ಕೂಲಿ ಕಾರ್ಮಿಕನ ಕೈ ಕತ್ತರಿಸಿದ ರೌಡಿ ಗ್ಯಾಂಗ್ 

7

ಕೂಲಿ ಕಾರ್ಮಿಕನ ಕೈ ಕತ್ತರಿಸಿದ ರೌಡಿ ಗ್ಯಾಂಗ್ 

Published:
Updated:

ಬೆಂಗಳೂರು: ರೌಡಿ ಗಂಗಾಧರ ಎಂಬಾತನನ್ನು ಕೊಲೆ ಮಾಡಲು ಬಾಗಲಗುಂಟೆ ಸಮೀಪದ ಮಂಜುನಾಥ್ ನಗರದ ಮನೆಯೊಂದಕ್ಕೆ ನುಗ್ಗಿದ್ದ ರೌಡಿ ಗ್ಯಾಂಗ್, ಮನೆಯಲ್ಲಿದ್ದ ಗಂಗಾಧರನ ಸ್ನೇಹಿತ ಸಂತೋಷ್‌ ಎಂಬುವರ ಕೈ ಕತ್ತರಿಸಿದೆ.

‘ಬೆಳಗಾವಿ ಜಿಲ್ಲೆಯ ಸವದತ್ತಿಯ ಸಂತೋಷ್, ಎಂಟು ವರ್ಷಗಳ ಹಿಂದೆ ನಗರಕ್ಕೆ ಬಂದು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ತೀವ್ರವಾಗಿ ಗಾಯಗೊಂಡಿರುವ ಅವರನ್ನು ಹಾಸ್‌ಮ್ಯಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು, ಶಸ್ತ್ರಚಿಕಿತ್ಸೆ ಮೂಲಕ ಕೈಯನ್ನು ಮರು ಜೋಡಣೆ ಮಾಡಿದ್ದಾರೆ’ ಎಂದು ಬಾಗಲಗುಂಟೆ ಪೊಲೀಸರು ಹೇಳಿದರು.

‘ಸಂತೋಷ್, ಅಮಾಯಕ. ಕೂಲಿ ಕಾರ್ಮಿಕರಾಗಿದ್ದ ಚಂದ್ರು, ರಾಜು ಮತ್ತು ರಂಗಸ್ವಾಮಿ ಎಂಬುವರ ಜೊತೆಯಲ್ಲಿ ವಾಸವಿದ್ದರು. ಅವರ ಸ್ನೇಹಿತನಾದ ಗಂಗಾಧರ್ ಸಹ ಅದೇ ಮನೆಯಲ್ಲೇ ಆಶ್ರಯ ಪಡೆದಿದ್ದ. ಆ ವಿಷಯ ತಿಳಿದ ರೌಡಿ ಜಗದೀಶ್‌ ಹಾಗೂ ಸಹಚರರು, ಬುಧವಾರ ರಾತ್ರಿ ಮನೆಗೆ ನುಗ್ಗಿದ್ದರು. ಗಂಗಾಧರ್‌ನ ಮೇಲೆ ಹಲ್ಲೆ ನಡೆಸುವ ವೇಳೆ ಸಂತೋಷ್‌, ಚಂದ್ರು, ರಾಜು ಮತ್ತು ರಂಗಸ್ವಾಮಿ ಮೇಲೂ ಮಚ್ಚು ಬೀಸಿದ್ದರು. ಅದರಿಂದಾಗಿ ಸಂತೋಷ್ ಅವರ ಕೈ ಶೇ 75ರಷ್ಟು ತುಂಡಾಗಿತ್ತು’ ಎಂದರು.

‘ಘಟನೆಯಲ್ಲಿ ಗಂಗಾಧರ್‌ ಹಾಗೂ ನಾಲ್ವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅವರು ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’ ಎಂದರು.

ಬಾರ್‌ ಗಲಾಟೆಗೆ ಪ್ರತೀಕಾರ: ‘ಗಂಗಾಧರ್ ಹಾಗೂ ಜಗದೀಶ್‌ ವಿರುದ್ಧ ಬಾಗಲಗುಂಟೆ ಹಾಗೂ ಪೀಣ್ಯ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿದೆ. ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ ಅವರು, ಜಾಮೀನು ಮೇಲೆ ಹೊರಗೆ ಬಂದಿದ್ದರು. ಹದಿನೈದು ದಿನಗಳ ಹಿಂದಷ್ಟೇ ಬಾರೊಂದರಲ್ಲಿ ಇಬ್ಬರಿಗೂ ಗಲಾಟೆ ಆಗಿತ್ತು. ಅದಕ್ಕೆ ಪ್ರತೀಕಾರವಾಗಿ ಜಗದೀಶ್, ಈ ಕೃತ್ಯ ಎಸಗಿದ್ದಾನೆ. ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !