮ್ಮ ಮಕ್ಕಳಾಗಿದ್ದರೆ ಇದೇ ರೀತಿ ನಡೆದುಕೊಳ್ಳುತ್ತಿದ್ದೀರಾ? ಸರ್ಕಾರಿ ಆಸ್ಪತ್ರೆಗೆ ಬರುವವರು ಬಹುತೇಕ ಬಡವರ ಮಕ್ಕಳು. ಅವರ ಬಗ್ಗೆ ಕಾಳಜಿ ಇರಲಿ’ ಎಂದು ತಾಕೀತು ಮಾಡಿದರು.

‘ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಇದಕ್ಕೆ ಸಂಬಂಧಪಟ್ಟ ಫೋಟೊ ದಾಖಲು ಮಾಡಬೇಕು. ತಪಾಸಣೆ ದಿನಾಂಕವನ್ನು 2 ದಿನ ಮುಂಚಿತವಾಗಿ ಸಿಡಿಪಿಒಗಳಿಗೆ ತಿಳಿಸಬೇಕು. ಇದರಿಂದ ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಾರೆ’ ಎಂದು ಹೇಳಿದರು.

ಬಾಣಂತಿಯರು ಬರುತ್ತಿಲ್ಲ: ‘ಮಾತೃಪೂರ್ಣ ಯೋಜನೆಯಡಿ ಬಾಣಂತಿಯರಿಗೆ ಸೌಕರ್ಯ ಕಲ್ಪಿಸಲಾಗುತ್ತಿದೆ. ಆದರೆ, ಯಾವ ಕೇಂದ್ರಕ್ಕೂ ಫಲಾನುಭವಿಗಳು ಬರುವುದಿಲ್ಲ. ಯೋಜನೆಯಡಿ ಬಿಡುಗಡೆಯಾಗುವ ಸೌಕರ್ಯಗಳು ಎಲ್ಲಿಗೆ ಹೋಗುತ್ತಿವೆ?’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಸೌಮ್ಯ, ‘ಮಾತೃಪೂರ್ಣ ಯೋಜನೆ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಬರುತ್ತಿಲ್ಲ’ ಎಂದರು.

‘ಪ್ರಧಾನಮಂತ್ರಿ ವಂದನಾ ಯೋಜನೆಯರಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ವಿವಿಧ ಸೌಕರ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯಲ್ಲಿ 3 ವರ್ಷಗಳಲ್ಲಿ 47 ಬಾಲ್ಯವಿವಾಹ ಪ್ರಕರಣ ಪತ್ತೆಯಾಗಿವೆ. ಬಾಲ್ಯವಿವಾಹ ತಡೆಗೆ ಪ್ರತಿಯೊಬ್ಬರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್, ಬಂಗಾರಪೇಟೆ ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !