ಬರ ಪರಿಹಾರ; ನಿರ್ಲಕ್ಷ್ಯ ಸಲ್ಲ

7
ಜನರಿಂದ ದೂರು ಕೇಳಿಬಂದರೆ ನೀವೆ ಹೊಣೆ: ಅಧಿಕಾರಿಗಳಿಗೆ ಸಿದ್ದರಾಮಯ್ಯ ಎಚ್ಚರಿಕೆ

ಬರ ಪರಿಹಾರ; ನಿರ್ಲಕ್ಷ್ಯ ಸಲ್ಲ

Published:
Updated:
Prajavani

ಬಾಗಲಕೋಟೆ: ’ಬಾದಾಮಿ ಕ್ಷೇತ್ರದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಜನ ಉದ್ಯೋಗ ಅರಸಿ ಗುಳೇ ಹೋಗಬಾರದು. ಜಾನುವಾರುಗಳಿಗೆ ಮೇವಿನ ಕೊರತೆ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ನಿಮಗೆ ಸಸ್ಪೆಂಡ್ ಶಿಕ್ಷೆ ಕಾದಿದೆ’ ಎಂದು ಶಾಸಕ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಬಾದಾಮಿಯ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಶುಕ್ರವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ’ಬರ ಪರಿಹಾರ ಎಂದರೆ ಮೊದಲು ಜನರಿಗೆ ಉದ್ಯೋಗ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೊಡುವುದು. ನಂತರ ಪರಿಹಾರದ ವಿಚಾರ’ ಎಂದು ಅಧಿಕಾರಿಗಳಿಗೆ ಪಾಠ ಹೇಳಿದರು.

ಮೇವಿನ ದುಃಸ್ವಪ್ನ: ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಶ್ರೀಕಾಂತ ಸಬನೀಸ ಸಭೆಗೆ ತಾಲ್ಲೂಕಿನಲ್ಲಿ ಮೇವಿನ ಲಭ್ಯತೆ ಬಗ್ಗೆ ನೀಡಿದ ಮಾಹಿತಿ ಸಿದ್ದರಾಮಯ್ಯ ಅವರನ್ನು ಕೆರಳಿಸಿತು. 25 ವಾರಗಳಿಗೆ ಆಗುವಷ್ಟು ಮೇವಿನ ಸಂಗ್ರಹ ನಮ್ಮಲ್ಲಿ ಇದೆಯಾದರೂ ಮಾರ್ಚ್‌ ನಂತರ ಒಂದಷ್ಟು ಕೊರತೆ ಉಂಟಾಗಬಹುದು ಎಂದು ಶ್ರೀಕಾಂತ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನೀವು 25 ವಾರಕ್ಕೆ ಸಾಕಾಗುವಷ್ಟು ಮೇವು ದಾಸ್ತಾನು ಇದೆ ಎಂದು ಹೇಳಿದ್ದೀರಿ. ನಿಮ್ಮ ಲೆಕ್ಕದಲ್ಲಿ ಇನ್ನೂ ಆರು ತಿಂಗಳು ಸಮಸ್ಯೆ ಇರೊಲ್ಲ. ಆದರೂ ಮಾರ್ಚ್‌ ನಂತರ ಕೊರತೆಯಾಗಲಿದೆ ಎನ್ನುತ್ತೀರಿ. ಯಾವುದು ಸರಿ’ ಎಂದು ಪ್ರಶ್ನಿಸಿದರು. ಆಗ ಅಧಿಕಾರಿ ತಬ್ಬಿಬ್ಬಾದರು.

ಆಗ ಮಧ್ಯಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ‘ಅಧಿಕಾರಿ ಹೋಂ ವರ್ಕ್ ಮಾಡಿಕೊಂಡು ಬಂದಿಲ್ಲ’ ಎಂದರು. ಅದಕ್ಕೆ ಒಪ್ಪದ ಸಿದ್ದರಾಮಯ್ಯ, ‘ಇದೆಲ್ಲಾ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿ. ಅವರು ಹೇಳುತ್ತಿರುವುದು ವಾಸ್ತವ ಅಲ್ಲ. ಕಚೇರಿಯಲ್ಲಿ ಕುಳಿತು ಅಂದಾಜು ಮಾಡುವುದರಿಂದ ಈ ಸಮಸ್ಯೆ ಆಗಲಿದೆ’ ಎಂದು ಹೇಳಿದರು. ಮುಂದಿನ 10 ನಿಮಿಷ ಕಾಲ ತಲಸ್ಪರ್ಶಿ ಆಡಳಿತದ ಬಗ್ಗೆ ಆ ಅಧಿಕಾರಿಗೆ ಸಿದ್ದರಾಮಯ್ಯ ಪಾಠ ಹೇಳಿದರು. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜಾನುವಾರುಗಳ ಸಮೀಕ್ಷೆ ನಡೆಸಿ ಮೇವಿನ ನಿಖರ ಬೇಡಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ವಾರದೊಳಗೆ ಜಿಲ್ಲಾಧಿಕಾರಿಗೆ ವರದಿ ನೀಡುವಂತೆ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸುಳ್ಳು ಹೇಳಿ ಸಿಲುಕಿಕೊಂಡರು: ಉದ್ಯೋಗ ಖಾತರಿ ಯೋಜನೆಯಡಿ ಈಗಾಗಲೇ 5.46 ಲಕ್ಷ ಮಾನವ ದಿನಗಳಿಗೆ ಉದ್ಯೋಗ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಹಾಗಾದರೆ ಎಷ್ಟು ದಿನಕ್ಕೊಮ್ಮೆ ಬಟವಾಡೆ (ಕೂಲಿ) ಮಾಡುತ್ತೀರಿ ಎಂದು ಕೇಳಿದರು. ಅದಕ್ಕೆ ಅಧಿಕಾರಿ ವಾರಕ್ಕೊಮ್ಮೆ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಸುಳ್ಳು ಹೇಳಲು ಹೋಗಬೇಡಿ. ಜಗತ್ತಿನಲ್ಲಿ ಎಲ್ಲಿಯೂ ವಾರಕ್ಕೊಮ್ಮೆ ಬಟವಾಡೆ ಮಾಡಿಲ್ಲ ಎಂದರು. ಆಗ ಇಒ 15 ದಿನಕ್ಕೊಮ್ಮೆ ಕೊಡುತ್ತಿದ್ದೇವೆ ಎಂದರು. ಅಭಿವೃದ್ಧಿ ಎಂದರೆ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಲ್ಲ. ನಿಮಗೆ ವಾಹನ ಕೊಟ್ಟಿಲ್ಲವೇ. ಹಳ್ಳಿಗಳಿಗೆ ಹೋಗಿ ವಾಸ್ತವಾಂಶ ಅರಿತುಕೊಳ್ಳಿ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯದರ್ಶಿಗೆ ಸಿದ್ದರಾಮಯ್ಯ ಸೂಚಿಸಿದರು.

ಉದ್ಯೋಗ ಖಾತರಿಯಡಿ ಕೆಲಸ ಮಾಡಿದವರಿಗೆ ಒಂದು ವಾರದೊಳಗೆ ಪಗಾರ ಕೊಡಿ, ಇಲ್ಲದಿದ್ದರೆ ನಿಮ್ಮನ್ನೇ ಹೊಣೆಗಾರರನ್ನಾಗಿಸುವುದಾಗಿಯೂ ತಾಕೀತು ಮಾಡಿದರು. 

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ಎಸ್‌ಪಿ ಸಿ.ಬಿ.ರಿಷ್ಯಂತ್, ಸಿಇಒ ಗಂಗೂಬಾಯಿ ಮಾನಕರ ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !