ಮೈಕೊರೆಯುವ ಚಳಿಗೆ ನಡುಗಿದ ರಾಜ್ಯ

7

ಮೈಕೊರೆಯುವ ಚಳಿಗೆ ನಡುಗಿದ ರಾಜ್ಯ

Published:
Updated:
Prajavani

ಬೆಂಗಳೂರು: ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಶೀತಗಾಳಿ ಬೀಸುತ್ತಿದ್ದು, ಮೈಕೊರೆಯುವ ಚಳಿಗೆ ರಾಜ್ಯ ಗಡಗಡ ನಡುಗುವಂತಾಗಿದೆ.

ಗುರುವಾರ, ಬೀದರ್ ಮತ್ತು ದಾವಣಗೆರೆಯಲ್ಲಿ 8 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ. ರಾಜಧಾನಿಯನ್ನೂ ಚಳಿ ಥರಗುಟ್ಟುವಂತೆ ಮಾಡಿದೆ.

‌‘ಕಳೆದ ಮೂರು ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಬೀದರ್, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 5 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್‌.ಶ್ರೀನಿವಾಸ ರೆಡ್ಡಿ ಹೇಳಿದರು.

‘ಬೆಂಗಳೂರಿನ ಉತ್ತರ ಭಾಗದಲ್ಲಿ ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ದಕ್ಷಿಣ ಭಾಗದಲ್ಲಿ 11 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಆದರೆ, ಇದೇನು ದಾಖಲೆಯ ಕನಿಷ್ಠ ಉಷ್ಣಾಂಶವಲ್ಲ. 1984ರಲ್ಲಿ ನಗರದ ಕನಿಷ್ಠ ತಾಪಮಾನ 7.8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ಅದೇ ಇಲ್ಲಿಯವರೆಗಿನ ದಾಖಲೆಯ ಕನಿಷ್ಠ ಉಷ್ಣಾಂಶವಾಗಿದೆ. 2009ರಲ್ಲಿ ತಾಪಮಾನ 12.1 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು.

ಉತ್ತರ ಭಾರತದಿಂದ ದಕ್ಷಿಣದೆಡೆಗೆ ಪ್ರಬಲವಾಗಿ ಶೀತಗಾಳಿ ಬೀಸುತ್ತಿರುವುದೇ ತಾಪಮಾನ ಇಷ್ಟೊಂದು ಕುಸಿಯಲು ಕಾರಣ. ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳು ಸಹ ಶೀತಗಾಳಿಯ ‘ಬಿಸಿ’ಯನ್ನು ಅನುಭವಿಸುತ್ತಿದ್ದು, ಈ ರಾಜ್ಯಗಳ ಗಡಿಗೆ ಹೊಂದಿಕೊಂಡ ರಾಜ್ಯದ ಜಿಲ್ಲೆಗಳಲ್ಲೂ ಚಳಿಯ ತೀವ್ರತೆ ಹೆಚ್ಚಾಗಿದೆ.

‘ಸಾಮಾನ್ಯವಾಗಿ ಡಿಸೆಂಬರ್‌ ಹಾಗೂ ಜನವರಿಯಲ್ಲಿ ಚಳಿ ಜಾಸ್ತಿಯಾಗುತ್ತದೆ. ಆದರೆ, ಈ ವರ್ಷ ತುಸು ತಡವಾಗಿ ಚಳಿ ಕಾಣಿಸಿಕೊಂಡಿದೆ. ಉತ್ತರದಿಂದ ಬೀಸಿದ ಶೀತಗಾಳಿಯ ಪ್ರಭಾವವೂ ಸೇರಿದೆ. ಕೆಲವೇ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ’ ಎಂದು ಹವಾಮಾನ ತಜ್ಞರು ತಿಳಿಸಿದರು.

‘ಬೆಳಗಿನ 4ರಿಂದ 7ರವರೆಗೆ ಚಳಿಯ ತೀವ್ರತೆ ಹೆಚ್ಚಿರಲಿದ್ದು, ಈ ಅವಧಿಯಲ್ಲಿ ವಾಯುವಿಹಾರ ಹಾಗೂ ವ್ಯಾಯಾಮಕ್ಕೆ ಹೋಗುವವರು ತುಂಬಾ ಎಚ್ಚರಿಕೆಯಿಂದ ಇರಬೇಕು. ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು, ಎಲುಬು–ಕೀಲು ನೋವಿನಿಂದ ಬಳಲುತ್ತಿರುವವರು ಈ ಅವಧಿಯಲ್ಲಿ ಮನೆಯಿಂದ ಹೊರಹೋಗದಿರುವುದು ಉತ್ತಮ’ ಎಂಬುದು ತಜ್ಞರ ಸಲಹೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !